ಟ್ರಂಪ್ ಪದಚ್ಯುತಿಗೆ ಅಮೆರಿಕ ಸಂಸತ್ ಸನ್ನದ್ಧ

ವಾಷಿಂಗ್ಟನ್,ಜ.೧೩- ಅಮೆರಿಕ ಅಧ್ಯಕ್ಷ ಡೊನಾಲ್ಡ್‌ಟ್ರಂಪ್ ವಿರುದ್ಧ ದೋಷಾರೋಪಣೆ ಹೊರಿಸಿ ಅಧಿಕಾರದಿಂದ ಕೆಳಗಿಳಿಸಲು ಸಂಸತ್ ಮುಂದಾಗಿದೆ.
ಅಧ್ಯಕ್ಷೀಯ ಚುನಾವಣೆಯಲ್ಲಿ ಪರಾಭವಗೊಂಡ ಬಳಿಕ ಹಲವು ರೀತಿಯ ವಿವಾದಕ್ಕೆ ಗುರಿಯಾಗಿರುವ ಟ್ರಂಪ್ ಅವರ ಪದಚ್ಯುತಿಗೆ ಸಿದ್ಧತೆಗಳು ನಡೆದಿವೆ.
ಜ. ೨೦ ರಂದು ನಿಯೋಜಿತ ಅಧ್ಯಕ್ಷ ಜೋ ಬೈಡೆನ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಆದರೆ,
ಅಧಿಕೃತವಾಗಿ ಹುದ್ದೆ ತೊರೆಯಲು ಟ್ರಂಪ್‌ಗೆ ಡೆಮಾಕ್ರಾಟ್ಸ್ ಕಡೆಯ ಅವಕಾಶವನ್ನು ನೀಡಲಿದ್ದಾರೆ.
ಅಧ್ಯಕ್ಷ ಹುದ್ದೆ ತೊರೆಯಲು ಒಂದುವಾರ ಮಾತ್ರ ಬಾಕಿ ಉಳಿದಿದ್ದು, ಯಾವಾಗ ಹುದ್ದೆ ತ್ಯಜಸಲಿದ್ದಾರೆ ಎಂಬುದು ಅಧಿಕೃತವಾಗಿ ದೃಢಪಟ್ಟಿಲ್ಲ.
ಅಮೆರಿಕ-ಮೆಕ್ಸಿಕೊ ಗಡಿಗೆ ವಿಹಾರಕ್ಕೆ ತೆರಳುವ ಮುನ್ನ ಪ್ರತಿಕ್ರಿಯೆ ನೀಡಿರುವ ಅವರು, ತಮ್ಮ ವಿರುದ್ಧ ದೋಷಾರೋಪಣೆ ಆರೋಪ ಹೊರಿಸುತ್ತಿರುವ ಕ್ರಮ ಸರಿಯಲ್ಲ. ಇದರಿಂದ ತಮಗೆ ತೀವ್ರ ಕೋಪ ಬಂದಿದೆ ಎಂದು ಹೇಳಿದ್ದಾರೆ.
ಅಮೆರಿಕದ ಕ್ಯಾಪಿಟಲ್ ಕಟ್ಟಡದ ಮೇಲೆ ಅವರ ಬೆಂಬಲಿಗರು ಪುಂಡಾಟಿಕೆ ನಡೆಸಿದ ನಂತರ ಸಾರ್ವಜನಿಕವಾಗಿ ಟ್ರಂಪ್ ಎಲ್ಲೂ ಕಾಣಿಸಿಕೊಂಡಿಲ್ಲ. ಟ್ರಂಪ್ ಟ್ವಿಟರ್ ಖಾತೆಯೂ ಸ್ಥಗಿತಗೊಂಡಿದ್ದು, ಅವರು ಅಧಿಕೃತ ಹೇಳಿಕೆ ನೀಡಲು ಆಗುತ್ತಿಲ್ಲ.
ಟ್ರಂಪ್ ಅವರ ಅವಧಿ ಮುಗಿಯುತ್ತಿದ್ದರೂ ನಿಯಮಾವಳಿಗಳ ಅನುಸಾರ ಹುದ್ದೆ ತೊರೆಯಲು ಮುಂದಾಗಿಲ್ಲ. ಈ ಹಿನ್ನೆಲೆಯಲ್ಲಿ ೨೫ನೇ ತಿದ್ದುಪಡಿಯ ವಿಶೇಷ ಅಧಿಕಾರ ಬಳಕೆ ಮಾಡಿಕೊಂಡು ಟ್ರಂಪ್ ವಿರುದ್ಧ ಕ್ರಮಕೈಗೊಳ್ಳಲು ಸಂಸತ್ ಚಿಂತನೆ ನಡೆಸಿದೆ.
ಈ ಹಿಂದೆ ಯಾರ ವಿರುದ್ಧವೂ ಈ ಅಧಿಕಾರ ಬಳಸಲಾಗಿಲ್ಲ. ಅಧ್ಯಕ್ಷೀಯ ಅವಧಿ ಅಂತ್ಯಗೊಂಡ ನಂತರವೂ ಹುದ್ದೆ ತೊರೆಯದಿದ್ದರೆ ವಿಶೇಷಾಧಿಕಾರ ಬಳಸಿಕೊಂಡು ಸಂಸತ್ ಈ ಕ್ರಮ ಕೈಗೊಳ್ಳಲಿದೆ.
ಕ್ಯಾಪಿಟಲ್ ಕಟ್ಟಡದ ಮೇಲೆ ನಡೆದ ದಾಳಿ ಹಾಗೂ ಹಿಂಸಾಚಾರದಿಂದಾಗಿ ಐವರು ಸಾವನ್ನಪ್ಪಿರುವುದು ಟ್ರಂಪ್‌ಗೆ ಕಗ್ಗಂಟಾಗಿ ಪರಿಣಮಿಸಿದೆ. ಟ್ರಂಪ್ ಬೆಂಬಲಿಗರ ಕೃತ್ಯ ಇದಾಗಿದ್ದು, ಅಮೆರಿಕ ಸಂಸತ್‌ನಲ್ಲಿ ಟ್ರಂಪ್ ಭಾರಿ ಮುಖಭಂಗ ಅನುಭವಿಸುವಂತಾಗಿದೆ.