ಟ್ರಾವೆಜ್‌ ಏಜೆನ್ಸಿಯ ಐಡಿ ಕಳವು ಮಾಡಿ ವಂಚನೆ

ಉಡುಪಿ, ಜು.೧೮- ಟ್ರಾವೆಲಿಂಗ್ ಸಂಸ್ಥೆಯ ಐಡಿ ಕಳವು ಮಾಡಿ, ಪಾಸ್ವಾರ್ಡ್ ರಿಸೆಟ್ ಮಾಡಿಕೊಂಡು ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳ ಕುಕ್ಕುಂದೂರು ಬಂಗ್ಲೆಗುಡ್ಡೆಯ ರುಡಾಲ್ಫ್ ಡಿಸೋಜ (44) ಎಂಬವರು ೨೦೧೮-೧೯ನೆ ಸಾಲಿನ ಟಿಬಿಓ ಟಾಕ್ ಕಂಪೆನಿಯ ಸ್ಕೈಲೈನ್ ಎಂಟರ್‌ ಪ್ರೈಸಸ್ ಮತ್ತು ಟ್ರಾವೆಲ್ಸ್‌ನಲ್ಲಿ ವಿಮಾನ, ರೈಲು ಟಿಕೆಟ್ ಬುಕ್ ಮಾಡುವ ಫ್ರಾಂಚೈಸಿ ಪಡೆದುಕೊಂಡಿದ್ದು, ಈ ಸಂಸ್ಥೆಯಿಂದ ಯೂಸರ್ ಐಡಿ ಯನ್ನು ಹೊಂದಿದ್ದರು. ೨೦೨೨ರ ಎಪ್ರಿಲ್ ತಿಂಗಳಿನ ಕೊನೆಯಲ್ಲಿ ಟಿಬಿಓ ಕಂಪೆನಿಯಿಂದ ರುಡಾಲ್ಫ್ ಡಿಸೋಜಾರಿಗೆ ಕರೆ ಬಂದಿದ್ದು, ನಿಮ್ಮ ಐಡಿಗೆ 14,76,284 ರೂ. ಪಾವತಿಸಲಾಗಿದೆ. ಅದನ್ನು ಕೂಡಲೇ ಮರುಪಾವತಿ ಮಾಡುವಂತೆ ತಿಳಿಸಲಾಗಿತ್ತು. ಆದರೆ ರುಡಾಲ್ಫ್ ಕಳೆದ ಎರಡು ವರ್ಷಗಳಿಂದ ಈ ಐಡಿಯನ್ನು ಬಳಸಿರುವುದಿಲ್ಲ. ಇವರ ಸಂಸ್ಥೆಯಲ್ಲಿ ಸೆಲ್ಸ್‌ ಮ್ಯಾನ್ ಆಗಿ ಕೆಲಸ ಮಾಡುವ ವ್ಯಕ್ತಿ ರುಡಾಲ್ಫ್‌ರ ಐಡಿಯನ್ನು ಕಳವು ಮಾಡಿ, ಇನ್ನೋರ್ವನ ಮೂಲಕ ಕಂಪೆನಿಯಿಂದ ಈ ಐಡಿಯ ಪಾಸ್‌ವರ್ಡ್ ರಿಸೆಟ್ ಮಾಡಿಸಿಕೊಂಡಿದ್ದನು ಎಂದು ದೂರಲಾಗಿದೆ. ರುಡಾಲ್ಫ್ ಅವರೇ ಐಡಿಯನ್ನು ಬಳಸುತ್ತಿರುವಂತೆ ಆರೋಪಿ ಬಿಂಬಿಸಿ, ಕಂಪೆನಿಯಿಂದ ಬಂದಿರುವ ಹಣವನ್ನು ಟಿಕೆಟ್ ಬುಕ್ಕಿಂಗ್ ಖರ್ಚು ಮಾಡಿ, ಹಣ ಮರುಪಾವತಿಸದೇ ಕಂಪೆನಿಗೆ ಹಾಗೂ ರುಡಾಲ್ಫ್ ಡಿಸೋಜಗೆ ನಷ್ಟ ಉಂಟು ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.