ಟ್ರ್ಯಾಕ್ಟರ್ ಕಳ್ಳರ ಸೆರೆ


ಬೆಂಗಳೂರು, ಡಿ.೨೯- ನಿಲ್ಲಿಸಿದ್ದ ಟ್ರ್ಯಾಕ್ಟರ್ ಗಳನ್ನು ಕಳವು ಮಾಡುತ್ತಿದ್ದ ಐವರು ಖತರ್ನಾಕ್ ಕಳ್ಳರನ್ನು ಬಂಧಿಸಿರುವ ಕಾಮಾಕ್ಷಿಪಾಳ್ಯ ಪೊಲೀಸರು, ಹಲವು ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಕಳವು ಮಾಡಿದ್ದ ೯೦ ಲಕ್ಷ ೯೦ ಸಾವಿರ ಮೌಲ್ಯದ ೧೪ ಟ್ರಾಕ್ಟರ್ ಗಳು, ೪ ಮಾರುತಿ ವ್ಯಾನ್ ಗಳು, ೭ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಆನಂದ್, ಯಾಕೂಬ್ ಖಾನ್, ಲಿಂಗಪ್ಪ, ಕೆ.ಲೋಕೇಶ್, ವಿ.ಲೋಕೇಶ್ ಬಂಧಿತ ಆರೋಪಿಗಳಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕಳೆದ ಅಕ್ಟೋಬರ್ ೧೮ರಂದು ಸಂಜೆ ೬ ಗಂಟೆ ಸುಮಾರಿಗೆ ಸುಂಕದಕಟ್ಟೆ ಹೊಯ್ಸಳನಗರ ಪಾರ್ಕ್ ಹತ್ತಿರ ನಿಲ್ಲಿಸಿದ್ದ ೫ ಲಕ್ಷ ರೂ.ಬೆಲೆಬಾಳುವ ಟ್ರಾಕ್ಟರ್ ಅನ್ನು ಕಳ್ಳರು ಕಳವು ಮಾಡಿದ್ದರು. ಈ ಬಗ್ಗೆ ವಾಹನ ಕಳೆದುಕೊಂಡ ವ್ಯಕ್ತಿ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ಬಗ್ಗೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಪ್ರಶಾಂತ್ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ನವೆಂಬರ್ ೬ರಂದು ಆರೋಪಿ ಬೋರೇಗೌಡ ಎಂಬಾತನನ್ನು ವಶಕ್ಕೆ ಪಡೆದಿದ್ದರು. ಆರೋಪಿಯಿಂದ ನಗರದ ಪೀಣ್ಯ, ಬ್ಯಾಡರಹಳ್ಳಿ, ಜ್ಞಾನಭಾರತಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ ಮತ್ತು ಇತರ ಜಿಲ್ಲೆಗಳ ಪೊಲೀಸ್ ಠಾಣೆಗಳ ವ್ಯಾಪ್ತಿಗಳಲ್ಲಿ ಕಳವು ಮಾಡಿದ್ದ ೫೫ ಲಕ್ಷ ರೂ. ಮೌಲ್ಯದ ೧೨ ಟ್ರ್ಯಾಕ್ಟರ್ ಗಳು ಮತ್ತು ಒಂದು ಓಮ್ನಿ ಕಾರು, ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ನಗರದ ಪೀಣ್ಯ, ಬ್ಯಾಡರಹಳ್ಳಿ, ಜ್ಞಾನಭಾರತಿ, ಮಾದನಾಯಕನಹಳ್ಳಿ, ಬಿಡದಿ, ಕುಣಿಗಲ್, ಹಾಗೂ ಇತರ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಕಳವು ಮಾಡಿದ್ದ ೯೦,೯೦,೦೦೦ ರೂ. ಮೌಲ್ಯದ ೧೪ ಟ್ರಾಕ್ಟರ್ ಗಳು, ೪ ಮಾರುತಿ ವ್ಯಾನ್ ಗಳು, ೭ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಇದುವರೆಗೆ ಒಟ್ಟು ೧ ಕೋಟಿ ೪೬ ಲಕ್ಷ, ೪೦ ಸಾವಿರ ಮೌಲ್ಯದ ೨೬ ಟ್ರಾಕ್ಟರ್ ಗಳು, ೫ ಮಾರುತಿ ಓಮ್ನಿ, ೮ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಳವು ಮಾಡಿದ್ದ ಟ್ರಾಕ್ಟರ್ ಗಳಿಗೆ ಮಂಡ್ಯ ನಿವಾಸಿ ಆನಂದ, ಲೋಕೇಶ್ ಎಂಬವರು ವಾಹನಗಳ ಇಂಜಿನ್ ನಂಬರ್ ಮತ್ತು ಚಾಸೀಸ್ ನಂಬರ್ ಗಳನ್ನು ಬದಲಾಯಿಸಿ ಲೋಕೇಶ್ ಎಂಬವನ ಮೂಲಕ ಆರ್ ಟಿಒ ಕಚೇರಿಯಲ್ಲಿ ಹೊಸದಾಗಿ ನಕಲಿ ಸೇಲ್ ಸರ್ಟಿಫಿಕೇಟ್ ಗಳನ್ನು ಸೃಷ್ಟಿಸುತ್ತಿದ್ದರು.
ಕಳ್ಳತನ ಮಾಡಿದ್ದ ಹಳೆಯ ಟ್ರಾಕ್ಟರ್ ಗಳಿಗೆ ಆರ್ ಟಿಒ ಎಲೆಕ್ಟ್ರಾನಿಕ್ ಸಿಟಿ ಹಾಗೂ ಮಂಡ್ಯ ಆರ್ ಟಿಒ ಕಚೇರಿಗಳಲ್ಲಿ ಸೃಷ್ಟಿಸಿದ್ದ ದಾಖಲಾತಿಗಳನ್ನು ಹಾಜರುಪಡಿಸಿ ಸದರಿ ವಾಹನಗಳನ್ನು ಮಂಡ್ಯ ಜಿಲ್ಲೆಯ ತುಮಕೂರು ಜಿಲ್ಲೆ ಮೈಸೂರು ಜಿಲ್ಲೆ ಮುಂತಾದ ಕಡೆ ರೈತರಿಗೆ ಹೊಸದಾಗಿ ನೋಂದಣಿ ಮಾಡಿಸಿ ಮಾರಾಟ ಮಾಡಿರುವುದಾಗಿ ವಿಚಾರಣೆ ವೇಳೆ ಆರೋಪಿಗಳು ತಿಳಿಸಿದ್ದಾರೆ ಎಂದರು.
ಹೆಚ್ಚು ವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ ಡಿಸಿಪಿ ಸಂಜೀವ್ ಪಾಟೀಲ್ ಅವರಿದ್ದರು.

ಡ್ರಗ್ ಪೆಡ್ಲರ್‌ಗಳ ಸೆರೆ ೬೫ ಲಕ್ಷ ರೂ. ಮೌಲ್ಯದ ಗಾಂಜಾ ವಶ
ಬೆಂಗಳೂರು,ಡಿ.೨೯-ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಇಬ್ಬರು ಅಂತರ್‌ರಾಜ್ಯ ಡ್ರಗ್ ಪೆಡ್ಲರ್???ಗಳನ್ನು ಬಂಧಿಸಿರುವ ಆಗ್ನೇಯ ವಿಭಾಗದ ಪೊಲೀಸರು ೬೫ ಲಕ್ಷ ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಕೆ. ಪ್ರೀತಿಪಾಲ್, ಕೆ. ಖಲಂದರ್ ಬಂಧಿತ ಪೆಡ್ಲರ್ ಗಳಾಗಿದ್ದಾರೆ.ಆರೋಪಿಗಳು ಪೊಲೀಸರು ವಿಚಾರಣೆಗೊಳಪಡಿಸಿದಾಗ, ಮೋಜಿನ ಜೀವನಕ್ಕಾಗಿ ಮಾದಕ ವಸ್ತುಗಳನ್ನು ಆಂಧ್ರಪ್ರದೇಶದ ರಾಜಮಂಡ್ರಿಯಿಂದ ನಗರಕ್ಕೆ ತಂದು ಕಾಲೇಜು ವಿದ್ಯಾರ್ಥಿಗಳು, ಸಾಫ್ಟ್‌ವೇರ್ ಕಂಪನಿ ನೌಕರರಿಗೆ ಮಾರಾಟ ಮಾಡುತ್ತಿರುವುದನ್ನು ಬಾಯ್ಬಿಟ್ಟಿದ್ದಾರೆ. ಪ್ರಮುಖ ಆರೋಪಿ ಕೆ. ಪ್ರೀತಿಪಾಲ್ ಈ ಹಿಂದೆ ಗೋವಾ, ಕೇರಳ ರಾಜ್ಯಗಳಿಂದ ಅಕ್ರಮ ಮದ್ಯ ಸಾಗಣೆ ಮಾಡುತ್ತಿದ್ದು ಈತನ ವಿರುದ್ಧ ಮಂಗಳೂರಿನ ಪುತ್ತೂರು ಟೌನ್ ಠಾಣೆಯಲ್ಲಿ ೩ ಪ್ರಕರಣ, ಬಂಟ್ವಾಳ, ಉಡುಪಿ ಬಂದರು ಹಾಗೂ ಅಬಕಾರಿ ಜಾರಿ ಮತ್ತು ಲಾಟರಿ ನಿಷೇಧ ದಳ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳಿವೆ.
ಡ್ರಗ್ಸ್ ಮಾರಾಟ ಪ್ರಕರಣವೊಂದಲ್ಲಿ ಜೈಲು ಸೇರಿ ಜಾಮೀನು ಪಡೆದು ಹೊರಬಂದು ಬಳಿಕ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ.
ಈತನ ಮೇಲೆ ೮ ಕ್ರಿಮಿನಲ್ ಪ್ರಕರಣಗಳಿವೆ, ಖಚಿತ ಮಾಹಿತಿ ಆಧರಿಸಿ ಸುದ್ದಗುಂಟೆಪಾಳ್ಯ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ೬೫ ಲಕ್ಷ ರೂ ಬೆಲೆ ಬಾಳುವ ಗಾಂಜಾ ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಪ್ರಕರಣದ ಇನ್ನುಳಿದ ಸಹಚರರಿಗೆ ಶೋಧಕಾರ್ಯ ಮುಂದುವರೆದಿದೆ ಎಂದು ಡಿಸಿಪಿ ಶ್ರೀನಾಥ್ ಜೋಷಿ ಮಹದೇವ್ ತಿಳಿಸಿದ್ದಾರೆ

ಇರಾನಿ ಗ್ಯಾಂಗ್ ನ ಮೂವರು ಸರಗಳ್ಳರ ಸೆರೆ
೫೦ ಲಕ್ಷ ರೂ.ಮೌಲ್ಯದ ಚಿನ್ನದ ಸರಗಳ ವಶ

ಬೆಂಗಳೂರು, ಡಿ.೨೯-ಕುಖ್ಯಾತ ಇರಾನಿ ಗ್ಯಾಂಗ್ ನ ಮೂವರು ಸರಗಳ್ಳರನ್ನು ಬಂಧಿಸಿ ಬರ್ಜರಿ ಬೇಟೆಯಾಡಿರುವ ಪಶ್ಚಿಮ ವಿಭಾಗದ ಪೊಲೀಸರು, ೫೦ ಲಕ್ಷ ರೂ.ಮೌಲ್ಯದ ೧.೨೦ ಕೆ.ಜಿ.ತೂಕದ ಚಿನ್ನದ ಸರಗಳನ್ನು ವಶಪಡಿಸಿಕೊಂಡಿದ್ದಾರೆ.
ಇರಾನಿ ಗ್ಯಾಂಗ್ ನ ವೃತ್ತಿಪರ ಆರೋಪಿಗಳಾದ ಸಲೀಂ ಇರಾನಿ, ಆಜಾದ್ ಇರಾನಿ ಮತ್ತು ಅವ್ನೋ ಇರಾನಿ ಬಂಧಿತ ಇರಾನಿ ಗ್ಯಾಂಗ್ ನ ಆರೋಪಿಗಳಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬಂಧಿತ ಇರಾನಿ ಗ್ಯಾಂಗ್ ನ ಮೂವರು ಸರಗಳ್ಳರ ಬಂಧನದಿಂದ ೨೭ ಪ್ರಕರಣಗಳನ್ನು ಪತ್ತೆಯಾಗಿದೆ ಎಂದು ಹೇಳಿದರು.
ನಗರದಲ್ಲಿ ಇತ್ತೀಚೆಗೆ ಸರ ಅಪಹರಣ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದ್ದುದನ್ನು ಗಮನಿಸಿದ ವಿಜಯನಗರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಕೆ.ನಂಜುಂಡೇಗೌಡ ಅವರ ಮಾರ್ಗದರ್ಶನದಲ್ಲಿ ಮಾಗಡಿ ರಸ್ತೆ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.
ಈ ತಂಡ ಕಾರ್ಯಾಚರಣೆ ನಡೆಸಿ, ಆರೋಪಿ ಸಲೀಂ ಇರಾನಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ. ಈತ ನೀಡಿದ ಮಾಹಿತಿ ಆಧಾರದಲ್ಲಿ ಇತರ ಇಬ್ಬರನ್ನು ಬಂಧಿಸಲಾಗಿದೆ.
ಆರೋಪಿಗಳು ಬೆಂಗಳೂರು ನಗರ ಮತ್ತು ಧಾರವಾಡ ನಗರಗಳಲ್ಲಿ ಒಂಟಿ ಮಹಿಳೆಯರನ್ನು ಗುರುತಿಸಿಕೊಂಡು ಸರ ಅಪಹರಣ ಮಾಡುತ್ತಿದ್ದರು.
ಕಳೆದ ಡಿ. ೧೧ರಂದು ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ಹೆಚ್ಚಿನ ವಿಚಾರಣೆ ನಡೆಸಿದಾಗ ೧೮ ಪೊಲೀಸ್ ಠಾಣೆಗಳಿಗೆ ಸಂಬಂಧಿಸಿದ ಒಟ್ಟು ೨೭ ಪ್ರಕರಣಗಳನ್ನು ಬಾಯ್ಬಿಟ್ಟಿದ್ದಾರೆ.
ಪ್ರಕರಣಗಳ ಸಂಬಂಧಿಸಿದಂತೆ ಸುಮಾರು ೫೦ ಲಕ್ಷ ರೂ. ಬೆಲೆಬಾಳುವ ೧ ಕೆಜಿ ೨೦ ಗ್ರಾಂ ತೂಕದ ಚಿನ್ನದ ಸರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಾಗಡಿ ರಸ್ತೆಯ ೨, ಬ್ಯಾಡರಹಳ್ಳಿಯ ೩, ಚಂದ್ರಾಲೇಔಟ್ ನ ೨, ವಿಜಯನಗರ, ರಾಮಮೂರ್ತಿನಗರದ ತಲಾ ೩, ಜ್ಞಾನಭಾರತಿ, ಕಾಟನ್ ಪೇಟೆ, ಯಲಹಂಕ, ಹೆಣ್ಣೂರು, ಸುಬ್ರಹ್ಮಣ್ಯನಗರ, ಬಾಣಸವಾಡಿ, ಕೊಡಿಗೇಹಳ್ಳಿ, ಬೆಳ್ಳಂದೂರು, ಬಾಗಲೂರು, ಬನಶಂಕರಿ, ವಿದ್ಯಾರಣ್ಯಪುರ, ಜೀವನ ಭೀಮಾನಗರದ ತಲಾ ಒಂದು, ಧಾರವಾಡದ ವಿದ್ಯಾಗಿರಿಯ ೨ ಪ್ರಕರಣಗಳು ಸೇರಿ ಒಟ್ಟು ೨೭ ಪ್ರಕರಣಗಳು ಪತ್ತೆಯಾಗಿವೆ.
ಧಾರವಾಡದಲ್ಲಿ ವಿಲೇವಾರಿ:
ಆರೋಪಿಗಳು ನಗರಕ್ಕೆ ಬಂದು ಸರ ಅಪಹರಣ ಮಾಡಿಕೊಂಡು ಧಾರವಾಡಕ್ಕೆ ಹೋಗುತ್ತಿದ್ದರು. ಎರಡನೇ ಆರೋಪಿ ಅವ್ನೂ ಇರಾನಿ ತನ್ನ ತಾಯಿ ಬಾನು ಇರಾನಿ ಹಾಗೂ ಆ ಪ್ರದೇಶದ ನಿವಾಸಿ ಫಾತೀಮಾ ಮತ್ತು ಗುಲ್ಜಾರ್ ಬೇಗಂ ಅವರ ಕಡೆಯಿಂದ ಚಿನ್ನದ ಸರಗಳನ್ನು ವಿಲೇವಾರಿ ಮಾಡಿಸುತ್ತಿದ್ದರು.
ಒಂದನೇ ಆರೋಪಿ ಸಲೀಂ ಇರಾನಿ ವಿರುದ್ಧ ಆಂಧ್ರಪ್ರದೇಶದ ಗುಂಟೂರು, ಧಾರವಾಡ ಟೌನ್ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಪ್ರಸ್ತುತ ಈತ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದರು.ಡಿಸಿಪಿ ಸಂಜೀವ್ ಪಾಟೀಲ್ ಅವರಿದ್ದರು.

ನವಿ ಆಪ್‌ಗೆ ವಂಚನೆ
ಬೆಂಗಳೂರು,ಡಿ.೨೯-ಅಧಿಕೃತ ಸಾಲ ನೀಡುವ ಆಪ್ ಕಂಪನಿ ನವಿ ಆಪ್‌ಗೆ ಖದೀಮರು ವಂಚಿಸಿರುವ ಸಂಬಂಧ ಚಾಮರಾಜಪೇಟೆ ಪೊಲೀಸರಿಗೆ ದೂರು ನೀಡಲಾಗಿದೆ.
ನವಿ ಆಪ್ ಕಂಪನಿಯ ಮುಖ್ಯಸ್ಥೆ ಐಶ್ವರ್ಯಾ ಪ್ರಸಾದ್ ಅವರು ವಂಚನೆ ಸಂಬಂಧಿಸಿದಂತೆ ನೀಡಿರುವ ದೂರು ದಾಖಲಿಸಿ ಪ್ರಕರಣ ದಾಖಲಿಸಿರುವ
ಚಾಮರಾಜಪೇಟೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಆರ್‌ಬಿಐನ ಎನ್‌ಬಿಸಿ (ಬ್ಯಾಂಕಿಂಗ್‌ಯೇತರ ಹಣಕಾಸು ಸಂಸ್ಥೆ) ಅನುಮತಿ ಪಡೆದು ಕಾರ್ಯ ನಿರ್ವಹಿಸುತ್ತಿದ್ದ ನವಿ ಆಪ್ ತನ್ನ ಗ್ರಾಹಕರಿಗೆ ವೈಯಕ್ತಿಕ ಸಾಲ, ದ್ವಿಚಕ್ರ ವಾಹನ ಸಾಲ ಹಾಗೂ ಗೃಹ ನಿರ್ಮಾಣ ಸಾಲ ನೀಡುತ್ತಿದ್ದು, ೨ ಲಕ್ಷಕ್ಕೂ ಅಧಿಕ ಗ್ರಾಹಕರು, ೧೪೦ ಮಂದಿ ನೌಕರರನ್ನು ಹೊಂದಿದೆ.
ಕಳೆದ ಎರಡು ತಿಂಗಳಿಂದ ಸಾಲದ ಹಣ ಪಾವತಿಸದ ಕೆಲ ಗ್ರಾಹಕರಿಗೆ ಕರೆ ಮಾಡಿದಾಗ ಈಗಾಗಲೇ ಹಣ ಕಟ್ಟಲಾಗಿದೆ ಎಂದು ಗ್ರಾಹಕರು ಉತ್ತರಿಸುತ್ತಿದ್ದರು. ಈ ಬಗ್ಗೆ ಪರಿಶೀಲಿಸಿದಾಗ ಅನಾಮಿಕ ವಂಚಕರು ಕಂಪನಿಯ ಹೆಸರಿನಲ್ಲಿ ಗ್ರಾಹಕರಿಗೆ ಕರೆ ಮಾಡಿ, ಗೂಗಲ್ ಪೇ ಹಾಗೂ ಫೋನ್ ಪೇ ಹಾಗೂ ಬ್ಯಾಂಕ್ ಖಾತೆಗಳಿಗೆ ಹಣ ಸಂದಾಯ ಮಾಡಿಸಿಕೊಂಡಿದ್ದಾರೆನ್ನುವ ವಿಚಾರ ತಿಳಿದು ಬಂದಿದೆ.
ಒಟ್ಟು ೧೬ ಗ್ರಾಹಕರಿಂದ ೯೬,೫೭೩ ರೂ. ಪಡೆದುಕೊಂಡು ವಂಚಿಸಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಂಪನಿ ಮುಖ್ಯಸ್ಥೆ ಐಶ್ವರ್ಯ ಪ್ರಸಾದ್ ದೂರು ನೀಡಿದ್ದಾರೆ.


ಅಫೀಮು ಮಾರಾಟ ಇಬ್ಬರು ಸೆರೆ
ಬೆಂಗಳೂರು,ಡಿ.೨೯-ಹೊಸ ವರ್ಷ ಸಂಭ್ರಮದ ಹಿನ್ನೆಲೆಯಲ್ಲಿ ಮಾದಕ ವಸ್ತು ಅಫೀಮು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಉಪ್ಪಾರಪೇಟೆ ಪೊಲೀಸರು ೧ ಕೆಜಿ ೨೦ಗ್ರಾಂ ಅಫೀಮು ವಶಪಡಿಸಿಕೊಂಡಿದ್ದಾರೆ.
ರಾಜುರಾಮ್ ಮತ್ತು ಉತ್ತಮ್ ಬಂಧಿತ ಆರೋಪಿಗಳಾಗಿದ್ದಾರೆ.ಬಂಧಿತರು ಮೆಜೆಸ್ಟಿಕ್ ಬಳಿ ಗಿರಾಕಿಗಳಿಗೆ ಆಫೀಮು ಮಾರಾಟ ಮಾಡುತ್ತಿದ್ದಾಗ ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಆರೋಪಿಗಳಿಂದ ಒಟ್ಟು ೧ ಕೆಜಿ ೨೦ಗ್ರಾಂ ಅಫೀಮು ವಶಕ್ಕೆ ಪಡೆಯಲಾಗಿದ್ದು, ತನಿಖೆ ಮುಂದುವರೆಸಲಾಗಿದೆ ಎಂದು ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.
ನೈಸ್ ರಸ್ತೆಯಲ್ಲಿ ಕಳವು ವಿಡಿಯೋ ವೈರಲ್ ಖೇಣಿ ದೂರು
ಬೆಂಗಳೂರು,ಡಿ.೨೯- ನೈಸ್ ರಸ್ತೆಯಲ್ಲಿ ಕಳ್ಳತನ ನಡೆಯಲಿದೆ ಎನ್ನುವ ವೈರಲ್ ಆಗಿರುವ ಆಡಿಯೋ, ವಿಡಿಯೋ ಸುಳ್ಳು ಎಂದು ಸ್ಪಷ್ಟನೆ ನೀಡಿರುವ ಮಾಜಿ ಶಾಸಕ ಅಶೋಕ್ ಖೇಣಿ ಅವರು ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಕಿಡಿಗೇಡಿಗಳು ಹರಿಬಿಟ್ಟಿರುವ ವಿಡಿಯೋ ,ಆಡಿಯೋದಲ್ಲಿ ಕಲ್ಲು ಎಸೆಯುತ್ತಾರೆ, ನೈಸ್ ರಸ್ತೆ ಬಳಿ ಕಾದು ಕಳಿತು ಕಲ್ಲು ಎಸೆದು ಗಮನ ಬೇರೆಡೆ ಸೆಳೆದು (ಡೈವರ್ಟ್) ಮಾಡುತ್ತಾರೆ. ಕಾರು ನಿಲ್ಲಿಸಿದ ತಕ್ಷಣ ತಮ್ಮ ವರಸೆಯನ್ನು ಕಳ್ಳರು ತೋರಿಸುತ್ತಾರೆ ಎನ್ನುವ ಸಂದೇಶ ಹರಿಬಿಡಲಾಗಿದೆ. .
ಆದರೆ, ನೈಸ್ ರಸ್ತೆಯಲ್ಲಿ ಈ ರೀತಿಯ ಯಾವುದೇ ಘಟನೆಗಳು ನಡೆದಿಲ್ಲ. ಇದುವರೆಗೂ ಇದರ ಬಗ್ಗೆ ನಮ್ಮ ಗಮನಕ್ಕೆ ಬಂದಿಲ್ಲ, ಯಾವುದೇ ಪ್ರಕರಣ ಕೂಡ ದಾಖಲಾಗಿಲ್ಲ. ಕಂಪನಿಗೆ ಕೆಟ್ಟ ಹೆಸರು ತರಲು ಈ ರೀತಿ ಮಾಡಿದ್ದಾರೆ. ಇದರ ಬಗ್ಗೆ ಸೂಕ್ತ ತನಿಖೆ ನಡೆಸಿ, ಆಡಿಯೋ ಯಾರು ಬಿಟ್ಟಿದ್ದಾರೆ, ಅದನ್ನ ವೈರಲ್ ಮಾಡಿದವರ್ಯಾರು ಎನ್ನುವುದನ್ನು ಪತ್ತೆ ಹಚ್ಚಿ ಕ್ರಮ ತೆಗೆದುಕೊಳ್ಳುವಂತೆ ಸೈಬರ್ ಪೊಲೀಸರಿಗೆ ಖೇಣಿ ಮನವಿ ಮಾಡಿದ್ದಾರೆ.

ಮೊಬೈಲ್‌ಗಾಗಿ ಯುವಕನ ಕೊಲೆ
ಬೆಂಗಳೂರು,ಡಿ.೨೯-ಮೊಬೈಲ್ ವಿಚಾರಕ್ಕೆ ನಡೆದ ಸ್ನೇಹಿತರ ಜಗಳ ವಿಕೋಪಕ್ಕೆ ತಿರುಗಿ ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ದುರ್ಘಟನೆ ವಿಜಯನಗರದ ಪಟ್ಟೇಗಾರ ಪಾಳ್ಯದಲ್ಲಿ ನಿನ್ನೆ ರಾತ್ರಿ ನಡೆದಿದೆ.
ಪಟ್ಟೇಗಾರಪಾಳ್ಯದ ಇರ್ಫಾನ್ (೨೪) ಕೊಲೆಯಾದವರು,ಕೃತ್ಯ ನಡೆಸಿದ ಆತನ ಸ್ನೇಹಿತ ನವೀನ್ ನನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ.
ಪಟ್ಟೇಗಾರಪಾಳ್ಯದ ರಾಜೀವ್ ಗಾಂಧಿ ಕೊಳಗೇರಿಯಲ್ಲಿ ಇರ್ಫಾನ್ ಹಾಗೂ ನವೀನ್ ಗುಜರಿ ಅಂಗಡಿ ನಡೆಸುತ್ತಿದ್ದರು.
ಕೆಲಸ ಮುಗಿಸಿಕೊಂಡು ಮನೆಗೆ ಬಂದಿದ್ದ ಇಬ್ಬರು ರಾತ್ರಿ ೧೦ರ ವೇಳೆ ಮೊಬೈಲ್ ವಿಚಾರಕ್ಕೆ ಮಾಡಿಕೊಂಡ ಜಗಳ ವಿಕೋಪಕ್ಕೆ ತಿರುಗಿದಾಗ ಆಕ್ರೋಶಗೊಂಡ ನವೀನ್ ಚಾಕುವಿನಿಂದ ಇರಿದು ಇಫ್ರಾನ್ ನನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಧಾವಿಸಿದವಿಜಯನಗರ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ
ದಾಖಲಿಸಿ ಕಾರ್ಯಾಚರಣೆ ಕೈಗೊಂಡು ಆರೋಪಿ ನವೀನ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.