ಟ್ರ್ಯಾಕ್ಟರ್ ಟ್ರ್ಯಾಲಿ ಪಲ್ಟಿ -ಓರ್ವ ಸಾವು, 6ಕೂಲಿ ಕಾರ್ಮಿಕರಿಗೆ ಗಾಯ

ಕೂಡ್ಲಿಗಿ.ಜೂ.8:- ಟ್ರ್ಯಾಲಿಗೆ ಸಿಮೆಂಟ್ ಕಲಿಸುವ ಮಿಷನ್ ಅಳವಡಿಸಿಕೊಂಡು ಟ್ರ್ಯಾಲಿಯಲ್ಲಿ 7ಕೂಲಿ ಕಾರ್ಮಿಕರನ್ನು ಕೂಡಿಸಿಕೊಂಡು ಕೂಡ್ಲಿಗಿ ಕಡೆಗೆ ಬರುತ್ತಿದ್ದ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತಗ್ಗಿಗೆ ಟ್ರ್ಯಾಲಿ ಪಲ್ಟಿಯಾದ ಪರಿಣಾಮ ಓರ್ವ ಕಾರ್ಮಿಕ ತೀವ್ರ ರಕ್ತವಾಗಿ ಸ್ಥಳದಲ್ಲೇ ಮೃತಪಟ್ಟಿದ್ದು ಉಳಿದ 6ಕಾರ್ಮಿಕರಿಗೆ ಗಾಯಗಳಾದ ಘಟನೆ ಕೂಡ್ಲಿಗಿ ಪೊಲೀಸ್ ಠಾಣಾ ಸರಹದ್ದಿನ ಹಗರಿಬೊಮ್ಮನಹಳ್ಳಿ ತಾಲೂಕಿನ ನಾಣ್ಯಾಪುರದ ಸಮೀಪದ ರಸ್ತೆಯಲ್ಲಿ ಸೋಮವಾರ ಜರುಗಿದೆ.
ಹರೆಗೊಂಡನಹಳ್ಳಿಯ ಸಿದ್ದಪ್ಪ (42) ತೀವ್ರಗಾಯದಿಂದ ಸ್ಥಳದಲ್ಲೇ ಮೃತಪಟ್ಟ ದುರ್ದೈವಿ ಕೂಲಿ ಕಾರ್ಮಿಕನಾಗಿದ್ದಾನೆ. ಮದನ್, ಟ್ರ್ಯಾಕ್ಟರ್ ಚಾಲಕ ಮಲ್ಲಿಕಾರ್ಜುನ ಸೇರಿದಂತೆ ಆರು ಜನರಿಗೆ ಗಾಯಗಳಾಗಿದ್ದು ಹಗರಿಬೊಮ್ಮನಹಳ್ಳಿ ಹಾಗೂ ಹೊಸಪೇಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರೆಂದು ತಿಳಿದಿದೆ. ಈ ಅಪಘಾತಕ್ಕೆ ಟ್ರ್ಯಾಕ್ಟರ್ ಚಾಲಕನ ನಿರ್ಲಕ್ಷ್ಯವೇ ಕಾರಣವೆಂದು ಗಾಯಾಳು ಮದನ್ ನೀಡಿದ ದೂರಿನಂತೆ ಕೂಡ್ಲಿಗಿ ಠಾಣಾ ಎ ಎಸ್ ಐ ಶಂಕರನಾಯ್ಕ್ ಪ್ರಕರಣ ದಾಖಲಿಸಿಕೊಂಡಿದ್ದು ಕೂಡ್ಲಿಗಿ ಸಿಪಿಐ ವಸಂತ ವಿ ಅಸೋದೆ ತನಿಖೆ ಕೈಕೊಂಡಿದ್ದಾರೆ.