ಟ್ರಿಗರ್ ಮೇಲೆ ಬೆರಳಿದೆ : ಇಸ್ರೇಲ್‌ಗೆ ಇರಾನ್ ತಾಕೀತು

ಟೆಲ್ ಅವೀವ್, ಅ.೧೬- ಇಸ್ರೇಲ್ ಹಾಗೂ ಇರಾನ್ ನಡುವಿನ ಹಗೆತನದ ಬಗ್ಗೆ ಇಡೀ ಜಾಗತಿಕ ಮಟ್ಟಕ್ಕೆ ಅರಿವಿದೆ. ಬದ್ದ ವೈರಿಗಳಾಗಿರುವ ಇವರ ನಡುವಿನ ಮುಸುಕಿನ ಗುದ್ದಾಟ ಕಳೆದ ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಈ ನಡುವೆ ಗಾಜಾ ಪಟ್ಟಿಯ ಮೇಲೆ ಭೀಕರ ದಾಳಿ ನಡೆಸುತ್ತಿರುವ ಇಸ್ರೇಲ್ ಮುಂದೆ ಪೂರ್ಣ ಪ್ರಮಾಣದ ನೆಲದಿಂದಲೇ ದಾಳಿಗೆ ಸಿದ್ಧ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಇಸ್ರೇಲ್‌ಗೆ ಇರಾನ್ ಕಠಿಣ ಸವಾಲು ನೀಡಿದ್ದು, ಬಂದೂಕಿನ ಟ್ರಿಗರ್ ಮೇಲೆ ನಮ್ಮ ಬೆರಳಿದೆ ಎಂದು ನೇರ ಎಚ್ಚರಿಕೆ ಸಂದೇಶ ರವಾನಿಸಿದೆ.
ಇಸ್ರೇಲಿಗರ ಆಕ್ರಮಣಗಳು ನಿಲ್ಲದಿದ್ದರೆ, ಈ ಪ್ರದೇಶದ ಎಲ್ಲಾ ದೇಶಗಳ ಕೈಗಳು ಪ್ರಚೋದಕದಲ್ಲಿರಲಿದೆ. ಪರಿಸ್ಥಿತಿಯ ನಿಯಂತ್ರಣ ಮತ್ತು ಸಂಘರ್ಷಗಳ ವಿಸ್ತರಣೆಯನ್ನು ಯಾರೂ ಖಾತರಿಪಡಿಸುವುದಿಲ್ಲ. ಯುದ್ಧ ಮತ್ತು ಬಿಕ್ಕಟ್ಟಿನ ವ್ಯಾಪ್ತಿಯನ್ನು ವಿಸ್ತರಿಸುವುದನ್ನು ತಡೆಯಲು ಆಸಕ್ತಿ ಹೊಂದಿರುವವರು, ಗಾಜಾದಲ್ಲಿ ನಾಗರಿಕರು ಮತ್ತು ನಾಗರಿಕರ ವಿರುದ್ಧ ಪ್ರಸ್ತುತ ಅನಾಗರಿಕ ದಾಳಿಗಳನ್ನು ತಡೆಯಬೇಕಾಗಿದೆ ಎಂದು ಇರಾನ್ ವಿದೇಶಾಂಗ ಸಚಿವ ಹೊಸೈನ್ ಅಮಿರಾಬ್ದೊಲ್ಲಾಹಿಯಾನ್ ಎಚ್ಚರಿಕೆ ನೀಡಿದ್ದಾರೆ.
ಗಾಜಾಗೆ ಮಾನವೀಯ ನೆರವು
ಪೂರೈಕೆಗೆ ಅಮೆರಿಕಾ ಬೆಂಬಲ
ಗಾಜಾ ಪ್ರದೇಶಕ್ಕೆ ಮಾನವೀಯ ನೆರವು ಪೂರೈಸುವ ಮತ್ತು ನಾಗರಿಕರನ್ನು ರಕ್ಷಿಸುವ ಪ್ರಯತ್ನಗಳಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಅವರು ಫೆಲೆಸ್ತೀನ್ ಅಧ್ಯಕ್ಷ ಮಹ್ಮೂದ್ ಅಬ್ಬಾಸ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹುಗೆ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಇದರ ಬೆನ್ನಲ್ಲೇ ಇಸ್ರೇಲ್‌ಗೆ ಬೆಂಬಲ ನೀಡುವ ಸಲುವಾಗಿ ಅಮೆರಿಕಾ ತನ್ನ ಎರಡನೇ ಯುದ್ಧನೌಕೆಯನ್ನು ರವಾನಿಸುವುದಾಗಿ ತಿಳಿಸಿದೆ.
ಒಂದೆಡೆ ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ಬಿರುಸಿನ ದಾಳಿ ನಡೆಸುತ್ತಿದ್ದರೆ ಮತ್ತೊಂದೆಡೆ ಯುದ್ದದ ವ್ಯಾಪ್ತಿ ಮತ್ತಷ್ಟು ವಿಸ್ತರಣೆಯಾಗುವ ಹಿನ್ನೆಲೆಯಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಥೋನಿ ಬ್ಲಿಂಕೆನ್ ಮಧ್ಯಪ್ರಾಚ್ಯದಾದ್ಯಂತ ಬಿರುಸಿನ ರಾಜತಾಂತ್ರಿಕ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ. ಗಾಜಾದಿಂದ ಫೆಲೆಸ್ತೀನೀಯರ ಸ್ಥಳಾಂತರಕ್ಕೆ ಇಸ್ರೇಲ್ ನೀಡಿರುವ ಎಚ್ಚರಿಕೆಯನ್ನು ಸಂಪೂರ್ಣ ತಿರಸ್ಕರಿಸುವುದಾಗಿ ಅಬ್ಬಾಸ್ ಸ್ಪಷ್ಟಪಡಿಸಿದ್ದಾರೆ ಎಂದು ಫೆಲೆಸ್ತೀನ್ ಅಧ್ಯಕ್ಷರ ಕಚೇರಿಯ ಹೇಳಿಕೆ ತಿಳಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ಬೈಡೆನ್ ‘ಹಮಾಸ್ ಫೆಲೆಸ್ತೀನೀಯರ ಘನತೆ ಹಾಗೂ ಸ್ವ-ನಿರ್ಣಯದ ಪ್ರತಿನಿಧಿಯಲ್ಲ’ ಎಂದು ಹೇಳಿರುವುದಾಗಿ ಅಮೆರಿಕ ಸರಕಾರದ ಹೇಳಿಕೆ ತಿಳಿಸಿದೆ. ಇದೇ ವೇಳೆ ಇಸ್ರೇಲ್ ಪ್ರಧಾನಿಗೆ ಕರೆ ಮಾಡಿದ ಬೈಡನ್ ‘ಇಸ್ರೇಲ್ ಗೆ ಅಮೆರಿಕದ ಅಚಲವಾದ ಬೆಂಬಲವನ್ನು ಪುನರುಚ್ಚರಿಸಿದರು. ಜತೆಗೆ, ಗಾಜಾದ ನಿವಾಸಿಗಳಿಗೆ ಆಹಾರ, ನೀರು ಮತ್ತು ವೈದ್ಯಕೀಯ ನೆರವು ಖಾತರಿಪಡಿಸಲು ನಡೆಯುತ್ತಿರುವ ಪ್ರಾದೇಶಿಕ ಪ್ರಯತ್ನಗಳನ್ನು ವಿವರಿಸಿದರು’ ಎಂದು ಅಮೆರಿಕದ ಮೂಲಗಳು ಹೇಳಿವೆ. ಈ ಮಧ್ಯೆ, ಸೌದಿ ಮತ್ತು ಯುಇಎ ಮುಖಂಡರನ್ನು ಭೇಟಿ ಮಾಡಿರುವ ಬ್ಲಿಂಕೆನ್ ಗಾಜಾವನ್ನು ತೊರೆಯಲು ಬಯಸುವ ಜನರಿಗೆ ಸುರಕ್ಷಿತ ಮಾರ್ಗದ ವ್ಯವಸ್ಥೆ ಮಾಡುವ ಅಗತ್ಯದ ಬಗ್ಗೆ ಚರ್ಚಿಸಿದ್ದಾರೆ. ಬಳಿಕ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿಗೆ ಕರೆ ಮಾಡಿದ ಬ್ಲಿಂಕೆನ್ ‘ಯುದ್ಧವು ಇನ್ನಷ್ಟು ಪ್ರದೇಶಕ್ಕೆ ವಿಸ್ತರಿಸದಂತೆ ತಡೆಯಲು ಚೀನಾ ಮಧ್ಯಪ್ರಾಚ್ಯದಲ್ಲಿ ಹೊಂದಿರುವ ಪ್ರಭಾವವನ್ನು ಬಳಸುವಂತೆ’ ಕರೆ ಮಾಡಿದರು. ಈ ಪ್ರದೇಶದ ಸ್ಥಿರತೆ ಚೀನಾದ ಹಿತಾಸಕ್ತಿಗೂ ಪೂರಕವಾಗಿದೆ ಎಂಬುದು ನಮ್ಮ ನಂಬಿಕೆಯಾಗಿದೆ ಎಂದು ಅಮೆರಿಕದ ಉನ್ನತ ಮೂಲಗಳು ಹೇಳಿವೆ.

ನೀರು ಪೂರೈಕೆಗೆ ಒಪ್ಪಿಗೆ
ದಕ್ಷಿಣ ಗಾಜಾದ ಪ್ರದೇಶಗಳಿಗೆ ನೀರು ಪೂರೈಕೆಯನ್ನು ಮರು ಆರಂಭಿಸುವ ಬಗ್ಗೆ ನಿರ್ಧರಿಸಲಾಗಿದೆ. ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಾಗೂ ಅಮೆರಿಕ ಅಧ್ಯಕ್ಷ ಜೋ ಬೈಡನ್ ನಡುವೆ ನಡೆದ ಸಭೆಯ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಇಸ್ರೇಲ್ ನ ಇಂಧನ ಸಚಿವರು ರವಿವಾರ ಹೇಳಿದ್ದಾರೆ. ಆಂಶಿಕವಾಗಿ ನೀರು ಪೂರೈಸುವುದು ಇಸ್ರೇಲ್ ನ ಯೋಜನೆಯಾಗಿದೆ ಎನ್ನಲಾಗಿದೆ. ಇಸ್ರೇಲ್ ಮೇಲೆ ಗಾಝಾ ಉಗ್ರರ ಪಡೆ ದಾಳಿ ಆರಂಭವಾದ ಬಳಿಕ ಗಾಜಾ ಪಟ್ಟಿಗೆ ಪೂರೈಕೆಯಾಗುತ್ತಿದ್ದ ಆಹಾರ, ನೀರು, ಇಂಧನ, ಅಂತರ್ಜಾಲ, ಔಷಧ ಸೇರಿದಂತೆ ಪ್ರಮುಖ ವಸ್ತುಗಳ ಮೇಲೆ ಇಸ್ರೇಲ್ ನಿರ್ಬಂಧ ಹೇರಿದೆ. ಸದ್ಯ ಇದರಿಂದ ಅಲ್ಲಿನ ಜನತೆಗೆ ಕುಡಿಯಲು ಕೂಡ ನೀರಿಲ್ಲದ ಸ್ಥಿತಿ ಉಂಟಾಗಿರುವ ಹಿನ್ನೆಲೆಯಲ್ಲಿ ಮಾನವೀಯ ನೆಲೆಯಲ್ಲಿ ನೀರು ಪೂರೈಕೆಗೆ ಇಸ್ರೇಲ್ ಸಮ್ಮತಿ ಸೂಚಿಸಿದೆ.

ಇಸ್ರೇಲ್ ವಿರುದ್ಧ ಕಿಡಿಕಾರಿದ ಚೀನಾ
ಗಾಜಾದಲ್ಲಿ ಇಸ್ರೇಲ್ ನ ಕೃತ್ಯಗಳು ಆತ್ಮರಕ್ಷಣೆಯ ವ್ಯಾಪ್ತಿಯನ್ನು ಮೀರಿದೆ. ಗಾಜಾದಲ್ಲಿನ ಜನರನ್ನು ಸಾಮೂಹಿಕವಾಗಿ ಶಿಕ್ಷಿಸುವ ಕಾರ್ಯದಿಂದ ಇಸ್ರೇಲ್ ಸರಕಾರ ಹಿಂದೆ ಸರಿಯಬೇಕು ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಹೇಳಿದ್ದಾರೆ. ಗಾಜಾದಲ್ಲಿನ ಹಮಾಸ್ ಹೋರಾಟಗಾರರ ವಿರುದ್ಧ ನೆಲದ ಮೇಲಿನ ಆಕ್ರಮಣಕ್ಕೆ ಇಸ್ರೇಲ್ ಸಿದ್ಧಗೊಳ್ಳುತ್ತಿರುವ ನಡುವೆಯೇ ವಾಂಗ್ ಯಿ ಸೌದಿ ಅರೆಬಿಯಾದ ವಿದೇಶಾಂಗ ಸಚಿವ ಫೈಸಲ್ ಬಿನ್ ಫರ್ಹಾನ್ ಗೆ ಕರೆ ಮಾಡಿ ಇಸ್ರೇಲ್-ಹಮಾಸ್ ಸಂಘರ್ಷದ ಬಗ್ಗೆ ಚರ್ಚೆ ನಡೆಸಿದರು. ಬಳಿಕ ಮಾಧ್ಯಮಗಳಿಗೆ ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ ವಾಂಗ್ ಯಿ ‘ಇಸ್ರೇಲ್ ಅಂತರಾಷ್ಟ್ರೀಯ ಸಮುದಾಯ ಮತ್ತು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿಯ ಕರೆಗಳನ್ನು ಪ್ರಾಮಾಣಿಕವಾಗಿ ಆಲಿಸಬೇಕು ಮತ್ತು ಗಾಜಾ ಜನತೆಯ ಸಾಮೂಹಿಕ ಶಿಕ್ಷೆಯ ಕೃತ್ಯವನ್ನು ಸ್ಥಗಿತಗೊಳಿಸಬೇಕು. ಫೆಲೆಸ್ತೀನ್ ರಾಷ್ಟ್ರದ ನ್ಯಾಯಯುತ ಬೇಡಿಕೆಗೆ ನಮ್ಮ ಬೆಂಬಲವಿದೆ’ ಎಂದು ಹೇಳಿದ್ದಾರೆ.

೧೦ ಸಾವಿರ ಯೋಧರ ರವಾನೆ!
ಗಾಜಾ ಪ್ರದೇಶವನ್ನು ವಶಪಡಿಸಿಕೊಳ್ಳಲು ಮತ್ತು ಹಮಾಸ್ ಮುಖಂಡರನ್ನು ನಾಶಗೊಳಿಸಲು ಇಸ್ರೇಲ್ ತನ್ನ ೧೦,೦೦೦ಕ್ಕೂ ಅಧಿಕ ಯೋಧರನ್ನು ರವಾನಿಸುವ ಯೋಜನೆ ರೂಪಿಸಿದೆ ಎಂದು ಇಸ್ರೇಲ್ ಸೇನಾಧಿಕಾರಿಗಳನ್ನು ಉಲ್ಲೇಖಿಸಿ ‘ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ. ಇಸ್ರೇಲಿ ಅಧಿಕಾರಿಗಳ ಪ್ರಕಾರ, ಯೋಧರು ಶಂಕಿತರ ಮೇಲೆ ಗುಂಡು ಹಾರಿಸಲು ಸುಲಭವಾಗುವಂತೆ ಇಸ್ರೇಲ್ ಭದ್ರತಾ ಪಡೆಯ ನಿಯಮವನ್ನು ಸಡಿಲಿಸಲಾಗಿದೆ. ಇದು ಗಾಝಾದ ಜನತೆಯ ಜತೆಗಿನ ಯುದ್ಧವಲ್ಲ. ನಮ್ಮ ಜನತೆಗೆ ಸಂಬಂಧಿಸಿದ ಜವಾಬ್ದಾರಿ ನಮಗಿದೆ ಮತ್ತು ಇಂತಹ ವಿಷಯ ಮತ್ತೆ ಮರುಕಳಿಸದಂತೆ ಖಾತರಿ ಪಡಿಸಬೇಕಿದೆ. ಆದ್ದರಿಂದಲೇ ಗಾಜಾದಿಂದ ಹಮಾಸ್ ಅನ್ನು ನಿವಾರಿಸುವ ಕಾರ್ಯದಲ್ಲಿ ಇಸ್ರೇಲ್ ಪಡೆ ತೊಡಗಿದೆ ಎಂದು ಇಸ್ರೇಲ್ ಪಡೆಯ ವಕ್ತಾರ ಲೆ. ಕ. ರಿಚರ್ಡ್ ಹೆಚಿಟ್ ಟ್ವೀಟ್ ಮಾಡಿದ್ದಾರೆ. ಗಾಝಾದ ಉತ್ತರದಲ್ಲಿ ಹಮಾಸ್ ಅನ್ನು ಕೇಂದ್ರೀಕರಿಸಿ ನಡೆಯುವ ಕಾರ್ಯಾಚರಣೆಯಲ್ಲಿ ನಾಗರಿಕರ ಸಾವು-ನೋವನ್ನು ನಿವಾರಿಸುವುದು ಸ್ಥಳೀಯರ ಸ್ಥಳಾಂತರದ ಉದ್ದೇಶವಾಗಿದೆ ಎಂದವರು ಸ್ಪಷ್ಟಪಡಿಸಿದ್ದಾರೆ.

ಪ್ರಮುಖ ಬೆಳವಣಿಗೆಗಳು:

  • ಉತ್ತರ ಇಸ್ರೇಲ್ ನ ಗಡಿಭಾಗದಲ್ಲಿ ಹಿಜ್ಬುಲ್ಲಾ ಜತೆ ಯುದ್ಧ ನಡೆಸಲು ತನಗೆ ಆಸಕ್ತಿಯಿಲ್ಲ. ಹಿಜ್ಬುಲ್ಲಾ ಗುಂಪು ನಮ್ಮನ್ನು ಕೆಣಕದಿದ್ದರೆ ಅವರ ವಿರುದ್ಧ ನಾವು ದಾಳಿ ನಡೆಸುವುದಿಲ್ಲ ಎಂದು ಇಸ್ರೇಲ್ ನ ರಕ್ಷಣಾ ಸಚಿವರು ಹೇಳಿದ್ದಾರೆ.
  • ಇಸ್ರೇಲ್ ನೀಡಿರುವ ಸ್ಥಳಾಂತರದ ಆದೇಶವು ಉತ್ತರ ಗಾಜಾದಲ್ಲಿನ ಆಸ್ಪತ್ರೆಯಲ್ಲಿರುವ ನವಜಾತ ಶಿಶುಗಳು, ಐಸಿಯುನಲ್ಲಿರುವ ರೋಗಿಗಳು ಸೇರಿದಂತೆ ೨೦೦೦ಕ್ಕೂ ಅಧಿಕ ರೋಗಿಗಳಿಗೆ ಮರಣದಂಡನೆಗೆ ಸಮವಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.
  • ಹಮಾಸ್ ಉಗ್ರರ ಕೃತ್ಯಗಳಿಂದಾಗಿ ಗಾಜಾ ಪಟ್ಟಿಯಲ್ಲಿ ಅಮಾಯಕ ಫೆಲೆಸ್ತೀನೀಯರು ಅನವಶ್ಯಕ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಬೈಡನ್ ಹೇಳಿದ್ದಾರೆ.
  • ಒಂದು ವೇಳೆ ಇಸ್ರೇಲ್ ಗಾಜಾವನ್ನು ಆಕ್ರಮಿಸಿದರೆ ಪರಿಸ್ಥಿತಿ ಕೈಮೀರಿ ಹೋಗದು ಎಂದು ಯಾರೂ ಗ್ಯಾರಂಟಿ ನೀಡಲು ಸಾಧ್ಯವಿಲ್ಲ ಎಂದು ಇರಾನ್ ಎಚ್ಚರಿಕೆ ನೀಡಿದೆ.
  • ನಾಗರಿಕರು ಸುರಕ್ಷಿತವಾಗಿ ಗಾಜಾದಿಂದ ಹೊರತೆರಲು ಕಾರಿಡಾರ್ ತೆರೆಯಲಾಗಿದ್ದರೂ ಯುದ್ಧಗ್ರಸ್ಥ ಗಾಜಾ ಬಿಟ್ಟು ಸುರಕ್ಷಿತ ಪ್ರದೇಶಕ್ಕೆ ತೆರಳುತ್ತಿರುವ ಫೆಲೆಸ್ತೀನೀಯರನ್ನು ಹಮಾಸ್ ತಡೆಯುತ್ತಿದೆ ಎಂದು ಇಸ್ರೇಲ್ ಆರೋಪಿಸಿದೆ.