ಟ್ರಾಮ ಸೆಂಟರ್‍ಗೆ ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ಭೇಟಿ

ಮೈಸೂರು, ನ.4: ಮೈಸೂರಿನ ನೂತನ ಟ್ರಾಮ ಸೆಂಟರ್ ಗೆ ಜಿಲ್ಲಾ ಉಸ್ತುವಾರಿ ಹಾಗೂ ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಇಂದು ಭೇಟಿ ನೀಡಿದರು.
ಉದ್ಘಾಟನೆಗೆ ಸಿದ್ದವಾಗಿರೋ ಟ್ರಾಮ ಸೆಂಟರ್ ನ್ನು ಪರಿಶೀಲನೆ ನಡೆಸಿದರು. ಕೆ ಆರ್ ಎಸ್ ಮುಖ್ಯರಸ್ತೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸೆಂಟರ್ ಇದಾಗಿದ್ದು, ಕೆ ಆರ್ ಆಸ್ಪತ್ರೆಯ ಒತ್ತಡ ತಗ್ಗಿಸುವ ಹಿನ್ನಲೆಯಲ್ಲಿ ನಿರ್ಮಾಣಗೊಂಡಿದ್ದ ಆಸ್ಪತ್ರೆಯಾಗಿದೆ. 45 ವೆಂಟಿಲೇಟರ್ ಮತ್ತು 250 ಆಕ್ಸಿಜನ್ ಬೆಡ್ ಗಳನ್ನು ಟ್ರಾಮ ಸೆಂಟರ್ ಒಳಗೊಂಡಿದೆ. ಕೋವಿಡ್ ಹೆಚ್ಚಾದ ಹಿನ್ನಲೆಯಲ್ಲಿ ಕೊವೀಡ್ ಕೇರ್ ಸೆಂಟರ್ ಆಗಿ ಬಳಕೆ ಮಾಡಲು ನಿರ್ಧಾರ ಮಾಡಲಾಗಿತ್ತು.
ಭೇಟಿ ವೇಳೆ ಸಚಿವರಿಗೆ ಶಾಸಕ ಎಲ್.ನಾಗೇಂದ್ರ, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಸಾಥ್ ನೀಡಿದರು.
ಇದೇ ವೇಳೆ ಶಿರಾ ಮತ್ತು ಆರ್ ಆರ್ ನಗರ ಉಪಚುನಾವಣೆ ವಿಚಾರಕ್ಕೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು ಎರಡೂ ಕ್ಷೇತ್ರಗಳನ್ನು ಭರ್ಜರಿಯಾಗಿ ಗೆಲ್ಲಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಶಿರಾ ಕಾಂಗ್ರೆಸ್ ಅಭ್ಯರ್ಥಿ ಜಯಚಂದ್ರ ಈಗಾಗಲೇ ಸೋಲೊಪ್ಪಿಕೊಂಡಿದ್ದಾರೆ. ಇವಿಎಂ ಯಂತ್ರಗಳ ಮೇಲೆ ಆರೋಪ ಮಾಡುವ ಮೂಲಕ ಪರೋಕ್ಷವಾಗಿ ಸೋಲು ಒಪ್ಪಿಕೊಂಡಿದ್ದಾರೆ. ಸೋಲಿನ ಹತಾಶೆಯಲ್ಲಿ ಇವಿಎಂ ಯಂತ್ರಗಳ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಆರೋಪ ಮಾಡಿರೋದನ್ನು ನೋಡಿದರೆ ಬಹುಶಃ ರಿಸಲ್ಟ್ ವರೆಗೆ ಕಾಯುವ ತಾಳ್ಮೆ ಅವರಿಗಿಲ್ಲದೆ ಸೋಲೊಪ್ಪಿಕೊಂಡಿದ್ದಾರೆ. ಹೀಗಾಗಿ ಎರಡು ಕ್ಷೇತ್ರವನ್ನು ಬಿಜೆಪಿ ಅತ್ಯಧಿಕ ಮತಗಳಿಂದ ಗೆಲ್ಲಲಿದೆ ಎಂದರು.
ಉಪಚುನಾವಣೆ ಬಳಿಕ ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಪ್ರತಿಕ್ರಿಯಿಸಿ ನಾನು ಈಗಾಗಲೇ ಹೇಳಿದ್ದೇನೆ, ಸಚಿವ ಸಂಪುಟ ಮುಖ್ಯಮಂತ್ರಿಗಳ ಪರಮಾಧಿಕಾರ. ನಮಗೆ ಚುನಾವಣೆ ಪ್ರಚಾರ ಮಾಡೋದಕ್ಕೆ ಮತ್ತು ಯಾರು ಗೆಲ್ತಾರೆ, ಸೋಲ್ತಾರೆ ಅಂತ ಹೇಳೊದಕ್ಕೆ ಮಾತ್ರ ಅಧಿಕಾರ ಇದೆ. ಆದರೆ ಸಚಿವ ಸಂಪುಟದ ಬಗ್ಗೆ ಮಾತನಾಡಲು ನನಗೆ ಅಧಿಕಾರವಿಲ್ಲ. ನಾನು ಹಾಗೆ ಹೇಳುವುದು ಸರಿಯಲ್ಲ ಎಂದರು.
ಆರ್.ಆರ್. ನಗರದಲ್ಲಿ ಮುನಿರತ್ನ ಅಭಿವೃದ್ಧಿ ಮುಂದೆ ಕಾಂಗ್ರೆಸ್ ಗೆಲ್ಲಲ್ಲ. ಕಾಂಗ್ರೆಸ್ ಏನೇ ತಂತ್ರಗಾರಿಕೆ ಮಾಡಿದರೂ ಜನ ಬಿಜೆಪಿ ಪರ ಇದ್ದಾರೆ. ಅಭಿವೃದ್ಧಿ ಕೆಲಸಗಳು ಬಿಜೆಪಿಕೈ ಹಿಡಿಯಲಿವೆ ಎಂದು ತಿಳಿಸಿದರು.