ಇಬ್ಬರ ಸೆರೆ
ಬೆಂಗಳೂರು, ಏ.೨೭-ಸನ್ ಜೋಸ್ ವೆಲ್ತ್ ಮ್ಯಾನೇಜ್ ಮೆಂಟ್ ಹೆಸರಿನಲ್ಲಿ ಕರೆನ್ಸಿ ಟ್ರೇಡಿಂಗ್ ನಡೆಸುವುದಾಗಿ ಹೇಳಿ, ಹಣ ಹೂಡಿಕೆ ಮಾಡಿದವರಿಗೆ ಹೆಚ್ಚಿನ ದರದಲ್ಲಿ ಲಾಭಾಂಶ ನೀಡುವುದಾಗಿ ನಂಬಿಸಿ ಸಾರ್ವಜನಿಕರಿಂದ ಕೋಟ್ಯಾಂತರ ರೂ ಹಣ ಹೂಡಿಕೆ ಮಾಡಿಸಿಕೊಂಡು ಹಣ ವಾಪಸ್ಸು ನೀಡದೆ ವಂಚಿಸುತ್ತಿದ್ದ ಇಬ್ಬರು ಖದೀಮರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ನಾಗದೇವನಹಳ್ಳಿಯ ಜ್ಞಾನ ಭಾರತಿ ಬಡಾವಣೆಯ ಅಶೋಕ್ ಮೊಗವೀರ(೫೨) ಯಲಹಂಕದ ಮಾರುತಿ ನಗರದ
ಜೋಜಿ ಪೌಲ್ ಜೆ ಅಲಿಯಾಸ್ ಜಾಜಿಪಾಲ್(೨೯)ಬಂಧಿತ ಆರೋಪಿಯಾಗಿದ್ದಾರೆ ಎಂದು ಜಂಟಿ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ ತಿಳಿಸಿದರು.
ಕಳೆದ ಮಾ.೧ ರಂದು ಅನಿತಾ ವೈ.ಎನ್ ಅವರು ರಾಜಾಜಿನಗರ ಠಾಣೆಯಲ್ಲಿ ಡಾ. ರಾಜ್‌ಕುಮಾರ್ ರಸ್ತೆಯ ಅಂಬಿಕಾ ಪ್ಲಾಜಾದಲ್ಲಿರುವ ಸನ್ ಜೋಸ್ ವೆಲ್ತ್ ಮ್ಯಾನೇಜ್ ಮೆಂಟ್ ಪಾಟ್ನರ್ ಗಳು, ಕರೆನ್ಸಿ ಟ್ರೇಡಿಂಗ್ ನಡೆಸುವುದಾಗಿ ಹೇಳಿ, ನಮ್ಮ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ದರದಲ್ಲಿ ಲಾಭಾಂಶವನ್ನು ನೀಡುವುದಾಗಿ ನಂಬಿಸಿ ನನ್ನಿಂದ ೨೭,೫೦ ಲಕ್ಷ ರೂ ಹಣವನ್ನು ತಮ್ಮ ಸನ್ ಜೋಸ್ ವೆಲ್ತ್ ಮ್ಯಾನೇಜ್ ಮೆಂಟ್ ಹೆಸರಿನಲ್ಲಿ ಹೂಡಿಕೆ ಮಾಡಿಸಿಕೊಂಡು ಸ್ವಲ್ಪ ದಿನಗಳ ನಂತರ ಅವರು ಹೇಳಿದಂತೆ ಲಾಭಾಂಶವನ್ನು ನೀಡದೆ, ನಾನು ಹೂಡಿಕೆ ಮಾಡಿದ್ದ ಹಣವನ್ನು ವಾಪಸ್ಸು ಕೊಡದೆ ಮೋಸ ಮಾಡಿದ್ದಾರೆ ಎಂದು ನೀಡಿದ್ದರು.
ಅದರಂತೆ ಪ್ರಕರಣ ದಾಖಲಿಸಿದ್ದು ಮೇಲಾಧಿಕಾರಿಗಳ ಆದೇಶದಂತೆ ಕೇಸಿನ ಕಡತವನ್ನು ಪಡೆದು, ತನಿಖೆ ಮುಂದುವರಿಸಿ ಸನ್ ಜೋಸ್ ವೆಲ್ತ್ ಮ್ಯಾನೇಜ್ ಮೆಂಟ್ ಹೆಸರಿನಲ್ಲಿ ಪಾಟ್ನರ್ ಗಳಾದ ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ ಎಂದು ಹೇಳಿದರು.
ಬಂಧಿತರಲ್ಲಿ ಓರ್ವ ಜನರಿಗೆ ವಂಚಿಸಿ ಕಳೆದ ಸೆಪ್ಟಂಬರ್-೨೦೨೨ ರಿಂದ ಗೋವಾ ರಾಜ್ಯದಲ್ಲಿ ತಲೆಮರೆಸಿಕೊಂಡು ಓಡಾಡಿಕೊಂಡಿದ್ದು, ಆತನ ಬಗ್ಗೆ ಮಾಹಿತಿಯನ್ನು ಕಲೆ ಹಾಕಿ, ಗೋವಾ ರಾಜ್ಯದ ಪೊರ್‍ವೊರಿಮ್ ಪೊಲೀಸ್ ಠಾಣಾ ಸರಹದ್ದಿನ ಪೆಂಚ ಡೆ ಪ್ರಾಂಕಾದಲ್ಲಿ ಪತ್ತೆ ಮಾಡಿ ಆರೋಪಿಯನ್ನು ದಸ್ತಗಿರಿ ಮಾಡಿಕೊಂಡು ಬಂದಿದ್ದು, ಆರೋಪಿಗಳ ಮಾಹಿತಿಯಂತೆ, ಅಮಾಯಕ ಸಾರ್ವಜನಿಕರನ್ನು ಕರೆನ್ಸಿ ಟ್ರೇಡಿಂಗ್ ಬಿಸಿನೆಸ್ ಮಾಡುವುದಾಗಿ ನಂಬಿಸಿ, ನಮ್ಮ ಸನ್ ಜೋಸ್ ವೆಲ್ತ್ ಮ್ಯಾನೇಜ್ಮೆಂಟ್ ಹೆಸರಿನಲ್ಲಿ ಹಣ ಹೂಡಿಕೆ ಮಾಡಿದವರಿಗೆ ಶೇ ೫ ನಿಂದ ೧೫ ವರೆಗೆ ಹೂಡಿಕೆ ಮಾಡಿದ ಹಣಕ್ಕೆ ೩೬ ದಿನಗಳಿಗೆ ಪೇ ಔಟ್ ನೀಡುವುದಾಗಿ ಹಾಗೂ ನಮ್ಮ ಸನ್ ಜೋಸ್ ವೆಲ್ತ್ ಮ್ಯಾನೇಜ್ಮೆಂಟ್ ಹೆಸರಿನಲ್ಲಿ ಹಣ ಹೂಡಿಕೆ ಮಾಡಿಸಿದವರಿಗೆ ಶೇ ೨ರಿಂದ ೫ ಕಮೀಷನ್ ನೀಡುತ್ತೇವೆ ಎಂದು ನಂಬಿಸಿ ಸುಮಾರು ೮೭೦ ಕ್ಕೂ ಹೆಚ್ಚಿನ ಸಾರ್ವಜನಿಕರಿಂದ ಸುಮಾರು ೩೧ಲಕ್ಷಕ್ಕೂ ಅಧಿಕ ಹಣವನ್ನು ಹೂಡಿಕೆ ಮಾಡಿಸಿಕೊಂಡು, ಆರೋಪಿಗಳು ಯಾವುದೇ ಟ್ರೇಡಿಂಗ್ ಮಾಡದೆ, ಸಾರ್ವಜನಿಕರಿಂದ ಹೂಡಿಕೆ ಮಾಡಿಸಿಕೊಂಡ ಹಣದಲ್ಲಿಯೇ ಹೆಚ್ಚಿನ ದರದಲ್ಲಿ ಪೇ ಔಟ್ ಮತ್ತು ಕಮೀಷನ್ ರೂಪದಲ್ಲಿ ಹಣವನ್ನು ವಾಪಸ್ಸು ನೀಡಿ, ಉಳಿದ ಹಣದಲ್ಲಿ ಸ್ಯಾಂಜೋಸ್ ವೆಂಚರ್ಸ್, ಗ್ರಾವಿಟಿ ಸ್ಪೋಟ್ರ್ಸ್, ಗ್ರಾವಿಟಿ ಕ್ಲಬ್ ರೆಸಾರ್ಟ್ ಪ್ರೈ. ಇಂಡಿಯಾ ಲಿ. ಹೆಸರಿನಲ್ಲಿ ಹಣವನ್ನು ತಮ್ಮ ಸ್ವಂತ ಬಿಸಿನೆಸ್‌ಗಳಿಗೆ ಬಳಸಿಕೊಂಡು, ಹಣವನ್ನು ದುರುಪಯೋಗ ಪಡಿಸಿಕೊಂಡು ಅಮಾಯಕ ಸಾರ್ವಜನಿಕರನ್ನು ವಂಚಿಸಿರುವುದು ತನಿಖೆಯಿಂದ ತಿಳಿದು ಬಂದಿರುತ್ತದೆ.
ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದು ಕೇಸಿನ ತನಿಖೆ ಮುಂದುವರೆಸಲಾಗಿದೆ ಎಂದು ತಿಳಿಸಿದರು.