ಟ್ರ್ಯಾಕ್ಟರ್‍ನಲ್ಲಿ ಕೊಂಡೊಯ್ಯುತ್ತಿದ್ದ ಮೇವಿಗೆ ಬೆಂಕಿ: ತಪ್ಪಿದ ಭಾರೀ ಅನಾಹುತ

ಕಲಬುರಗಿ:ಏ.01: ಟ್ರ್ಯಾಕ್ಟರ್‍ನಲ್ಲಿ ಕೊಂಡೊಯ್ಯುತ್ತಿದ್ದ ಮೇವಿಗೆ ವಿದ್ಯುತ್ ತಂತಿ ತಗುಲಿದ ಪರಿಣಾಮ ಮೇವು ಸಂಪೂರ್ಣ ಸುಟ್ಟು ಭಸ್ಮವಾಗಿರುವ ಘಟನೆ ಸೇಡಂ ತಾಲ್ಲೂಕಿನ ಬಿಬ್ಬಳ್ಳಿ ಗ್ರಾಮದಲ್ಲಿ ಬುಧವಾರ ರಾತ್ರಿ ವರದಿಯಾಗಿದೆ.
ಮೇವಿಗೆ ವಿದ್ಯುತ್ ತಂತಿ ತಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಟ್ರ್ಯಾಕ್ಟರ್ ಚಾಲಕನು ಟ್ರಾಲಿಯಿಂದ ಎಂಜಿನ್ ಬೇರ್ಪಡಿಸಿದ್ದಾನೆ. ಇದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ. ಇಲ್ಲವಾದಲ್ಲಿ ಚಾಲಕನ ಜೀವಕ್ಕೂ ಸಹ ಅಪಾಯ ಹಾಗೂ ಅಕ್ಕಪಕ್ಕದ ಮನೆಗಳಿಗೂ ಸಹ ಬೆಂಕಿ ವ್ಯಾಪಿಸುವ ಅಪಾಯ ಹೆಚ್ಚಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಟ್ರಾಲಿಯಲ್ಲಿದ್ದ ಮೇವು ಬೆಂಕಿಯಿಂದ ಸಂಪೂರ್ಣ ಸುಟ್ಟು ಹೋಯಿತು. ಅಕ್ಕ, ಪಕ್ಕದ ಮನೆಗಳ ಚಿಕ್ಕ ಮಾರ್ಗದಲ್ಲಿಯೇ ಈ ಘಟನೆ ನಡೆದಿದ್ದರೂ ಸಹ ಯಾರಿಗೂ ಯಾವುದೇ ರೀತಿಯಲ್ಲಿ ಅಪಾಯ ಆಗಲಿಲ್ಲ. ಬೆಂಕಿ ಆಕಸ್ಮಿಕ ಘಟನೆಯ ಸ್ಥಳದ ಅಕ್ಕ, ಪಕ್ಕದ ನಿವಾಸಿಗಳು ಜಾಗೃತಿ ವಹಿಸಿ ಬೆಂಕಿಯಿಂದ ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ಸ್ಥಳಕ್ಕೆ ಬಂದ ಅಗ್ನಿಶಾಮಕದಳದ ಸಿಬ್ಬಂದಿ ನಂತರ ಬೆಂಕಿಯನ್ನು ಶಮನಗೊಳಿಸಿದರು. ಮೇವು ಕಣಕಿ ಗ್ರಾಮದ ಬೀರಪ್ಪ ಮಾರ್ತಂಡಪ್ಪ ಪೂಜಾರಿ ಎಂಬುವವರಿಗೆ ಸೇರಿದ್ದು ಎನ್ನಲಾಗಿದೆ.