
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.09: ಕೇಂದ್ರ ಸರ್ಕಾರದ ಜನ ಔಷಧಿ ಯೋಜನೆ ಬಡವರಿಗೆ ವರದಾನವಾಗಿದೆ. ಜನೌಷಧ ಕೇಂದ್ರದಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಔಷಧಿಗಳನ್ನ ನೀಡಲಾಗುತ್ತದೆ. ಬಡವರಿಗೆ ಹಣದ ಹೊರೆಯಾಗಬಾರದು ಎಂಬ ಉದ್ದೇಶದಿಂದ ಸರ್ಕಾರ ಜನೌಷಧಿ ಕೇಂದ್ರಗಳನ್ನ ಪ್ರಾರಂಭ ಮಾಡಿದೆ ಎಂದು ವಿಮ್ಸ್ ನಿರ್ದೇಶಕ ಡಾ. ಗಂಗಾಧರ ಗೌಡ ತಿಳಿಸಿದರು.
ಜನ ಔಷಧಿ ದಿನಾಚರಣೆಯ ಅಂಗವಾಗಿ ನಗರದ ವಿಮ್ಸ್‍ನ ಟ್ರಾಮಾಕೆರ್ ಸೇಂಟರ್‍ನಲ್ಲಿ ಮೊನ್ನೆ ಉಚಿತವಾಗಿ ಜನ ಔಷಧಿಗಳನ್ನ ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು. ಜನೌಷಧಿ ಕೇಂದ್ರಗಳಲ್ಲಿ ಶೇ. 50 ರಿಂದ 60ರಷ್ಟು ಔಷಧಿಗಳು ರಿಯಾಯಿತಿ ದರದಲ್ಲಿ ನೀಡಲಾಗುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ನಂತರ ಬಿಜೆಪಿ ಮುಖಂಡ ವಿ. ಅನೂಪ್ ಕುಮಾರ್ ಮಾತನಾಡಿ, ಪ್ರಧಾನ ಮಂತ್ರಿ ಜನೌಷಧಿ ಯೋಜನೆಯನ್ನು ಸರ್ಕಾರ 2008ರಲ್ಲಿ ಪ್ರಾರಂಭ ಮಾಡಿತ್ತು. ನಂತರ ಅದನ್ನು 2015ರಲ್ಲಿ ಮರು ಚಾಲನೆ ನೀಡಿ ಬಡ ಜನರಿಗೆ ಸಹಾಯವಾಗುವಂತೆ ಮಾಡಿತು ಎಂದ ಅವರು, ಆರಂಭದಲ್ಲಿ 500 ಜನ ಔಷಧಿ ಕೇಂದ್ರಗಳಿದ್ದು, ಇಂದು 9000ಕ್ಕೂ ಹೆಚ್ಚು ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದಾವೆ. ಜನ ಔಷಧಿ ಕೇಂದ್ರದ ಮೂಲಕ ಬಡವರಿಗೆ ಅತಿ ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಔಷಧಿಗಳನ್ನ ನೀಡಲಾಗುತ್ತದೆ. ಈ ಯೋಜನೆಯಿಂದ ಕಳೆದ 8 ವರ್ಷಗಳಲ್ಲಿ ಬಡ ಜನರ ಸುಮಾರು 20 ಸಾವಿರ ಕೋಟಿ ಹಣ ಉಳಿತಾಯವಾಗಿದೆ. ಪ್ರಸ್ತುತ ಜನೌಷಧಿ ಯೋಜನೆಯಡಿ ಸುಮಾರು 1700 ವಿವಿಧ ರೀತಿಯ ಔಷಧಿಗಳಿದ್ದು, 250 ಸರ್ಜರಿ ಉಪಕರಣಗಳು ಇವೆ ಎಂದರು.
ಜನ ಔಷಧಿ ಯೋಜನೆಯ ಪ್ರಯೋಜನೆ ಪಡೆದಿರುವ ಫಲಾನುಭವಿ ಅಶೋಕ್ ರವರು ಮಾತನಾಡಿ, ಪ್ರತಿ ತಿಂಗಳು ಮಾರುಕಟ್ಟೆಯಲ್ಲಿ 4000 ರೂಪಾಯಿ ಬೆಳೆ ಬಾಳುವ ಔಷಧಿಗಳನ್ನು ಜನ ಔಷಧಿ ಕೇಂದ್ರದ ಮೂಲಕ ಕೇವಲ 500ಗೆ ಪಡೆಯುತ್ತಿದ್ದೇನೆ ಎಂದರು.
ಜನ ಔಷಧಿ ಕೇಂದ್ರದ ಮಾಲಿಕರಾದ ವಿ. ಸ್ವರೂಪ್ ಕುಮಾರ್ ಅವರು ವಂದಿಸಿದರು. ನೂರಾರು ಜನರಿಗೆ ಉಚಿತ ಔಷಧಿಗಳನ್ನ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಟ್ರಾಮಾ ಸೆಂಟರ್‍ನ ಅಧೀಕ್ಷಕ ಡಾ. ಶಿವನಾಯ್ಕ್, ಡಾ. ರಾಘವೇಂದ್ರ, ನರ್ಸಿಂಗ್ ಅಧೀಕ್ಷಕರಾದ ಪುಷ್ಪಕುಮಾರಿ, ಪಿಆರ್‍ಓ ಲಕ್ಷ್ಮಣ ನಾಯ್ಕ್, ವಿಮ್ಸ್ ಸಿಬ್ಬಂದಿ ಸೇರಿದಂತೆ ಸಾರ್ವಜನಿಕರು ಇದ್ದರು.