ಬೆಂಗಳೂರು,ಸೆ.೨೭:ಟ್ರಿನಿಟಿ ಹೌಸ್ ಬಿಲ್ಡಿಂಗ್ ಕೋ ಆಪರೇಟಿವ್ ಸೊಸೈಟಿ ನಿಯಮಿತ ಸಂಘವು ಸದಸ್ಯರಿಗೆ ನಿವೇಶನಗಳನ್ನು ಹಂಚಿಕೆ ಮಾಡುವುದಾಗಿ ಹಣ ಪಡೆದು ಇದುವರೆಗೂ ನಿವೇಶನ ಹಂಚಿಕೆ ಮಾಡಿಲ್ಲ ಎಂದು ದಿ ಕಾಮನ್ ಪೀಪಲ್ಸ್ ವೆಲ್‌ಫೇರ್ ಫೌಂಡೇಷನ್ ಆರೋಪಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಫೌಂಡೇಷನ್ ಅಧ್ಯಕ್ಷ ಪುಷ್ಪಾ ಅವರು, ೧೯೮೫ರಲ್ಲಿ ಈ ಸೊಸೈಟಿ ಸ್ಥಾಪಿಸಿ ಸಾವಿರಾರು ಜನರಿಂದ ಹಣ ಪಡೆದು ಜಾಗ ಸ್ವಾಧೀನಪಡಿಸಿಕೊಂಡು ಸದಸ್ಯರಿಗೆ ಮನೆ ಕಟ್ಟಿಕೊಳ್ಳಲು ನಿವೇಶನ ವ್ಯವಸ್ಥೆ ಮಾಡುವುದಾಗಿ ಹೇಳಿ ವಂಚಿಸಿದೆ ಎಂದು ದೂರಿದೆ.
ಈ ಸಂಬಂಧ ಸಹಕಾರಿ ಇಲಾಖೆಯ ಅಧೀನ ಕಾರ್ಯದರ್ಶಿ ಆರ್.ವಿ. ರಾಘವನ್ ಅವರಿಗೆ ದೂರು ನೀಡಿದ್ದು, ಈ ಬಗ್ಗೆ ಕ್ರಮ ಕೈಗೊಂಡು ಸದಸ್ಯರಿಗೆ ನ್ಯಾಯ ಒದಗಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
ಇದುವರೆಗೂ ಚುನಾವಣೆ ನಡೆಸಿಲ್ಲ, ಸಂಘದ ಲೆಕ್ಕ ಪರಿಶೋಧನೆಯ ಬಗ್ಗೆ ಆಯಾ ವಾರ್ಷಿಕ ಮಹಾ ಸಭೆಯಲ್ಲಿ ಮಂಡಿಸಿಲ್ಲ ಎಂದು ಮನವಿಯಲ್ಲಿ ಪುಷ್ಪಾ ಉಲ್ಲೇಖಿಸಿದ್ದಾರೆ.