ನ್ಯೂಯಾರ್ಕ್, ಜು.೪- ಜಾಗತಿಕ ಸಂವಹನ ಹಾಗೂ ಸಾಮಾಜಿಕ ಜಾಲತಾಣ ಕ್ಷೇತ್ರದಲ್ಲಿ ಫೇಸ್‌ಬುಕ್ ನಡೆಸಿದ ಕ್ರಾಂತಿಕಾರಿಕ ಬದಲಾವಣೆಗಳ ಬಗ್ಗೆ ಬಹುಷಃ ನಮ್ಮೆಲ್ಲರಿಗೂ ತಿಳಿದೇ ಇದೆ. ಫೇಸ್‌ಬುಕ್‌ನ ಮಾತೃಸಂಸ್ಥೆ ಮೆಟಾ ಇದೀಗ ಟ್ವಿಟರ್‌ಗೆ ಪ್ರತಿಸ್ಪರ್ಧಿಯಾಗಿ ತನ್ನ ನೂತನ ಅಪ್ಲಿಕೇಶನ್ ಥ್ರೆಡ್ಸ್ ಹೊರತರಲಿದ್ದು, ಗುರುವಾರ ಅಧಿಕೃತವಾಗಿ ಅನಾವರಣಗೊಳ್ಳಲಿದೆ. ಇನ್ಸ್ಟಾಗ್ರಾಂನ ಪಠ್ಯ-ಆಧಾರಿತ ಸಂಭಾಷಣೆ ಅಪ್ಲಿಕೇಶನ್ ಆಗಿರುವ ಥ್ರೆಡ್ಸ್ ಮೂಲಕ ಟ್ವಿಟರ್ ವಿರುದ್ಧ ಕಹಳೆ ಮೊಳಗಿಸಲು ಮೆಟಾ ಮುಂದಾಗಿದೆ.
ಮೆಟಾ ಮಾಲಕ ಮಾರ್ಕ್ ಜುಕರ್‌ಬರ್ಗ್ ಮತ್ತು ಟ್ವಿಟರ್ ಮುಖ್ಯಸ್ಥ ಎಲೋನ್ ಮಸ್ಕ್ ನಡುವಿನ ಪೈಪೋಟಿ ಬಹುಷಃ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಸದ್ಯ ಇದಕ್ಕೀಗ ಮತ್ತೊಂದು ವೇದಿಕೆ ಲಭ್ಯವಾಗಿದೆ. ಮೆಟಾದ ಥ್ರೆಡ್ಸ್ ಎಂಬ ಹೆಸರಿನಿಂದ ಗುರುತಿಸಿಕೊಂಡಿರುವ ನೂತನ ಸಾಮಾಜಿಕ ಜಾಲತಾಣವು ಭವಿಷ್ಯದಲ್ಲಿ ಟ್ವಿಟರ್‌ಗೆ ಕಠಿಣ ಸ್ಪರ್ಧೆ ಒಡ್ಡಲಿದೆ ಎಂದು ಹೇಳಲಾಗಿದೆ. ಇನ್ನು ಆಪಲ್ ಆಪ್ ಸ್ಟೋರ್‌ನಲ್ಲಿ ಮುಂಗಡ-ಕೋರಿಕೆಗೆ ಲಭ್ಯವಿರುವ ಥ್ರೆಡ್ಸ್ ಅಪ್ಲಿಕೇಶನ್ ಅನ್ನು ಇನ್ಸ್ಟಾಗ್ರಾಂ ಜೊತೆ ಕೂಡ ಲಿಂಕ್ ಮಾಡಲಾಗುತ್ತಿದೆ. ಸಹಜವಾಗಿಯೇ ಇನ್ಸ್ಟಾಗ್ರಾಂನಲ್ಲಿ ಖಾತೆ ಹೊಂದಿರುವವರು ಥ್ರೆಡ್ಸ್ ಅಪ್ಲಿಕೇಶನ್ ಜೊತೆ ಕೂಡ ಸುಲಭ ರೀತಿಯಲ್ಲಿಯೇ ಕನೆಕ್ಟ್ ಆಗಲಿದ್ದಾರೆ. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ ಇನ್ಸ್ಟಾಗ್ರಾಂನ ಪಠ್ಯ-ಆಧಾರಿತ ಸಂಭಾಷಣೆ ಅಪ್ಲಿಕೇಶನ್ ಆಗಿದ್ದು, ಬಳಕೆದಾರರು ಫೋಟೋ ಹಂಚಿಕೆಯ ಮಾಧ್ಯಮದಲ್ಲಿ ಅನುಸರಿಸುವ ಖಾತೆಗಳನ್ನು ಅನುಸರಿಸಲು ಮತ್ತು ಅದೇ ಬಳಕೆದಾರ ಹೆಸರನ್ನು ಇರಿಸಿಕೊಳ್ಳಲು ಅನುಮತಿಸುತ್ತದೆ. ಇನ್ನು ಥ್ರೆಡ್ಸ್ ಅಪ್ಲಿಕೇಶನ್‌ನ ಡ್ಯಾಶ್‌ಬೋರ್ಡ್‌ಗಳು ಟ್ವಿಟರ್‌ನಂತೆ ಸ್ಕ್ರೀನ್‌ಗ್ರಾಬ್‌ಗಳನ್ನು ತೋರಿಸಿದೆ. ಮೆಟಾದ ಪ್ರಕಾರ ಥ್ರೆಡ್ಸ್ ಎಂಬುದು ಪಠ್ಯ ಆಧಾರಿತ ಸಂಭಾಷಣೆ ಅಪ್ಲಿಕೇಶನ್ ಆಗಿದ್ದು, ಬಳಕೆದಾರರಿಗೆ ಸುಲಭ ರೀತಿಯಲ್ಲಿಯೇ ಸೇವೆ ಒದಗಿಸಲಿದೆ ಎಂದು ತಿಳಿಸಿದೆ. ಇನ್ನು ಟ್ವಿಟರ್‌ಗೆ ಸ್ಪರ್ಧೆ ನೀಡುವಲ್ಲಿ ಬಹುಷಃ ಥ್ರೆಡ್ಸ್‌ಗೆ ಅಷ್ಟೊಂದು ಕಠಿಣವಾಗಿರಲಾರದು ಎನ್ನಲಾಗಿದೆ. ಯಾಕೆಂದರೆ ಈಗಾಗಲೇ ಬಿಲಿಯನ್‌ಗಟ್ಟಲೆ ಫಾಲೋವರ್ಸ್‌ಗಳನ್ನು ಹೊಂದಿರುವ ಇನ್ಸ್ಟಾಗ್ರಾಂ ಮೂಲಕವೇ ಥ್ರೆಡ್ಸ್ ಅಪಾರ ಸಂಖ್ಯೆಯಲ್ಲಿ ಬಳಕೆದಾರರು ಆಗಮಿಸುವ ಸಾಧ್ಯತೆ ಇದೆ. ಹಾಗಾಗಿ ಮಸ್ಕ್ ನೇತೃತ್ವದ ಟ್ವಿಟರ್‌ಗೆ ಭವಿಷ್ಯದಲ್ಲಿ ಕಠಿಣ ಸವಾಲು ಕೂಡಿರಲಿದೆ ಎಂದು ಜಾಗತಿಕ ಟೆಕ್ ವಿಶ್ಲೇಷಕರು ಅಭಿಪ್ರಾಯ ಮಂಡಿಸಿದ್ದಾರೆ.