ಟ್ರ್ಯಾಕ್ಟರ್ ಹರಿದು ನಾಲ್ವರಿಗೆ ಗಾಯ

ಕುಣಿಗಲ್, ಡಿ. ೪- ಅಂಗಡಿ ಬಳಿ ಟೀ ಕುಡಿಯುತ್ತಿದ್ದವರ ಮೇಲೆ ಟ್ರ್ಯಾಕ್ಟರ್ ಹರಿದು ನಾಲ್ಕು ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಕೊತ್ತಗೆರೆ ಹೋಬಳಿ ಕೆ. ಹೊಸಹಳ್ಳಿ ಗ್ರಾಮದಲ್ಲಿ ಇಂದು ಬೆಳಿಗ್ಗೆ ನಡೆದಿದೆ
ತಾಲ್ಲೂಕಿನ ಕೆ.ಹೊಸಹಳ್ಳಿ ಗ್ರಾಮದ ಆರೀಫ್ ಉಲ್ಲಾ (೬೦), ನಂಜಪ್ಪ (೬೫), ಚೆಲುವರಾಜು (೬೦) ಹಾಗೂ ಪವನ್‌ಗೌಡ (೨೧) ಎಂಬುವರೇ ತೀವ್ರವಾಗಿ ಗಾಯಗೊಂಡಿರುವ ವ್ಯಕ್ತಿಗಳು.
ಕೆ ಹೊಸಹಳ್ಳಿ ಗ್ರಾಮದ ಬಳಿ ಟೀ ಕುಡಿಯುತ್ತಿದ್ದ ವೇಳೆ ಟ್ರ್ಯಾಕ್ಟರೊಂದು ಚಾಲಕನ ನಿಯಂತ್ರಣ ತಪ್ಪಿ ಟೀ ಕುಡಿಯುತ್ತಿದ್ದವರ ಮೇಲೆ ಹರಿದಿದ್ದರಿಂದ ಈ ಅವಘಡ ಸಂಭವಿಸಿದೆ.
ಅಪಘಾತದಲ್ಲಿ ಆರೀಪ್ ಉಲ್ಲಾ ಎಂಬ ವ್ಯಕ್ತಿಯ ಕಾಲು ತುಂಡಾಗಿದ್ದು, ಚಲುವರಾಜು ಅವರ ಕೈ ಮುರಿದಿದೆ. ಉಳಿದ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಕುಣಿಗಲ್‌ನ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಈ ಸಂಬಂಧ ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸುತ್ತಿದ್ದಾರೆ.