ಟ್ರ್ಯಾಕ್ಟರ್ ಉರುಳಿ ಮಹಿಳೆ ಸಾವು:ಪರಿಹಾರಕ್ಕೆ ಆಗ್ರಹ

ಚಿಂಚೋಳಿ,ಮಾ.28-ತಾಲ್ಲೂಕಿನ ಕಲ್ಲೂರ್ ರೋಡ್ ಗ್ರಾಮದ ರಸ್ತೆಯಲ್ಲಿ ಟ್ರ್ಯಾಕ್ಟರ್ ಉರುಳಿ ಬಿದ್ದು ಮಹಿಳೆ ಮೃತಪಟ್ಟು, 15 ಜನರಿಗೆ ಗಾಯಗೊಂಡ ಘಟನೆಗೆ ಲೋಕೋಪಯೋಗಿ ಇಲಾಖೆಯೇ ಹೊಣೆಯಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಸುಧಾಕರರಾವ ಬಿ.ಪಾಟೀಲ ಆರೋಪಿಸಿದ್ದಾರೆ.
ಕಲ್ಲೂರ ಗ್ರಾಮದ ಸಮೀಪ ಚಿಂಚೋಳಿ-ತಾಂಡುರ ಮುಖ್ಯ ರಸ್ತೆಯ ಮೇಲಿಂದ ಸಿ.ಡಿ(ನಾಲಾ/ಅಡ್ಡಮೋರಿ)ಗೆ ತಡೆಗೋಡೆ ಇಲ್ಲದೇ ಇರುವುದು ಮತ್ತು ಯಾವುದೇ ರೀತಿಯ ಸೂಚನಾ ಫಲಕ ಅಳವಡಿಸದೇ ಇರುವುದು ಈ ದುರಂತಕ್ಕೆ ಕಾರಣವಾಗಿದೆ ಎಂದು ಆಪಾದಿಸಿದ್ದಾರೆ. ಒಂದೇ ವೇಳೆ ತಡೆಗೋಡೆ ಇದ್ದಿದ್ದರೆ ಈ ಘಟನೆ ಸಂಭವಿಸುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.
ಈ ಅಪಘಾತದಲ್ಲಿ ಜೀವ ಕಳೆದುಕೊಂಡ ಮಹಿಳೆಯ ಕುಟುಂಬಕ್ಕೆ ಹಾಗೂ ಗಾಯಗೊಂಡವರಿಗೆ ಪರಿಹಾರ ನೀಡಬೇಕು ಮತ್ತು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.