ಟ್ವಿಟರ್‌ನಲ್ಲಿ ನೀಲಿ ಹಕ್ಕಿ ತೆಗೆದು ನಾಯಿ ಚಿತ್ರ ಹಾಕಿದ ಮಸ್ಕ್

ವಾಷಿಂಗ್ಟನ್, ಏ.೪- ನಿತ್ಯ ಒಂದಲ್ಲಾ ಒಂದು ವಿಚಾರಗಳಿಂದ ಸುದ್ದಿಯಲ್ಲಿರುವ ಟ್ವಿಟ್ವರ್ ಸಿಇಒ ಎಲಾನ್ ಮಸ್ಕ್ ಅವರು ಮತ್ತೊಮ್ಮೆ ಹೊಸ ಅಪ್‌ಡೇಟ್‌ನೊಂದಿಗೆ ಬಂದಿದ್ದಾರೆ. ಈ ಬಾರಿ ಟ್ವಿಟ್ಟರ್ ಲೋಗೋದಿಂದ ನೀಲಿ ಹಕ್ಕಿ ತೆಗೆದು ನಾಯಿ ಚಿತ್ರವನ್ನು ಹಾಕಿದ್ದು ಕುತೂಹಲ ಮೂಡಿಸಿದೆ. ಈ ಬಾರಿ ಮಸ್ಕ್ ಅವರು ಟ್ವಿಟರ್‌ನ ನೀಲಿ ಬಣ್ಣದ ಪಕ್ಷಿ ಲೋಗೋ ಅನ್ನು ಬದಲಾಯಿಸಿದ್ದು, ಆ ಜಾಗಕ್ಕೆ ಕ್ರಿಪ್ಟೋಕರೆನ್ಸಿ ಡಾಗ್‌ಕಾಯಿನ್‌ನ ನಾಯಿಯ ಮೀಮ್ಸ್ ಫೋಟೋವನ್ನು ಬಳಸಿದ್ದಾರೆ.
ಟ್ವಿಟರ್ ಬಳಕೆದಾರರು ಸೋಮವಾರದ ಟ್ವಿಟರ್‌ನ ವೆಬ್ ಆವೃತ್ತಿಯಲ್ಲಿ ೨೦೧೩ ರಲ್ಲಿ ಜೋಕ್ ಗಾಗಿ ರಚಿಸಲಾದ ಡಾಗ್‌ಕಾಯಿನ್ ಬ್ಲಾಕ್‌ಚೈನ್ ಮತ್ತು ಕ್ರಿಪ್ಟೋಕರೆನ್ಸಿಯ ಲೋಗೋದ ಭಾಗವಾಗಿರುವ ’ಡಾಗ್ ಮೀಮ್ಸ್ ಅನ್ನು ಗಮನಿಸಿದ್ದಾರೆ.ಮಸ್ಕ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಆದರೆ, ಇಲ್ಲೊಂದು ಟ್ವಿಸ್ಟ್ ಇದ್ದು, ಟ್ವಿಟರ್ ಲೋಗೋ ಬದಲಾವಣೆಯು ಕೇವಲ ವೆಬ್ ಆವೃತ್ತಿಗೆ ಮಾತ್ರ ಸೀಮಿತವಾಗಿದೆ. ಮೊಬೈಲ್ ಟ್ವಿಟರ್ ಆಪ್‌ನಲ್ಲಿ ಪಕ್ಷಿಯ ಲೋಗೋ ಮುಂದುವರಿದಿದೆ.
ಅಂದಹಾಗೆ ಬಿಟ್‌ಕಾಯಿನ್‌ನಂತಹ ಇತರ ಕ್ರಿಪ್ಟೋಕರೆನ್ಸಿಗಳನ್ನು ಅಪಹಾಸ್ಯ ಮಾಡಲು ೨೦೧೩ರಲ್ಲಿ ಜೋಕ್ಸ್‌ಗಾಗಿ ಈ ಡಾಗ್ ಚಿತ್ರ (ಶಿಬಾ ಇನು) ರಚಿಸಲಾಯಿತು. ಇದು ಡಾಗ್‌ಕಾಯಿನ್ ಬ್ಲಾಕ್‌ಚೈನ್ ಮತ್ತು ಕ್ರಿಪ್ಟೋಕರೆನ್ಸಿಯ ಲೋಗೋ ಎಂದು ಪ್ರಸಿದ್ಧವಾಗಿದೆ.
ಟ್ವಿಟರ್‌ನ ಸಿಇಒ ಮಸ್ಕ್ ಅವರು ೨೦೨೨, ಮಾರ್ಚ್ ೨೬ರ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರ ಮತ್ತು ಅನಾಮಧೇಯ ಖಾತೆಯ ನಡುವಿನ ಸಂಭಾಷಣೆ ಇದೆ. ಟ್ವಿಟರ್ ಬಳಕೆದಾರನೊಬ್ಬ ಪಕ್ಷಿ ಲೋಗೋವನ್ನು ’ಡಾಗ್ ಗೆ ಬದಲಾಯಿಸಲು ಕೇಳುತ್ತಿದ್ದಾರೆ. ಈ ಪೋಸ್ಟ್ ಅನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದ ಮಸ್ಕ್, ಭರವಸೆ ನೀಡಿದ್ದರು. ಇದೀಗ ವೆಬ್ ಆವೃತ್ತಿಯಲ್ಲಿ ಮಾತ್ರ ಬದಲಾವಣೆ ಮಾಡಿದ್ದಾರೆ. ೨೦೨೨ರ ಏಪ್ರಿಲ್‌ನಲ್ಲಿ ಟ್ವಿಟರ್ ಖರೀದಿಸುವ ೪೪ ಬಿಲಿಯನ್ ಡಾಲರ್ ಒಪ್ಪಂದವನ್ನು ಮಸ್ಕ್ ಆರಂಭಿಸಿದ್ದರು. ಅವರು ಸ್ಪ್ಯಾಮ್ ಖಾತೆಗಳನ್ನು ತೆಗೆದುಹಾಕಲು ಯೋಜಿಸಿದ್ದರು ಮತ್ತು ಮಾಹಿತಿ ಪಡೆಯಲು ಟ್ವಿಟರ್‌ಗೆ ತಿಳಿಸಿದ್ದರು. ಆದರೆ, ಟ್ವಿಟರ್ ಸಹಕಾರ ನೀಡುತ್ತಿಲ್ಲ ಎಂದು ಅವರ ವಕೀಲರು ಆರೋಪಿಸಿದ್ದರು. ಇದರಿಂದಾಗಿ ದಿಢೀರನೇ ತಮ್ಮ ನಿಲುವು ಬದಲಿಸಿಕೊಂಡಿದ್ದ ಮಸ್ಕ್, ಟ್ವಿಟರ್ ಖರೀದಿ ಒಪ್ಪಂದವನ್ನು ಮುರಿದುಕೊಂಡಿದ್ದರು.
ನಕಲಿ ಖಾತೆಗಳ ಬಗ್ಗೆ ಮಾಹಿತಿ ನೀಡುವಂತೆ ಮನವಿ ಮಾಡಿದರೂ ಮಾಹಿತಿ ನೀಡದ್ದಕ್ಕೆ ಒಪ್ಪಂದವನ್ನು ಮುರಿದುಕೊಂಡಿರುವುದಾಗಿ ಮಸ್ಕ್ ಸ್ಪಷ್ಟನೆ ನೀಡಿದ್ದರು. ಕಂಪನಿಯನ್ನು ಖರೀದಿಸಲು ಕಾನೂನುಬದ್ಧವಾಗಿ ಮಸ್ಕ್? ಬದ್ಧರಾಗಿದ್ದಾರೆ ಮತ್ತು ಮೊಕದ್ದಮೆ ಹೂಡಿದ್ದಾರೆ ಎಂದು ಟ್ವಿಟರ್ ವಾದಿಸಿತು.