
ವಾಷಿಂಗ್ಟನ್, ಸೆ.೮- ೨೦೨೦ರಲ್ಲಿ ನಡೆದ ಕ್ಯಾಪಿಟಲ್ ಮೇಲಿನ ದಾಳಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಸಹಕರಿಸಲು ನಿರಾಕರಣಕ್ಕೆ ಸಂಬಂಧಿಸಿದಂತೆ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿದ್ದ ಸಂದರ್ಭ ಶ್ವೇತಭವನದ ಸಲಹೆಗಾರನಾಗಿದ್ದ ಪೀಟರ್ ನವಾರೊ ವಿರುದ್ಧ ಎರಡು ಕೌಂಟ್‌ಗಳ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಂದು ಕೌಂಟ್‌ಗೂ ಕೂಡ ನವಾರೊ ತಲಾ ಒಂದೊಂದು ವರ್ಷದ ಜೈಲುಸಜೆಗೆ ಒಳಗಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಕ್ಯಾಪಿಟಲ್ ಹಿಲ್ಸ್ ದಂಗೆ ಪ್ರಕರಣದ ತನಿಖೆಯಲ್ಲಿ ಸಹಕರಿಸುತ್ತಿಲ್ಲ. ತನಿಖೆ ನಡೆಸುತ್ತಿರುವ ಸಂಸದೀಯ ಸಮಿತಿಯನ್ನು ಧಿಕ್ಕರಿಸಿ ತಾನು ಕಾನೂನಿಗಿಂತ ಮೇಲು ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಪ್ರಕರಣದ ಅಭಿಯೋಜಕರು ಆರೋಪಿಸಿದ್ದರು. ೨೦೨೦ರ ಜನವರಿ ೬ರಂದು ನಡೆದ ಕ್ಯಾಪಿಟಲ್ ಹಿಲ್ಸ್ ದಂಗೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಂಸದೀಯ ಸಮಿತಿಯ ಎದುರು ವಾದ ಮಂಡಿಸಿದ ಅಭಿಯೋಜಕ(ವ್ಯಾಜ್ಯದಾರ) ಜಾನ್ ಕ್ರ್ಯಾಬ್, ೨೦೨೧ರ ಅಧ್ಯಕ್ಷೀಯ ಚುನಾವಣೆಯಲ್ಲಿ ವಂಚನೆ ನಡೆದಿದೆ ಎಂಬ ಟ್ರಂಪ್ ಅವರ ಆಧಾರರಹಿತ ಪ್ರತಿಪಾದನೆಯನ್ನು ನವಾರೊ ಪುನರುಚ್ಚರಿಸಿದ್ದಾರೆ. ಆದ್ದರಿಂದ ಅವರನ್ನು ವಿಚಾರಣೆಗೆ ಒಳಪಡಿಸುವ ಅಗತ್ಯವಿದೆ. ಆದರೆ ವಿಚಾರಣೆಗೆ ಹಾಜರಾಗುವಂತೆ ಸಮಿತಿ ನೀಡಿದ ಸೂಚನೆಯನ್ನು ನವಾರೊ ತಿರಸ್ಕರಿಸಿದ್ದಾರೆ. ವಿಚಾರಣೆಯಲ್ಲಿ ವೈಯಕ್ತಿಕ ಹಾಜರಾತಿಯಿಂದ ಟ್ರಂಪ್‌ಗೆ ವಿನಾಯಿತಿ ನೀಡಬೇಕೆಂದು ಆಗ್ರಹಿಸುತ್ತಿರುವ ನವಾರೊ ತಾನು ಕಾನೂನಿಗಿಂತ ಮಿಗಿಲು ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಹೇಳಿದರು.ಎರಡೂ ಕಡೆಯವರ ವಾದ-ಪ್ರತಿವಾದ ಆಲಿಸಿದ ಬಳಿಕ ಪೀಟರ್ ನವಾರೊ ವಿರುದ್ಧ ೨ ಕೌಂಟ್‌ಗಳ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ರಂಪ್ ಅವರ ಸಹಚರ ಸ್ಟೀವ್ ಬ್ಯಾನನ್ ಅವರು ಕಳೆದ ವರ್ಷ ಶಿಕ್ಷೆಗೆ ಗುರಿಯಾಗಿದ್ದಾರೆ. ಇದೀಗ ಟ್ರಂಪ್ ಅವರ ಮತ್ತೊಬ್ಬ ಮಿತ್ರ ನವಾರೊ ವಿರುದ್ಧ ಪ್ರಕರಣ ದಾಖಲಾಗಿದ್ದು, ಶಿಕ್ಷೆಗೀಡಾಗುವ ಸಾಧ್ಯತೆ ಹೆಚ್ಚಿದೆ. ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ನವಾರೊ, ಇದೊಂದು ಅಮೆರಿಕಾಗೆ ದುಃಖದ ದಿನವಾಗಿದೆ. ಇದರ ವಿರುದ್ಧ ಸುಪ್ರೀಂ ಕೋರ್ಟ್ ಕದ ತಟ್ಟುತ್ತೇನೆ ಎಂದು ತಿಳಿಸಿದ್ದಾರೆ.