ಠಾಕೂರ್ ಸಮುದಾಯಕ್ಕೆ ಹೊಸ ನಿಯಮ ಜಾರಿ

ಬನಸ್ಕಾಂಥ್,ಫೆ.೨೧-ಗುಜರಾತ್‌ನಲ್ಲಿರುವ ಬಲಿಷ್ಠ ಮತ್ತು ಹೆಚ್ಚು ಜನಸಂಖ್ಯೆಯುಳ್ಳ ಠಾಕೂರ್ ಸಮಾಜ ತನ್ನ ಸಮುದಾಯದ ಜನರಿಗೆ ಹೊಸ ನಿಯಮಗಳನ್ನು ರೂಪಿಸಿ ಜಾರಿಗೆ ತಂದಿದೆ.

ಈ ನಿಯಮದಲ್ಲಿ ಸಮುದಾಯದವರಿಗೆ ಸಾಮೂಹಿಕ ವಿವಾಹ ಆಯೋಜನೆ, ಅವಿವಾಹಿತ ಹೆಣ್ಣು ಮಕ್ಕಳಿಗೆ ಮೊಬೈಲ್ ನಿಷೇಧ ಸೇರಿದಂತೆ ಕೆಲ ಕಟ್ಟುಪಾಡುಗಳನ್ನು ವಿಧಿಸಿ ಎಲ್ಲ ಜನರು ಪಾಲಿಸಬೇಕು ಎಂದು ಕರೆ ನೀಡಿದೆ.
ಬನಸ್ಕಾಂಥ್ ಜಿಲ್ಲೆಯ ಭಾಭಾರ್ ತಾಲೂಕಿನ ಲುನ್ಸೆಲಾದಲ್ಲಿ ಸಂತಶ್ರೀ ಸದಾರಾಮ್ ಬಾಪಾ ಅವರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಠಾಕೂರ್ ಸಮಾಜದ ಸದಸ್ಯರು ತಮ್ಮ ಸಮುದಾಯದ ಸಂಪ್ರದಾಯಗಳಿಗೆ ಸುಧಾರಣೆಗಳನ್ನು ತರಲು ೧೧ ಹೊಸ ನಿಯಮಗಳನ್ನು ಪರಿಚಯಿಸಿದರು.

ಮದುವೆಗಳಲ್ಲಿ ಡಿಜೆಗಳ ಮೇಲೆ ಸಂಪೂರ್ಣ ನಿಷೇಧ, ವಿವಾಹದ ವೇಳೆ ಉಡುಗೊರೆಗಳ ಬದಲಿಗೆ ನಗದು ಹಣವನ್ನೇ ನೀಡುವುದು, ವರ ಮತ್ತು ವಧುವಿಗೆ ದೈನಂದಿನ ಜೀವನಕ್ಕೆ ಉಪಯುಕ್ತವಾದ ಉಡುಗೊರೆಗಳನ್ನು ಮಾತ್ರ ನೀಡಬೇಕು. ನಿಶ್ಚಿತಾರ್ಥ ಮತ್ತು ಸಣ್ಣ ವಿವಾಹಗಳಲ್ಲಿ ಕೇವಲ ೧೧ ಜನರು ಮಾತ್ರ ಹಾಜರಿದ್ದರೆ ಸಾಕು. ದೊಡ್ಡ ಮದುವೆ ಸಮಾರಂಭದಲ್ಲಿ ಕೇವಲ ೫೧ ಜನರಿಗೆ ಅವಕಾಶ ನೀಡುವ ಜೊತೆಗೆ ಸಾಮೂಹಿಕ ವಿವಾಹಗಳನ್ನು ಆಯೋಜಿಸಬೇಕು ಎಂಬುದು ನಿಯಮದಲ್ಲಿದೆ.

ವಿಶೇಷವೆಂದರೆ ಹೊಸ ನಿಯಮಗಳಲ್ಲಿ ವಿವಾಹಪೂರ್ವ ಹೆಣ್ಣು ಮಕ್ಕಳು ಮೊಬೈಲ್ ಬಳಕೆ ಮಾಡುವಂತಿಲ್ಲ. ಠಾಕೂರ್ ನಿಯಮಗಳಲ್ಲಿ ಶಿಕ್ಷಣದ ಮಹತ್ವವನ್ನು ಸಾರಿದ್ದು, ಹಳ್ಳಿ, ಕುಗ್ರಾಮಗಳಿಂದ ಬೇರೆಡೆಗೆ ಹೋಗಿ ಶಿಕ್ಷಣ ಪಡೆಯುವ ಮಕ್ಕಳಿಗೆ ಸುಲಭ ಪ್ರಯಾಣಕ್ಕಾಗಿ ವ್ಯವಸ್ಥೆ ಮಾಡಬೇಕು ಎಂದು ಕಟ್ಟುನಿಟ್ಟಿನ ನಿಯಮ ಜಾರಿಯನ್ನು ತರಲಾಗಿದೆ.