
ಬೆಂಗಳೂರು,ಮೇ೧೮: ಕಾಂಗ್ರೆಸ್ ಪಕ್ಷದಲ್ಲಿ ಡಿ.ಕೆ.ಶಿವಕುಮಾರ್ ಟ್ರಬಲ್ ಶೂಟರ್ ಎಂದೇ ಖ್ಯಾತಿಯಾಗಿದ್ದಾರೆ. ಶಾಸಕರಾಗಿ, ಸಚಿವರಾಗಿ, ಕೆಪಿಸಿಸಿ ಅಧ್ಯಕ್ಷರಾಗಿ ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಸಫಲರಾಗಿದಾರೆ. ಈಗ ಕಾಂಗ್ರೆಸ್ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಸ್ಥಾನ ಅಲಂಕರಿಸುತ್ತಿದ್ದಾರೆ.
ರಾಜಕೀಯ ಜೀವನದಲ್ಲಿ ಸಾಕಷ್ಟು ಏಳುಬೀಳು ಕಂಡಿರುವ ಡಿಕೆಶಿಯವರ ಚಿತ್ರಣ ಇಲ್ಲಿದೆ.
ಡಿ.ಕೆ. ಶಿವಕುಮಾರ್ ಅವರ ಪರಿಚಯ.
ಕನಕಪುರ ತಾಲ್ಲೂಕು, ದೊಡ್ಡಆಲಹಳ್ಳಿ ಗ್ರಾಮದ ಶ್ರೀ ಕೆಂಪೇಗೌಡ ಹಾಗೂ ಶ್ರೀಮತಿ ಗೌರಮ್ಮದಂಪತಿಯ ಪ್ರಥಮ ಪುತ್ರನಾಗಿ ಜನಿಸಿದ ಶ್ರೀ ಡಿ.ಕೆ. ಶಿವಕುಮಾರ್ (ಜನನ ೧೫ನೇ ಮೇ ೧೯೬೨) ತಮ್ಮತಂದೆಯಿಂದಲೇ ನಾಯಕತ್ವದ ಗುಣಗಳನ್ನು ಪಡೆದುಕೊಂಡು ಬಂದರು. ೧೮ನೇ ವಯಸ್ಸಿನಲ್ಲಿಯೇ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ವಿಭಾಗವಾದ ಓSUI ಗೆ ಸೇರ್ಪಡೆಗೊಂಡು ಅನತಿ ಕಾಲದಲ್ಲಿಯೇ ಬೆಂಗಳೂರು ಜಿಲ್ಲೆಯ ಘಟಕದ ಅಧ್ಯಕ್ಷರಾದರು (೧೯೮೧-೮೩).
ತದನಂತರ ವಿದ್ಯಾಭ್ಯಾಸಕ್ಕೆಂದು ಬೆಂಗಳೂರು ಸೇರಿದ ಡಿ.ಕೆ. ಶಿವಕುಮಾರ್ ಆರ್.ಸಿ. ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಯುವ ಕಾಂಗ್ರೆಸ್‌ಗೆ ಸೇರಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಬೆಂಗಳೂರು ಗ್ರಾಮಾಂತರ ಜಿಲ್ಲಾ ಯುವಕಾಂಗ್ರೆಸ್ ಅಧ್ಯಕ್ಷರಾಗಿ ಕನಕಪುರ ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ಉಚಿತ ವೈದ್ಯಕೀಯ ಶಿಬಿರ, ರಕ್ತದಾನ ಶಿಬಿರಗಳನ್ನು ವ್ಯವಸ್ಥೆಗೊಳಿಸಿ ಜನಮನವನ್ನು ಸೂರೆಗೊಂಡರು.
೧೯೮೫ರ ಸಾತನೂರು ವಿಧಾನಸಭಾಕ್ಷೇತ್ರದಲ್ಲಿ ಅಂದಿನ ಪ್ರಭಾವಿ ಜನತಾದಳ ಮುಖಂಡರಾದ ಹೆಚ್.ಡಿ. ದೇವೇಗೌಡಅವರ ವಿರುದ್ಧ ಕಾಂಗ್ರೆಸ್ ಪಕ್ಷದಲ್ಲಿ ಉತ್ತಮ ಅಭ್ಯರ್ಥಿ ಸಿಗುವುದು ದುರ್ಲಭವಾದಾಗ ಪಕ್ಷದ ವರಿಷ್ಠರ ಕಣ್ಣು ಡಿ.ಕೆ. ಶಿವಕುಮಾರ್ ಮೇಲೆ ಬಿತ್ತು. ಹೀಗಾಗಿ ರಾಜಕಾರಣದ ಪರಿಚಯವೇ ಇಲ್ಲದಿದ್ದ ಡಿ.ಕೆ. ಶಿವಕುಮಾರ್ ಅವರನ್ನು ಹೆಚ್.ಡಿ. ದೇವೇಗೌಡ ಅವರ ವಿರುದ್ದ ಸ್ಪರ್ಧಿಸಲು ಪಕ್ಷದ ಅಭ್ಯರ್ಥಿಯನ್ನಾಗಿ ನಿಲ್ಲಿಸಲಾಯಿತು. ಸಾಕಷ್ಟು ಪ್ರಬಲ ಪ್ರತಿರೋಧವನ್ನೇ ತೋರಿದ ಡಿ.ಕೆ. ಶಿವಕುಮಾರ್ ಚುನಾವಣೆಯಲ್ಲಿ ಹೆಚ್.ಡಿ. ದೇವೇಗೌಡರು ಅತ್ಯಂತ ಪ್ರಯಾಸದ ಜಯ ಪಡೆಯುವಂತೆ ಮಾಡುವಲ್ಲಿ ಯಶಸ್ವಿಯಾದರು.
ವಿಧಾನಸಭಾ ಚುನಾವಣೆಯಾದ ಕೆಲವೇ ದಿನಗಳಲ್ಲಿ ೧೯೮೭ರಲ್ಲಿ ಅವರು ಸಾತನೂರು ಕ್ಷೇತ್ರದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿಗೆ ಸದಸ್ಯರಾಗಿ ಆಯ್ಕೆಗೊಂಡರು.
೧೯೮೯ರಲ್ಲಿ ಅಖಿಲ ಭಾರತೀಯ ಕಾಂಗ್ರೆಸ್ ಪಕ್ಷದ ಮುಖೇನ ಸಾತನೂರು ವಿಧಾನ ಸಭಾಕ್ಷೇತ್ರದಿಂದ ಸ್ಪರ್ಧಿಯನ್ನಾಗಿ ನಿಲ್ಲಿಸಲಾಯಿತು. ಅಭೂತಪೂರ್ವ ರೀತಿಯಲ್ಲಿ, ಕ್ಷೇತ್ರದಲ್ಲಿ ಬೇರೂರಿದ ಜನತಾದಳದ ಪ್ರಾಬಲ್ಯವನ್ನು ಮೊಟಕುಗೊಳಿಸಿದ ಡಿ.ಕೆ. ಶಿವಕುಮಾರ್ ಅತ್ಯಧಿಕ ಮತಗಳಿಂದ ಜಯಗಳಿಸಿದರು.
೨೦೦೪ರಲ್ಲಿ ಡಿ.ಕೆ. ಶಿವಕುಮಾರ್ ಸಾತನೂರು ವಿಧಾನಸಭಾ ಕ್ಷೇತ್ರದಿಂದ ೪ನೇ ಭಾರಿ ಆರಿಸಿ ಬಂದರೂ ಕೂಡ ಕಾಂಗ್ರೆಸ್ ಪಕ್ಷ ಬಹುಮತಗಳಿಸುವಲ್ಲಿ ವಿಫಲವಾಯಿತು. ಸ್ವಂತ ಶಕ್ತಿಯ ಮೇಲೆ ಸರ್ಕಾರ ರಚಿಸಲು ಅಗತ್ಯವಾದ ಬಹುಮತವಿಲ್ಲದ ಕಾರಣ ಕೋಮವಾದಿ ಬಿ.ಜೆ.ಪಿ. ಪಕ್ಷ ಅಧಿಕಾರಕ್ಕೇರದಂತೆ ತಡೆಯಲು ದೇವೇಗೌಡ ನೇತೃತ್ವದ ಪಕ್ಷವಾದ ಜೆ.ಡಿ.ಎಸ್.(ಜಾತ್ಯಾತೀತ) ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಬೇಕಾಯಿತು. ಹೀಗೆ ರಾಜ್ಯದಲ್ಲಿ ಪ್ರಥಮ ಬಾರಿಗೆ ಉದಯಿಸಿದ ಕಾಂಗ್ರೆಸ್-ಜೆ.ಡಿ.ಎಸ್.(ಜಾ), ಸಮ್ಮಿಶ್ರ ಸರ್ಕಾರದಲ್ಲಿ ಡಿ.ಕೆ. ಶಿವಕುಮಾರ್ ಗೆ ಸ್ಥಾನವಿರಲಿಲ್ಲ,
ಮಹಾರಾಷ್ಟ್ರದಲ್ಲಿ ವಿಲಾಸ್‌ರಾವ್ ದೇಶ್‌ಮುಖ್ ಸಮ್ಮಿಶ್ರ ಸರ್ಕಾರ ಎನ್‌ಸಿಪಿ ಪಕ್ಷದೊಂದಿಗೆ ಸೆಣಸಾಟಕ್ಕಿಳಿದಾಗ ಸರ್ಕಾರ ಅಲ್ಪಮತದ ಅಪಾಯಕ್ಕೆ ಸಿಕ್ಕಿಕೊಂಡಿತ್ತು. ಆಗ ಟಿಛಿಠಿ ಮತ್ತು ವಿರೋಧ ಪಕ್ಷಗಳು ಕಾಂಗ್ರೆಸ್ ಶಾಸಕರನ್ನು ಖರೀದಿಸುವ ಕುದುರೆ ವ್ಯಾಪಾರಕ್ಕೆ ಇಳಿದಿದ್ದವು. ತಕ್ಷಣ ಕಾಂಗ್ರೆಸ್ ಹೈಕಮಾಂಡಿನ ಆದೇಶದಂತೆ ಕಾರ್ಯಪ್ರವೃತ್ತರಾದ ಡಿ.ಕೆ. ಶಿವಕುಮಾರ್ ರವರು ಮಹಾರಾಷ್ಟ್ರ ಕಾಂಗ್ರೆಸ್ ಶಾಸಕರನ್ನು ಮುಂಬೈಯಿಂದ ಬೆಂಗಳೂರಿಗೆ ಕರೆದುಕೊಂಡು ಬಂದು ಸುಮಾರು ೧೦-೧೨ ದಿನಗಳ ಕಾಲ ಬೆಂಗಳೂರಿನ ವೈಭವಪೇತ ರೆಸಾರ್ಟ್‌ಒಂದರಲ್ಲಿ ಇರಿಸಿಕೊಂಡು ರಕ್ಷಣೆ ನೀಡಿದರು. ಮುಂಬೈಯಲ್ಲಿ ಪರಿಸ್ಥಿತಿ ತಿಳಿಯಾಗಿ ಸರ್ಕಾರಕ್ಕೆ ಅಪಾಯವಿಲ್ಲವೆಂಬ ಸಂಗತಿ ಮನವರಿಕೆಯಾದ ನಂತರವಷ್ಟೇ ಮಹಾರಾಷ್ಟ್ರ ಶಾಸಕರನ್ನು ಕ್ಷೇಮವಾಗಿ ಕಳುಹಿಸಲಾಯಿತು. ಇದೂ ಕೂಡ ಶಿವಕುಮಾರ್‌ಗೆ ಸಲ್ಲಬೇಕು.
೧೯೯೯ರಲ್ಲಿ ಎಸ್.ಎಂ. ಕೃಷ್ಣ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಆಯ್ಕೆಗೊಂಡಾಗ ಡಿ.ಕೆ. ಶಿವಕುಮಾರ್ ಅವರ ಹಿಂದೆ ಬೆನ್ನೆಲುಬಾಗಿ ನಿಂತು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಭೂತಪೂರ್ವ ರೀತಿಯಲ್ಲಿ ಜಯಗಳಿಸಿ ಸರ್ಕಾರ ರಚಿಸುವಲ್ಲಿ ಕಾರಣೀಭೂತರಾದರು.
ಎಸ್.ಎಂ. ಕೃಷ್ಣ ಚುನಾವಣಾ ಪೂರ್ವದಲ್ಲಿ ಪಾಂಚಜನ್ಯ ಮೊಳಗಿಸುವ ಮೂಲಕ ಚುನಾವಣಾ ಸಮರ ಆರಂಭಿಸಿದಾಗ, ಈ ಐತಿಹಾಸಿಕ ಯಾತ್ರೆಯನ್ನು ಆಯೋಜಿಸಿದವರು ಡಿ.ಕೆ. ಶಿವಕುಮಾರ್, ಇದರಿಂದಲೇ ಕಾಂಗ್ರೆಸ್ ಪಕ್ಷ ೧೩೯ ಸ್ಥಾನಗಳನ್ನು ಗಳಿಸಿ ಸ್ವಂತ ಬಲದ ಮೇಲೆ ಸರ್ಕಾರವನ್ನು ರಚಿಸುವಂತಾಯಿತು.
೨೦೦೮ರಲ್ಲಿ ಎಸ್.ಎಂ. ಕೃಷ್ಣ ರಾಜ್ಯಪಾಲ ಪದವಿ ತ್ಯಜಿಸಿ ಪುನರ್ ರಾಜಕಾರಣಕ್ಕೆ ಬರಬೇಕುಎಂದು ಬಯಸಿದಾಗ ಅವರನ್ನು ಕರೆತಂದು ಮತ್ತೊಮ್ಮೆ ಕರ್ನಾಟಕದಿಂದ ರಾಜ್ಯಸಭೆಗೆ ಅವರನ್ನು ಆಯ್ಕೆಮಾಡುವಲ್ಲಿ ಡಿ.ಕೆ. ಶಿವಕುಮಾರ್ ಮಹತ್ವದ ಪಾತ್ರ ವಹಿಸಿದರು. ಆನಂತರ ಎಸ್.ಎಂ. ಕೃಷ್ಣ ಕೇಂದ್ರ ಸಚಿವ ಸಂಪುಟಕ್ಕೆ ಸೇರಿ ವಿದೇಶಾಂಗ ವ್ಯವಹಾರಗಳ ಮಹತ್ವದ ಖಾತೆಯನ್ನು ನಿಭಾಯಿಸಿದರು.
೨೦೧೩ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಪೀಠಕ್ಕೆ ಮರಳಿ ಬಂದು ಶ್ರೀ ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಗಳಾಗಿ ಆಯ್ಕೆಗೊಂಡಾಗ ಪಕ್ಷದಲ್ಲಿನ ವಿರೋಧಿಗಳು ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ ಕಪೋಲಕಲ್ಪಿತ ದಾಖಲೆಗಳನ್ನು ಪಕ್ಷದ ವರಿಷ್ಠರಿಗೆ ಕಳುಹಿಸಿ, ಡಿ.ಕೆ. ಶಿವಕುಮಾರ್ ಅವರಿಗೆ ಸಚಿವ ಸ್ಥಾನ ತಪ್ಪುವಂತೆ ಮಾಡಿದರು. ಇದರಿಂದದೃತಿಗಡೆದ ಡಿ.ಕೆ. ಶಿವಕುಮಾರ್, ಪಕ್ಷದ ನಾಯಕತ್ವದ ವಿರುದ್ದ ಬಹಿರಂಗವಾಗಿ ಯಾವುದೇ ಪ್ರತಿಭಟನೆ ತೋರದೆ, ತಮ್ಮ ವಿರುದ್ಧ ಆಪಾದನೆಗಳ ಬಗ್ಗೆ ನ್ಯಾಯಾಂಗ ತಜ್ಞರಿಂದ ವಿಮರ್ಶೆ ಮಾಡಿಸುವಂತೆ ವರಿಷ್ಠರನ್ನು ಕೋರಿಕೊಂಡರು ಪಕ್ಷದಿಂದ ನೇಮಿತರಾದ ಇಬ್ಬರು ನ್ಯಾಯಾಂಗ ತಜ್ಞರು ಡಿ.ಕೆ. ಶಿವಕುಮಾರ್ ಯಾವುದೇ ರೀತಿಯ ಅಕ್ರಮ ಎಸಗಿಲ್ಲ ಎಂಬ ಅಭಿಪ್ರಾಯಕ್ಕೆ ಬಂದು ಡಿ.ಕೆ. ಶಿವಕುಮಾರ್ ಅವರನ್ನು ಆರೋಪ ಮುಕ್ತರನ್ನಾಗಿಸಿದರು. ಇದರಿಂದ ಏಳೇ ತಿಂಗಳ ಅಲ್ಪಅವಧಿಯ ನಂತರ ಡಿ.ಕೆ. ಶಿವಕುಮಾರ್ ಶ್ರೀ ಸಿದ್ಧರಾಮಯ್ಯ ಸಂಪುಟದಲ್ಲಿ ಸಚಿವ ಸ್ಥಾನ ಪಡೆದುಕೊಂಡರು. ಇಂಧನ ಖಾತೆಯಂತಹ ಪ್ರಮುಖ ಖಾತೆಯನ್ನು ಸಮರ್ಥವಾಗಿ ನಿಭಾಯಿಸಿದರು.
೨೦೧೮ರಲ್ಲಿ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಮೊದಲಿಗೆ ಜಲಸಂಪನ್ಮೂಲ ನಂತರ ಹೆಚ್ಚುವರಿಯಾಗಿ ಕನ್ನಡ ಮತ್ತು ಸಂಸ್ಕೃತಿ ಖಾತೆಯನ್ನು ಪಡೆದ ಡಿ.ಕೆ.ಶಿವಕುಮಾರ್ರವರು ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದರು, ಮಹದಾಯಿ ಸಮಸ್ಯೆ ಪರಿಹಾರ, ಎತ್ತಿನಹೊಳೆ, ಮೇಕೆದಾಟು ಯೋಜನೆಗಳ ಪ್ರಗತಿಗೆ ತಮ್ಮದೇ ಆದ ಕೊಡುಗೆ ನೀಡಿದ ಅವರು ರಾಜ್ಯದಲ್ಲಿ ಅತೀ ಹೆಚ್ಚು ಪ್ರಮಾಣದ ಚೆಕ್ ಡ್ಯಾಮ್‌ಗಳ ನಿರ್ಮಾಣಕ್ಕೆ ಕಾರಣೀಭೂತರಾದರು.
ಡಿ.ಕೆ.ಶಿವಕುಮಾರ್ ರವರು ಜೈಲಿನಲ್ಲಿದ್ದಾಗ ಲಕ್ಷಾಂತರ ಜನ ಬೀದಿಗಿಳಿದು ಮಾಡಿದ ಹೋರಾಟ ಹಾಗೂ ಅವರು ಜೈಲಿನಿಂದ ಬಂದ ಬಳಿಕ ಡಿ.ಕೆ.ಶಿವಕುಮಾರ್ ರವರಿಗೆ ಸಿಕ್ಕ ಸ್ವಾಗತ ಅವರ ನಿಷ್ಠಾವಂತ ನಾಯಕತ್ವಕ್ಕೆ ಸಾಕ್ಷಿಯಾಗಿದೆ.
ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷದ ಸಂಘಟನೆ:
ಇದಾದ ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಖಾಲಿ ಇದ್ದ ನಾಯಕತ್ವದ ಸ್ಥಾನಕ್ಕೆ ಅಂದರೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಶ್ರೀಮತಿ ಸೋನಿಯಾ ಗಾಂಧಿ ಅವರು ಮಾರ್ಚ್ ೧೧, ೨೦೨೦ರಂದು ಡಿ.ಕೆ. ಶಿವಕುಮಾರ್ ಅವರನ್ನು ನೇಮಿಸಿದರು.
ಈ ನೇಮಕವಾದ ಕೆಲವೇ ದಿನಗಳಲ್ಲಿ ಕೋವಿಡ್ ಮಹಾಮಾರಿ ದೇಶದೆಲ್ಲೆಡೆ ಆವರಿಸಿತು. ಈ ಸಂದರ್ಭದಲ್ಲಿ ಮನೆಯಲ್ಲಿ ಕೂರದ ಶಿವಕುಮಾರ್ ಅವರು ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಿಗೆ ಉತ್ತೇಜನ ನೀಡಿ ಅವರು ಕೂಡ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಸಹಾಯ ಹಸ್ತ ನೀಡಿದರು.
ರಾಹುಲ್ ಗಾಂಧಿ ಅವರು ಭಾರತ ಜೋಡೋ ಯಾತ್ರೆ ಆರಂಭಿಸಿದ ನಂತರ ಕರ್ನಾಟಕದಲ್ಲಿ ೨೧ ದಿನಗಳ ಕಾಲ ೫೫೦ ಕಿ.ಮೀ ಉದ್ದದ ಭಾರತ ಜೋಡೋ ಯಾತ್ರೆ ಯಶಸ್ವಿ ಆಯೋಜನೆ ಮಾಡಿದರು. ಈ ಯೋಜನೆ ಹಾದುಹೋದ ಮಾರ್ಗದಲ್ಲಿ ಕಾಂಗ್ರೆಸ್ ಪಕ್ಷ ೨೦೨೩ರ ಸಾರ್ವತ್ರಿಕ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸುವಲ್ಲಿ ಪ್ರಮುಖ ಕಾರಣವಾಯಿತು..
ಪ್ರಜಾಧ್ವನಿ ಯಾತ್ರೆ ಮೂಲಕ ರಾಜ್ಯದ ಮೂಲೆ ಮೂಲೆ ಪ್ರವಾಸ ಮಾಡಿ ಎಲ್ಲ ವರ್ಗಗಳ ಜನರ ಸಂಕಷ್ಟ ಆಲಿಸಿದರು. ಅವುಗಳಿಗೆ ಪರಿಹಾರ ಕಂಡುಕೊಳ್ಳು ಯೋಜನೆಗಳನ್ನು ರೂಪಿಸಲು ನೆರವಾದರು. ಮೀನುಗಾರರು, ನೇಕಾರರು, ತಿಗಲರು, ಮಡಿವಾಳ, ಲೈಂಗಿಕ ಅಲ್ಪಸಂಖ್ಯಾತ ಸಮುದಾಯಗಳ ಕಷ್ಟ ಆಲಿಸಿದರು. ಈ ಕಾರ್ಯಕ್ರಮಗಳಲ್ಲಿ ಆಯಾ ಸಮುದಾಯಗಳ ಸಮಸ್ಯೆ ಬೇಡಿಕೆ ಆಲಿಸಿ, ಅವರಿಗೆ ಸೂಕ್ತ ನ್ಯಾಯ ದೊರಕಿಸಿಕೊಡುವ ಭರವಸೆ ಕೊಟ್ಟರು. ತಮ್ಮ ಮಾತಿನಂತೆ ಪಕ್ಷದ ಪ್ರಣಾಳಿಕೆಯಲ್ಲಿ ಎಲ್ಲಾ ವರ್ಗದ ಜನರ ಕಲ್ಯಾಣಕ್ಕೆ ಕಾರ್ಯಕ್ರಮ ರೂಪಿಸಲಾಯಿತು .