ಟ್ರಕ್‌ನಲ್ಲಿ ಪ್ರಯಾಣಿಸಿದ ರಾಹುಲ್ ಗಾಂಧಿ

ನವದೆಹಲಿ,ಮೇ.೨೩- ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ರಕ್ ಡ್ರೈವರ್‌ಗಳ ಸಮಸ್ಯೆ ತಿಳಿಯುವುದಕ್ಕಾಗಿ ನಿನ್ನೆ ರಾತ್ರಿ ಟ್ರಕ್‌ನಲ್ಲಿ ಪ್ರಯಾಣ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ದೆಹಲಿಯಿಂದ ಹೊರಟು ಅಂಬಾಲಾದಿಂದ ಚಂಡೀಗಢದವರೆಗೆ ಟ್ರಕ್‌ನಲ್ಲಿ ರಾಹುಲ್ ಗಾಂಧಿ ಪ್ರಯಾಣ ಮಾಡಿದ್ದು, ಟ್ರಕ್ ಚಾಲಕರು ಸಮಸ್ಯೆಗಳನ್ನು ಆಲಿಸಿದ್ದಾರೆ.
ಈ ಬಗ್ಗೆ ಕಾಂಗ್ರೆಸ್ ತನ್ನ ಟ್ವಿಟರ್ ಖಾತೆಯಲ್ಲಿ ರಾಹುಲ್ ಟ್ರಕ್‌ನಲ್ಲಿ ಹೋಗುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದು, ರಾಹುಲ್ ದೆಹಲಿಯಿಂದ ಚಂಡೀಗಢವರೆಗೂ ಟ್ರಕ್ ಡ್ರೈವರ್‌ಗಳೊಂದಿಗೆ ತೆರಳಿ ಅವರ ಕಷ್ಟಗಳನ್ನು ಕೇಳಿದ್ದಾರೆ. ದೇಶದಲ್ಲಿ ಸುಮಾರು ೯೦ ಲಕ್ಷ ಟ್ರಕ್ ಚಾಲಕರಿದ್ದಾರೆ. ಅವರಿಗೆ ಅವರದೇ ಆದ ಕಷ್ಟಗಳಿವೆ. ಅವರ ಮನ್ ಕೀ ಬಾತ್ ಕೇಳುವ ಕೆಲಸವನ್ನು ರಾಹುಲ್ ಗಾಂಧಿ ಮಾಡಿದ್ದಾರೆ ಎಂದು ಕಾಂಗ್ರೆಸ್ ಟ್ವೀಟ್‌ನಲ್ಲಿ ಬರೆದುಕೊಂಡಿದೆ. ಅಲ್ಲದೆ ಶೇರ್ ಮಾಡಿರುವ ವಿಡಿಯೋದಲ್ಲಿ ರಾಹುಲ್ ಗಾಂಧಿ ಟ್ರಕ್ ಚಾಲಕರೊಂದಿಗೆ ಮಾತನಾಡುವ ದೃಶ್ಯಗಳಿವೆ.