ಟ್ರಾಫಿಕ್ ಸಿಗ್ನಲ್ ಉಲ್ಲಂಘನೆ ವಿರುದ್ದ ಕಾನೂನುಬದ್ಧ ಕ್ರಮ

ಮಂಗಳೂರು, ಜ.೧೧- ಬಸ್‌ಗಳಿಂದ ಪ್ರಯಾಣಿಕರಿಗೆ ಸಮಸ್ಯೆಗಳು ಉದ್ಭವವಾದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ಟ್ರಾಫಿಕ್ ಸಿಗ್ನಲ್‌ಗಳನ್ನು ಉಲ್ಲಂಘಿಸುವವರ ಮೇಲೆ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು. ಕಟ್ಟಡ ಮತ್ತು ರಸ್ತೆ ನಿರ್ಮಾಣದ ಕಾಮಗಾರಿಗಳ ಕಚ್ಛಾವಸ್ತುಗಳನ್ನು ರಸ್ತೆಯಲ್ಲಿ ಹಾಕದಂತೆ ಎಚ್ಚರ ವಹಿಸಬೇಕು. ಒಂದು ವೇಳೆ ರಸ್ತೆ ಬದಿಗೆ ಸಾಮಗ್ರಿಗಳನ್ನು ಹಾಕಿದ್ದಲ್ಲಿ ಗುತ್ತಿಗೆದಾರರ ವಿರುದ್ದ ಪ್ರಕರಣದ ದಾಖಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪೊಲೀಸ್ ಹಾಗೂ ಸಾರಿಗೆ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಈ ರೀತಿಯ ಸಮಗ್ರ ಮಾಹಿತಿಗಳನ್ನು ಸಂಗ್ರಹಿಸಿ ಸಿದ್ಧಪಡಿಸಿಟ್ಟು ಕೊಂಡರೆ ಮುಂದೆ ಈ ರೀತಿಯ ಅಪಘಾತಗಳು ನಡೆಯದಂತೆ ಕ್ರಮ ವಹಿಸಬಹು ದಾಗಿದೆ. ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಸಮರ್ಪಕವಾಗಿ ಹಾಕಬೇಕು. ಮಹಾನಗರ ಪಾಲಿಕೆ ವ್ಯಾಪ್ತಿ ಹಾಗೂ ಜಿಲ್ಲೆಯ ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯಲ್ಲಿ ಬ್ಲಾಕ್ ಸ್ಪಾಟ್‌ಗಳನ್ನು ಗುರುತಿಸಲು ಉಪಸಮಿತಿಯನ್ನು ರಚಿಸಿಕೊಳ್ಳಬೇಕು. ಖಾಸಗಿ ಹಾಗೂ ಸರಕಾರಿ ಬಸ್‌ಗಳು ರಸ್ತೆ ಬದಿಯಲ್ಲಿ ವ್ಯವಸ್ಥಿತವಾಗಿ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳ ಬೇಕು. ಈ ವೇಳೆ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಗಳನ್ನು ನೀಡಬಾರದು. ದ್ವಿಚಕ್ರ ಹಾಗೂ ನಾಲ್ಕು ಚಕ್ರಗಳ ವಾಹನಗಳು ಸೇರಿದಂತೆ ಪ್ರತಿದಿನ ನಡೆಯುವ ರಸ್ತೆ ಅಪಘಾತಗಳು, ಅವುಗಳ ಪ್ರಕಾರಗಳು, ಗಾಯಗೊಂಡ ಮತ್ತು ಸಾವು ಸಂಭವಿಸಿದ, ಅಪಘಾತ ನಡೆದ ವೇಳೆ, ಹೆಲ್ಮೆಟ್ ಧಾರಣೆ, ಸೀಟ್ ಬೆಲ್ಟ್ ಹಾಕಿದ್ದ ಅಥವಾ ಇಲ್ಲದೆ, ಮದ್ಯಪಾನ ಮಾಡಿ ಚಾಲನೆ ಮಾಡುತ್ತಿದ್ದರೋ ಇತ್ಯಾದಿ ಸಹಿತ ಸಮಗ್ರ ಮಾಹಿತಿಯ ದಾಖಲೆಯನ್ನು ಸಿದ್ಧಪಡಿಸಿಕೊಳ್ಳಬೇಕು. ಸಂಚಾರ ನಿಯಮಗಳ ಬಗ್ಗೆ ಪ್ರೌಢಶಾಲಾ ಮಕ್ಕಳು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸ ಬೇಕು, ಝೀಬ್ರಾ ಕ್ರಾಸಿಂಗ್, ಉತ್ತಮ ಹೆಲ್ಮೆಟ್ ಧಾರಣೆ ಸಹಿತ ಸಂಚಾರ ನಿಯಮಗಳನ್ನು ಅವರಿಗೆ ತಿಳಿಸಿಕೊಡಬೇಕು, ಆ ಮಾಹಿತಿಯುಳ್ಳ ಪುಸ್ತಕ ಮುದ್ರಿಸಿ ನೀಡಬೇಕು, ಆ ಪುಸ್ತಕದಲ್ಲಿರಬೇಕಾದ ಮಾಹಿತಿ ಸಿದ್ಧಪಡಿಸಲು ಈ ಬಗ್ಗೆ ಅಪಾರ ಜ್ಞಾನವುಳ್ಳ ತಜ್ಞರೊಬ್ಬರನ್ನು ನೇಮಿಸಿಕೊಂಡು ಅವರ ನೆರವನ್ನು ಪಡೆಯಬೇಕು. ಶಾಲಾ ಬಸ್‌ಗಳು ಹಾಗೂ ವಿದ್ಯಾರ್ಥಿಗಳನ್ನು ಕರೆತರುವ ಆಟೋಗಳ ಸುಸ್ಥಿತಿಯನ್ನು ತಪಾಸಣೆಗೊಳ ಪಡಿಸಬೇಕು, ಆ ವಾಹನಗಳ ಮಾನದಂಡವನ್ನು ಪರಿಶೀಲಿಸಲು ಪೊಲೀಸ್ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಮೂರನೇ ಶನಿವಾರ ಆಯಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಬೇಕು. ವಾಹನಗಳಿಗೆ ಹಳದಿ ಬಣ್ಣ, ಸ್ಪೀಡ್ ಗವರ್ನರ್, ಬಸ್ಸಿನ ಸಾಮರ್ಥ್ಯ ಇತ್ಯಾದಿ ಅಂಶಗಳನ್ನು ಪರಿಶೀಲಿಸಬೇಕು, ಆಟೋದವರಿಗೆ ತರಬೇತಿಯನ್ನು ಆಯೋಜಿಸಿ ಮಕ್ಕಳ ಸುರಕ್ಷತೆ ಬಗ್ಗೆ ಕಡ್ಡಾಯವಾಗಿ ವಹಿಸಬೇಕಾದ ಕ್ರಮಗಳನ್ನು ತಿಳಿಸಿಕೊಡಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಸಭೆಯಲ್ಲಿ ಶಾಸಕ ಡಾ.ಭರತ್ ಶೆಟ್ಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ್ ಭಗವಾನ್ ಸೋನಾವಣೆ, ಮಹಾನಗರಪಾಲಿಕೆ ಆಯುಕ್ತ ಅಕ್ಷಿ ಶ್ರೀಧರ್, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರವಿಶಂಕರ್ ಮಿಜಾರು, ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿ ಆರ್.ಎಂ.ವರ್ಣೇಕರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸುಧಾಕರ್, ಎಸಿಪಿ ನಟರಾಜ್, ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಅರುಣ್, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿಯರ್ ಯಶವಂತ್ ಮತ್ತಿತರರು ಉಪಸ್ಥಿತರಿದ್ದರು.