ಟ್ವಿಟರ್ ನೂತನ ಸಿಇಒ ಹುದ್ದೆಗೆ ಮಹಿಳೆ ನೇಮಕ!

ನ್ಯೂಯಾರ್ಕ್, ಮೇ ೧೨- ಜಗತ್ತಿನ ಪ್ರಸಿದ್ಧ ಮೈಕ್ರೋಬ್ಲಾಗಿಂಗ್ ಸಂಸ್ಥೆಗಳಲ್ಲಿ ಒಂದಾಗಿರುವ ಟ್ವಿಟರ್ ಕಂಪೆನಿಯನ್ನು ಖರೀದಿಸಿದಂದಿನಿಂದ ಸದಾ ಸುದ್ದಿಯಲ್ಲಿರುವ ಎಲಾನ್ ಮಸ್ಕ್ ಇದೀಗ ಮತ್ತೊಂದು ಅಚ್ಚರಿಯ ಘೋಷಣೆ ಮಾಡಿದ್ದಾರೆ. ಟ್ವಿಟರ್ ಸಂಸ್ಥೆಗೆ ಹೊಸ ಸಿಇಒ ಆಗಿ ಮಹಿಳೆಯನ್ನು ನೇಮಿಸಿರುವ ಸಂಗತಿಯನ್ನು ಮಸ್ಕ್ ಬಹಿರಂಗಪಡಿಸಿದ್ದಾರೆ.
ಆದರೆ ನೂತನ ಸಿಇಒ ಹೆಸರನ್ನು ಮಸ್ಕ್ ಇನ್ನೂ ಬಹಿರಂಗಪಡಿಸಿಲ್ಲ. ಬದಲಾಗಿ ಮುಂದಿನ ಆರು ವಾರಗಳಲ್ಲೇ ಆಕೆ ಕೆಲಸಕ್ಕೆ ಹಾಜರಾಗಲಿದ್ದಾಳೆ ಎಂದಷ್ಟೇ ಮಾಹಿತಿ ನೀಡಿದ್ದಾರೆ. ಎಲೆಕ್ಟ್ರಿಕ್ ಕಾರ್ (ಟೆಸ್ಲಾ), ಬ್ಯಾಹ್ಯಾಕಾಶ ಕ್ಷೇತ್ರ (ಸ್ಪೇಸ್‌ಎಕ್ಸ್) ಮುಂತಾದ ಜಾಗತಿಕ ಮಟ್ಟದ ಕಂಪೆನಿಗಳ ಸಿಇಒ ಹುದ್ದೆಯಲ್ಲಿರುವ ಮಸ್ಕ್, ಟ್ವಿಟರ್ ಸಂಸ್ಥೆಗೆ ಹೊಸ ಅಧಿಕಾರಿಯನ್ನು ನೇಮಿಸಬೇಕೆಂಬ ಕೂಗು ಬಲವಾಗಿ ಕೇಳಿಬರುತ್ತಿದೆ. ಅಲ್ಲದೆ ತಾನು ಟ್ವಿಟರ್ ಸಿಇಒ ಹುದ್ದೆಯಿಂದ ಕೆಳಗಿಳಿಯಬೇಕೇ ಬೇಡವೇ ಎಂದು ಕಳೆದ ವರ್ಷ ಮಸ್ಕ್ ಟ್ವಿಟರ್‌ನಲ್ಲೇ ಪ್ರಶ್ನೆ ಮಾಡಿದ್ದರು. ಇದಕ್ಕೆ ಬಹುತೇಕರು ಟ್ವಿಟರ್ ಸಿಇಒ ಹುದ್ದೆಯಿಂದ ಹಿಂದೆಸರಿಯುವುದೇ ಸೂಕ್ತ ಎಂಬ ಮತ ಚಲಾಯಿಸಿದ್ದರು. ಅಲ್ಲದೆ ಟ್ವಿಟರ್‌ಗೆ ಹೊಸ ಸಿಇಒ ನೇಮಿಸುವ ಕುರಿತು ಹಲವು ಬಾರಿಗೆ ಹೇಳಿಕೆ ನೀಡಿದ್ದರೂ ಇದು ಕಾರ್ಯರೂಪಕ್ಕೆ ಮಾತ್ರ ಬಂದಿರಲಿಲ್ಲ. ಇದೀಗ ಸಂಸ್ಥೆಗೆ ಮಹಿಳಾ ಸಿಇಒ ಅನ್ನು ನೇಮಿಸಿದ ಕುರಿತು ಸ್ವತಹ ಮಸ್ಕ್ ಹೇಳಿಕೆ ನೀಡಿದ್ದು, ಹೆಸರು ಮಾತ್ರ ಇನ್ನೂ ಬಹಿರಂಗಪಡಿಸಿಲ್ಲ. ಮುಂದಿನ ಕೆಲವು ವಾರಗಳಲ್ಲಿ ಸ್ಪಷ್ಟ ಚಿತ್ರಣ ಲಭಿಸಲಿದೆ ಎನ್ನಲಾಗಿದೆ. ಇನ್ನು ಕಳೆದ ವರ್ಷ ಬರೊಬ್ಬರಿ ೪೪ ಬಿಲಿಯನ್ ಡಾಲರ್ ಮೊತ್ತಕ್ಕೆ ಮಸ್ಕ್ ಅವರು ಟ್ವಿಟರ್ ಸಂಸ್ಥೆಯನ್ನು ಖರೀದಿಸಿದ್ದರು.

ಯಾರೀಕೆ ನೂತನ ಸಿಇಒ
ಹೊಸ ಸಿಇಒ ಹೆಸರನ್ನು ಮಸ್ಕ್ ಇನ್ನೂ ಅಧಿಕೃತವಾಗಿ ಘೋಷಿಸದಿದ್ದರೂ, ಆಕೆ ಮಹಿಳೆ ಎಂಬುದು ಬಹುತೇಕ ಅಂತಿಮಗೊಂಡಿದೆ ಎನ್ನಲಾಗಿದೆ. ಅದೂ ಅಲ್ಲದೆ ಅಮೆರಿಕಾದ ಎರಡು ಮಾಧ್ಯಮಗಳಾದ ವಾಲ್‌ಸ್ಟ್ರೀಟ್ ಜರ್ನಲ್ ಹಾಗೂ ವರೈಟಿಯ ವರದಿಯ ಪ್ರಕಾರ, ಎನ್‌ಬಿಸಿ ಯುನಿವರ್ಸಲ್‌ನ ಜಾಹೀರಾತು ವಿಭಾಗದ ಮುಖ್ಯಸ್ಥೆ ಲಿಂಡಾ ಯಾಕರಿನೊ ಜೊತೆ ಮಸ್ಕ್ ಸಿಇಒ ಹುದ್ದೆಗೆ ಚರ್ಚೆ ನಡೆಸಿರುವ ವಿಚಾರ ಬೆಳಕಿಗೆ ಬಂದಿದೆ. ಆದರೆ ಈ ವರದಿಗೆ ಟ್ವಿಟರ್ ಸಂಸ್ಥೆ ಅಧಿಕೃತವಾಗಿ ಪ್ರತಿಕ್ರಿಯೆ ನೀಡಿಲ್ಲ.