ಟ್ರಾಕ್ಟರ್ ಶೋ ರೂಂನಲ್ಲಿ ಕಳ್ಳತನ ಮಾಲು ಸಮೇತ ಇಬ್ಬರ ಬಂಧನ

ಬಳ್ಳಾರಿ, ನ.12: ಜಿಲ್ಲೆಯ ಹೊಸಪೇಟೆ ನಗರದಲ್ಲಿ ನ. 6ರಂದು ಹಂಪಿ ರಸ್ತೆಯ ಮುನೀರ್ ಟ್ರಾಕ್ಟರ್ ಶೋ ರೂಂನಲ್ಲಿ ಕಳ್ಳತನ ನಡೆದಿತ್ತು. 16,44,000 ಹಣ, ಗ್ರಾಹಕರಿಗೆ ಬಹುಮಾನದ ರೂಪದಲ್ಲಿ ಕೊಡಲು ತಂದಿಟ್ಟಿದ್ದ 44,000 ಮೌಲ್ಯದ ಚಿನ್ನದ ನಾಣ್ಯವನ್ನು ಕಳ್ಳರು ಕದ್ದಿದ್ದರು. ಈ ಪ್ರಕರಣದಲ್ಲಿ ಗ್ರಾಮೀಣ ಠಾಣೆ ಪೊಲೀಸರು ನಾಲ್ಕು ದಿನಗಳಲ್ಲೇ ಕಳ್ಳತನ ಪ್ರಕರಣ ಭೇದಿಸಿ, ಚಿನ್ನದ ನಾಣ್ಯ, ನಗದು ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರು ಅನಂತಶಯನಗುಡಿಯ ನಿವಾಸಿ, ಆಟೊ ಚಾಲಕ ಹುಲುಗಪ್ಪ ಹನುಮಂತಪ್ಪ (22), ಮುನೀರ್ ಶೋ ರೂಂನಲ್ಲಿ ಮೆಕ್ಯಾನಿಕ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಚಪ್ಪರದಹಳ್ಳಿಯ ನಿವಾಸಿ ಆಸಿಫ್ ಸತ್ತಾರ್ ಸಾಬ್ (28). ಅವರಿಂದ 44,000 ಮೌಲ್ಯದ 10 ಗ್ರಾಂ ಬಂಗಾರದ ನಾಣ್ಯ ಮತ್ತು 15,80,000 ನಗದು ವಶಪಡಿಸಿಕೊಂಡಿದೆ.
ಗ್ರಾಮೀಣ ಠಾಣೆಯ ಪೊಲೀಸ್ ಇನ್‍ಸ್ಪೆಕ್ಟರ್ ಶ್ರೀನಿವಾಸ ಮೇಟಿ, ಸಿಬ್ಬಂದಿ ಎಚ್.ಸಿ.ಬಿ. ರಾಘವೇಂದ್ರ, ಪಿ.ಮಾಣಿಕ್ಯ ರೆಡ್ಡಿ, ಎ.ಕೊಟ್ರೇಶ್, ಓ.ರಮೇಶ ಅವರನ್ನು ಒಳಗೊಂಡ ಪೆÇಲೀಸ್ ತಂಡ ಪ್ರಕರಣ ಭೇದಿಸಿದೆ.