
ಬೆಂಗಳೂರು,ಮಾ.೯-ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡು ಕುಳಿತಿದ್ದ ಕಾರಿನಲ್ಲೇ ಪತ್ನಿಯನ್ನು ನವವಿವಾಹಿತ ವರ ಬಿಟ್ಟು ಓಡಿ ಹೋದ ಘಟನೆ ಮಹದೇವಪುರ ಟೆಕ್ ಕಾರಿಡಾರ್ ಬಳಿಯಲ್ಲಿ ನಡೆದಿದೆ.
ಟೆಕ್ ಕಾರಿಡಾರ್ ಬಳಿ ಕಾರು ಟ್ರಾಫಿಕ್‌ನಲ್ಲಿ ಸಿಲುಕಿಕೊಂಡು ವರನು ಕಾರಿನ ಬಾಗಿಲು ತೆರೆದು ಪರಾರಿಯಾಗಿದ್ದು,ಕಳೆದ ಫೆ. ೧೬ರಂದು ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ವರನು ಗೋವಾದಲ್ಲಿ ಕೆಲಸ ಮಾಡುತ್ತಿದ್ದಾಗ ಆತನಿಗೆ ಬೇರೊಬ್ಬ ಯುವತಿಯ ಜೊತೆ ಅನೈತಿಕ ಸಂಬಂಧವಿದ್ದು, ಈ ವಿಷಯ ವಧುವಿಗೂ ತಿಳಿದಿತ್ತು. ಫೆಬ್ರವರಿ ೧೫ರಂದು ದಂಪತಿಗಳಿಗೆ ವಿವಾಹವಾಗಿದ್ದು. ಅದರ ಮರು ದಿನವೇ ಅನೈತಿಕ ಸಂಬಂಧದ ಬಗ್ಗೆ ತಾನು ಮದುವೆಯಾದ ಪತ್ನಿಗೆ ತಿಳಿದಿದೆ ಎಂದು ಗೊತ್ತಾಗಿ ವರ ಪರಾರಿಯಾಗಿದ್ದಾನೆ.
ದಂಪತಿಗಳು ತಮ್ಮ ಮದುವೆಯಾದ ಮರುದಿನ ಚರ್ಚ್‌ನಲ್ಲಿ ಪ್ರಾರ್ಥನೆ ಸಲ್ಲಿಸಿ ಹಿಂತಿರುಗುವ ಸಂದರ್ಭದಲ್ಲಿ ಟ್ರಾಫಿಕ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಇದೇ ಸಮಯವನ್ನು ಬಳಸಿಕೊಂಡ ವರ ವಿಜಯ್ ಜಾರ್ಜ್ (ಹೆಸರು ಬದಲಾವಣೆ ಮಾಡಲಾಗಿದೆ) ಕಾರಿನ ಬಾಗಿಲು ತೆರೆದು ಓಡಿ ಹೋಗಿದ್ದಾನೆ. ಇದನ್ನು ಕಂಡು ಪತ್ನಿ ಅವನನ್ನು ಹಿಂಬಾಲಿಸಲು ಪ್ರಯತ್ನಿಸಿದಳು. ಆದರೆ ಆತನನ್ನು ಹಿಡಿಯಲು ಸಾಧ್ಯವಾಗಲಿಲ್ಲ. ಆತ ಓಡಿ ಹೋದ ಬಳಿಕ ಮಾರ್ಚ್ ೫ರಂದು ಆ ಮಹಿಳೆ ಪೋಲಿಸರಿಗೆ ದೂರು ನೀಡಿದ್ದಾಳೆ.
ಪತಿ ಅನೈತಿಕ ಸಂಬಂಧ ಹೊಂದಿದ್ದ ಯುವತಿ, ಅವರಿಬ್ಬರು ಆತ್ಮೀಯವಾಗಿ ಇರುವ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾಳೆ. ಇದರಿಂದ ಭಯಗೊಂಡ ವರ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆದರೆ ಎರಡು ವಾರ ಕಳೆದರೂ ವರ ಇನ್ನೂ ಪತ್ತೆಯಾಗಿಲ್ಲ ಎಂದು ಪೋಲಿಸರು ತಿಳಿಸಿದ್ದಾರೆ. ೨೨ ವರ್ಷ ವಯಸ್ಸಿನ ನವ ವಧುವಿನ ಪ್ರಕಾರ, ಆಕೆಯ ಗಂಡ ಜಾರ್ಜ್ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಮೂಲದವರಾಗಿದ್ದು, ಕರ್ನಾಟಕ ಮತ್ತು ಗೋವಾದಲ್ಲಿ ಕಂಪೆನಿಯನ್ನು ನಡೆಸಿಕೊಂಡು ಹೋಗಲು ತನ್ನ ತಂದೆಗೆ ಸಹಾಯ ಮಾಡುತ್ತಿದ್ದನು. ಅವರು ಗೋವಾದಲ್ಲೇ ಇದ್ದು ಕಂಪನಿಯನ್ನು ನೋಡಿಕೊಳ್ಳುತ್ತಿದ್ದರು. ಅಲ್ಲಿ ಜಾರ್ಜ್ ಅಕ್ರಮ ಸಂಬಂಧವನ್ನು ಹೊಂದಿದ್ದ. ಇವರಿಬ್ಬರ ಮದುವೆ ನಿಶ್ಚಯವಾದಾಗ ಅಕ್ರಮ ಸಂಬಂಧವನ್ನು ಕೊನೆಗೊಳಿಸುವುದಾಗಿ ಜಾರ್ಜ್ ಹೆಂಡತಿಗೆ ಹೇಳಿದ್ದಾನೆ. ಆದರೂ ತನ್ನ ಗಂಡ ಮತ್ತೆ ಆಕೆಯನ್ನು ಭೇಟಿಯಾಗುತ್ತಿದ್ದ.
ಮದುವೆಯ ಮುಂಚೆಯೇ ಈ ಸಂಬಂಧದ ಬಗ್ಗೆ ಜಾರ್ಜ್ ನನಗೆ ತಿಳಿಸಿದ್ದರು. ಅಕ್ರಮ ಸಂಬಂಧವನ್ನು ಬಿಟ್ಟುಬಿಡುವುದಾಗಿ ನನಗೆ ಅವರು ಭರವಸೆ ನೀಡಿದ್ದರಿಂದ ನಾನು ಆತನನ್ನು ಮದುವೆಯಾಗಲು ಒಪ್ಪುಕೊಂಡಿದ್ದು ಎಂದು ಜಾರ್ಜ್ ಪತ್ನಿ ಹೇಳಿಕೆ ನೀಡಿದ್ದಾರೆ.
ಅನೈತಿಕ ಸಂಬಂಧವನ್ನು ಹೊಂದಿದ್ದ ಯುವತಿ ಜಾರ್ಜ್‌ಗೆ ಬ್ಲಾಕ್‌ಮೇಲ್ ಮಾಡಲು ಪ್ರಾರಂಭಿಸಿದ ನಂತರ ಅವರು ಹೆದರಿ, ಓಡಿ ಹೋಗಲು ನಿರ್ಧರಿಸಿದ್ದು, ಆಕೆ ಬ್ಲಾಕ್‌ಮೇಲ್‌ಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳಲು ಕೂಡ ಪ್ರಯತ್ನಿಸಿದರು. ಅವರು ಎಲ್ಲೇ ಇದ್ದರೂ ಸುರಕ್ಷಿತವಾಗಿರುತ್ತಾರೆ, ಶೀಘ್ರದಲ್ಲೇ ಅವರನ್ನು ನನ್ನ ಬಳಿ ಬರುತ್ತಾರೆ ಎಂಬ ಭರವಸೆ ಇದೆ ಎಂದು ಜಾರ್ಜ್ ಪತ್ನಿ ಹೇಳಿದ್ದಾರೆ.