ಟ್ರಂಪ್ ಟ್ವಿಟರ್ ಖಾತೆ ಶಾಶ್ವತ ಸ್ಥಗಿತ

ವಾಷಿಂಗ್ಟನ್, ಜ.೯- ಅಮೆರಿಕದ ಅಧಿಕಾರದ ಶಕ್ತಿಕೇಂದ್ರ ಕ್ಯಾಪಿಟಲ್ ಮೇಲೆ ನಡೆದ ದಾಂಧಲೆಗೆ ಮತ್ತಷ್ಟು ಪ್ರಚೋದನೆ ನೀಡುವ ಅಪಾಯವಿದೆ ಎಂದು ಪರಿಗಣಿಸಿ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಖಾತೆಯನ್ನು ಶಾಶ್ವತವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಟ್ವಿಟ್ಟರ್ ಸಂಸ್ಥೆ ತಿಳಿಸಿದೆ.

ಕ್ಯಾಪಿಟಲ್ ಮೇಲೆ ದಾಳಿನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಾತ್ಕಾಲಿಕವಾಗಿ ೨೪ ಗಂಟೆಗಳ ಕಾಲ ಟ್ರಂಪ್ ಅವರ ಟ್ವಿಟ್ಟರ್ ಖಾತೆಯನ್ನು ಅಮಾನತು ಮಾಡಲಾಗಿತ್ತು .ಅಲ್ಲದೆ ಇದೇ ರೀತಿ ಮುಂದುವರಿದರೆ ಶಾಶ್ವತವಾಗಿ ಬಂದ್ ಎಚ್ಚರಿಕೆ ನೀಡಲಾಗಿತ್ತು.

ಇದರ ಹೊರತಾಗಿಯೂ ಡೊನಾಲ್ಡ್ ಟ್ರಂಪ್ ಅವರು ಪದೇ ಪದೇ ಪ್ರಚೋದನೆ ನೀಡುವ ಟ್ವೀಟ್ ಗಳನ್ನು ಪ್ರಕಟಿಸುತ್ತಿದ್ದ ಹಿನ್ನೆಲೆಯಲ್ಲಿ ಅವರ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ.

ಡೊನಾಲ್ಡ್ ಟ್ರಂಪ್ ಅವರ ಖಾತೆಯಿಂದ ಇತ್ತೀಚೆಗೆ ಮಾಡಲಾದ ಟ್ವೀಟ್ ಗಳನ್ನು ಮತ್ತು ಸನ್ನಿವೇಶಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಬಳಿಕ ಗಲಾಟೆಗೆ ಮತ್ತಷ್ಟು ಪ್ರಚೋದನೆ ನೀಡುವ ಅಪಾಯವಿದೆ ಪರಿಗಣಿಸಿ ಇಂತಹ ಕ್ರಮ ಕೈಗೊಳ್ಳಲಾಗಿದೆ ಎಂದು ಟ್ವಿಟ್ಟರ್ ಸಂಸ್ಥೆ ತಿಳಿಸಿದೆ.

ಅಮೇರಿಕಾ ಹಿಂಸಾಚಾರದ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮ ಕಂಪನಿಗಳು ಟ್ರಂಪ್ ಅವರ ಖಾತೆಗಳನ್ನು ನಿರ್ವಹಿಸಿವೆ.ಹೀಗಾಗಿ ಟ್ರಂಪ್ ಅಧ್ಯಕ್ಷ ಅಧಿಕಾರ ಅವಧಿ ಮುಗಿಯುವವರೆಗೂ ಅವರ ಖಾತೆಯನ್ನು ಅಮಾನತುಗೊಳಿಸುವುದು ಫೇಸ್‌ಬುಕ್ ಮುಂಚೆಯೇ ಹೇಳಿತ್ತು.

ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬೈಡೆನ್ ಆಯ್ಕೆಯನ್ನು ತಾವು ವಿರೋಧಿಸುವುದಾಗಿ ಹೇಳಿರುವ ಟ್ರಂಪ್ ಅವರು ಜನವರಿ ೨೦ರಂದು ನಡೆಯಲಿರುವ ಅಧಿಕಾರ ಹಸ್ತಾಂತರ ಪ್ರಕ್ರಿಯೆಯಿಂದ ದೂರ ಉಳಿಯುವುದಾಗಿ ಅವರು ತಿಳಿಸಿದ್ದಾರೆ