ಟ್ರಾಫಿಕ್ ಕಿರಿಕಿರಿ ಮೊಬೈಲ್‌ನಲ್ಲಿ ಮೀಟಿಂಗ್‌ಗೆ ಹಾಜರು

ಬೆಂಗಳೂರು, ಜೂ.೧೩- ನಗರದ ಸಂಚಾರ ದಟ್ಟಣೆಯ ಸಿಲುಕಿದ ವೇಳೆ ಬಸ್ ನಲ್ಲಿಯೇ ಬಿಎಂಟಿಸಿ ಚಾಲಕರೊಬ್ಬರು ಊಟ ಮಾಡಿದ ಬೆನ್ನಲ್ಲೇ ಟ್ರಾಫಿಕ್ ನಲ್ಲಿ ಸಿಲುಕಿಕೊಂಡ ಖಾಸಗಿ ಕಂಪನಿಯ ಉದ್ಯೋಗಿಯೊಬ್ಬರು ಸ್ಮಾರ್ಟ್ ಫೋನ್ ಮೂಲಕ ಕಚೇರಿಯ ಮೀಟಿಂಗ್‌ಗೆ ಹಾಜರಾಗಿದ್ದಾರೆ.
ಅದೂ ಕೂಡಾ ತಮ್ಮ ದ್ವಿಚಕ್ರ ವಾಹನದ ಮೇಲಿನ ಮೊಬೈಲ್ ಹೋಲ್ಡರ್‌ನಲ್ಲಿ ಸ್ಮಾರ್ಟ್ ಫೋನ್ ಸಿಕ್ಕಿಸಿಕೊಂಡು ಮೀಟಿಂಗ್‌ಗೆ ಹಾಜರಾಗಿದ್ದಾರೆ. ಈ ವೈರಲ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ವೈಭವ್ ಎನ್ನುವ ಉದ್ಯೋಗಿ ಟ್ರಾಫಿಕ್ ತಲೆಬಿಸಿ ಮಧ್ಯೆ ಮೀಟಿಂಗ್‌ಗೆ ಹಾಜರಾಗಿರುವ ಫೋಟೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಈ ವೈರಲ್ ಫೋಟೋದಲ್ಲಿ ಬೈಕ್‌ನಲ್ಲಿ ಕುಳಿತಿದ್ದ ವ್ಯಕ್ತಿ ಬೈಕ್ ಕನ್ನಡಿಯ ಪಕ್ಕ ಮೊಬೈಲ್ ಹೋಲ್ಡರ್ ಇಟ್ಟು ಅದರ ಮೇಲೆ ತನ್ನ ಸ್ಮಾರ್ಟ್ ಫೋನ್ ಇಟ್ಟು ಆಫೀಸಿನ ಕಾನ್ಫರೆನ್ಸ್ ಮೀಟಿಂಗ್‌ನಲ್ಲಿ ನಿರತವಾಗಿರುವುದನ್ನು ಕಾಣಬಹುದು.
ಕಳೆದ ಜೂ. ೯ರಂದು ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾದ ಈ ಫೋಟೋ ಹಲವು ವೀಕ್ಷಣೆಗಳನ್ನು ಹಾಗೂ ಲೈಕ್ಸ್‌ಗಳನ್ನು ಗಳಿಸಿದೆ. ಟ್ರಾಫಿಕ್ ದಟ್ಟಣೆಯ ನಗರಗಳಲ್ಲಂತೂ ಈ ತಲೆನೋವು ತಪ್ಪಿದ್ದಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು.