ಟ್ರಂಪ್ ಬೆಂಬಲಿಗರ ದಾಂಧಲೆ ಅಧಿಕಾರಿ ಸಾವು

ವಾಷಿಂಗ್ಟನ್, ಜ. ೮- ಅಮೆರಿಕಾದ ಕ್ಯಾಪಿಟಲ್ ಬಳಿ ನಿನ್ನೆ ನಡೆದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗರ ದಾಂಧಲೆಯಲ್ಲಿ ಗಾಯಗೊಂಡಿದ್ದ ಪೊಲೀಸ್ ಅಧಿಕಾರಿಯೊಬ್ಬರು ಮೃತಪಟ್ಟಿದ್ದಾರೆ.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಚುನಾವಣಾ ಸೋಲನ್ನು ಒಪ್ಪಿಕೊಳ್ಳದ ಅವರ ಬೆಂಬಲಿಗರು ಚುನಾವಣಾ ಫಲಿತಾಂಶವನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿ ನಿನ್ನೆ ಅಮೆರಿಕಾ ಸಂಸತ್ ಭವನಕ್ಕೆ ಲಗ್ಗೆ ಹಾಕಿ ದಾಂಧಲೆ ನಡೆಸಿದ್ದರು.
ಈ ಸಂಘರ್ಷದಲ್ಲಿ ನಾಲ್ವರು ಮೃತಪಟ್ಟು, ಹಲವರು ಗಾಯಗೊಂಡಿದ್ದರು.
ಈ ಸಂಘರ್ಷದಲ್ಲಿ ಗಾಯಗೊಂಡಿದ್ದ ಅಮೆರಿಕಾ ಕ್ಯಾಪಿಟಲ್‌ನ ಪೊಲೀಸ್ ಅಧಿಕಾರಿಯೊಬ್ಬರು ಇಂದು ಮೃತಪಟ್ಟಿದ್ದಾರೆ.
ಈ ಘರ್ಷಣೆಯಲ್ಲಿ ಮೃತಪಟ್ಟವರ ಸಂಖ್ಯೆ ೫ಕ್ಕೆ ಏರಿದಂತಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಯು.ಎಸ್. ಕ್ಯಾಪಿಟಲ್‌ನ ಪೊಲೀಸ್ ಮುಖ್ಯಸ್ಥ ಸ್ಟೀವನ್ ಸುಂಡ್ ರಾಜೀನಾಮೆ ನೀಡಿದ್ದಾರೆ.
ಟ್ರಂಪ್ ಬೆಂಬಲಿಗರನ್ನು ತಡೆಯುವಲ್ಲಿ ಪೊಲೀಸರು ವಿಫಲವಾಗಿದ್ದಾರೆ ಎಂಬ ಟೀಕೆ ಕೇಳಿ ಬಂದ ಹಿನ್ನೆಲೆಯಲ್ಲಿ ಸ್ಟೀವನ್ ಸುಂಡ್ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.