ಟ್ವಿಟರ್‌ನಲ್ಲಿ ಈಶ್ವರಪ್ಪ ಕಾಲೆಳೆದ ಕೈ

ಬೆಂಗಳೂರು,ಏ.೩- ಮುಖ್ಯಮಂತ್ರಿ ಯಡಿಯೂರಪ್ಪ_ಈಶ್ವರಪ್ಪ ನಡುವೆ ನಡೆದಿರುವ ರಾಜಕೀಯ ಗುದ್ದಾಟವನ್ನು ಬಂಡವಾಳ ಮಾಡಿಕೊಂಡು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಪಕ್ಷ ಸಾಮಾಜಿಕ ಜಾಲತಾಣದಲ್ಲಿ ಸಚಿವ ಈಶ್ವರಪ್ಪ, ಮುಖ್ಯಮಂತ್ರಿ ಯಡಿಯೂರಪ್ಪನವರ ಕಾಲೆಳೆಯುವ ಹೇಳಿಕೆಗಳನ್ನು ಪೋಸ್ಟ್ ಮಾಡುತ್ತಿದ್ದು, ಇಂದೂ ಸಹ ಸಚಿವ ಈಶ್ವರಪ್ಪ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸವಾಲು ಹಾಕುವ ಟ್ವೀಟ್ ಮಾಡಿದೆ.
ಸಚಿವ ಈಶ್ವರಪ್ಪ ಅವರೇ ಗುಲಾಮರಂತೆ ಸಚಿವರಾಗುವುದಕ್ಕಿಂತ ರಾಜೀನಾಮೆ ಕೊಟ್ಟು ಸ್ವಾಭಿಮಾನ ಪ್ರದರ್ಶಿಸಿ ಎಂದು ಕಾಂಗ್ರೆಸ್ ಪಕ್ಷ ಟ್ವಿಟರ್‌ನಲ್ಲಿ ಈಶ್ವರಪ್ಪನವರಿಗೆ ಒತ್ತಾಯಿಸಿದೆ.
ಮುಖ್ಯಮಂತ್ರಿ ಯಡಿಯೂರಪ್ಪನವರಿಗೂ ಟ್ವಿಟರ್‌ನಲ್ಲಿ ಕಾಲೆಳೆದಿರುವ ಕಾಂಗ್ರೆಸ್ ಪಕ್ಷ, ಮುಖ್ಯಮಂತ್ರಿ ಯಡಿಯೂರಪ್ಪನವರೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕ್ರಮಕೈಗೊಳ್ಳದೆ ಕೈಲಾಗದ ಮುಖ್ಯಮಂತ್ರಿ ಎನಿಸಿಕೊಂಡಿದ್ದೀರಿ. ಸಚಿವ ಈಶ್ವರಪ್ಪನವರನ್ನಾದರೂ ಸಂಪುಟದಿಂದ ಹೊರದಬ್ಬಿ ನಿಮ್ಮ ತಾಕತ್ತು ಪ್ರದರ್ಶಿಸಿ ಎಂದು ಸವಾಲು ಹಾಕಿದೆ.
ಈ ಎರಡೂ ಆಗುವುದಿಲ್ಲ ಎನ್ನುವುದಾದರೆ ನೆಟ್ಟಗೆ ಆಡಳಿತವನ್ನಾದರೂ ಮಾಡಿಕೊಂಡು ಹೋಗಿ ಎಂದು ಕಾಂಗ್ರೆಸ್ ಟ್ವಿಟರ್‌ನಲ್ಲಿ ಯಡಿಯೂರಪ್ಪನವರಿಗೆ ಒತ್ತಾಯಿಸಿದೆ.