ಟ್ರಂಪೋ….ಬಿಡೆನ್ನೋ…ಭವಿಷ್ಯಕ್ಕೆ ಮುದ್ರೆ

ವಾಷಿಂಗ್ಟನ್, ನ. ೩- ವಿಶ್ವದ ದೊಡ್ಡಣ್ಣ ಅಮೆರಿಕದ ೪೬ನೇ ಅಧ್ಯಕ್ಷ ಸ್ಥಾನದ ಆಯ್ಕೆಗಾಗಿ ಚುನಾವಣೆ ನಡೆಯಲು ಕ್ಷಣಗಣನೆ ಆರಂಭವಾಗಿದೆ.

ಭಾರತೀಯ ಕಾಲಮಾನ ಇಂದು ರಾತ್ರಿ ೭ ಗಂಟೆಯ ನಂತರ ಅಮೆರಿಕದಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಲಿದ್ದು ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಮಾಜಿ ಉಪಾಧ್ಯಕ್ಷ ಜೋ ಬೀಡೆನ್ ನಡುವೆ ತೀವ್ರ ಪೈಪೋಟಿ ನಡೆದಿದ್ದು ಇಬ್ಬರಲ್ಲಿ ಅಮೆರಿಕದ ಮತದಾರರು ಯಾರಿಗೆ ಮಣೆ ಹಾಕಲಿದ್ದಾರೆ ಎನ್ನುವುದು ತೀವ್ರ ಕುತೂಹಲ ಕೆರಳಿಸಿದೆ.

ಮತ್ತೆ ನಾಲ್ಕು ವರ್ಷಗಳ ಕಾಲ ಡೊನಾಲ್ಡ್ ಟ್ರಂಪ್ ಘೋಷವಾಕ್ಯದೊಂದಿಗೆ ಚುನಾವಣೆ ಎದುರಿಸಿರುವ ಡೊನಾಲ್ಡ್ ಟ್ರಂಪ್ ಅವರು ಅಮೆರಿಕವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಕನಸು ಕಟ್ಟಿಕೊಂಡಿದ್ದಾರೆ.

ಅಮೆರಿಕದ ಉಪಾಧ್ಯಕ್ಷರಾಗಿ ಎಂಟು ವರ್ಷಗಳ ಕಾಲ ಕೆಲಸ ಮಾಡಿದ್ದು ಈ ಬಾರಿ ಅಧ್ಯಕ್ಷರಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಡಿ ಎಂದು ಮತದಾರರಿಗೆ ಮನವಿ ಮಾಡಿರುವ ಜೋ ಬೀಡನ್ ಅವರು ಶ್ವೇತಭವನದತ್ತ ಮುಖ ಮಾಡಲು ಎಲ್ಲಾ ತಯಾರಿಗಳನ್ನು ಮಾಡಿಕೊಂಡಿದ್ದಾರೆ.

ತೀವ್ರ ಹಣಾಹಣಿ:

೭೪ ವರ್ಷದ ಡೊನಾಲ್ಡ್ ಟ್ರಂಪ್ ಮತ್ತು ೭೯ ವರ್ಷದ ಜೋ ಬಿಡೆನ್ ನಡುವೆ ಅಮೆರಿಕ ಅಧ್ಯಕ್ಷ ಸ್ಥಾನಕ್ಕಾಗಿ ತೀವ್ರ ಹಣಾಹಣಿ ಎದುರಾಗಿದೆ.

ಅಮೆರಿಕದ ಬಹುತೇಕ ಜನರು ಜೋ ಬೀಡೆನ್ ಪರವಾಗಿ ಮತ ಚಲಾಯಿಸಿದ್ದಾರೆ ಇದು ಸಹಜವಾಗಿಯೇ ಮತ್ತೊಮ್ಮೆ ಅಧ್ಯಕ್ಷರಾಗಬೇಕು ಎಂದು ಕನಸು ಕಾಣುತ್ತಿರುವ ಡೊನಾಲ್ಡ್ ಟ್ರಂಪ್ ಅವರಿಗೆ ಮುಳುವಾಗುವ ಸಾಧ್ಯತೆಗಳಿವೆ.

ಅಮೆರಿಕದಲ್ಲಿ ಕೋರೊನಾ ಸೋಂಕು ನಿರ್ವಹಣೆ ಮಾಡುವಲ್ಲಿ ಸಂಪೂರ್ಣವಾಗಿ ಡೊನಾಲ್ಡ್ ಟ್ರಂಪ್ ವಿಫಲರಾಗಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಈ ಬಾರಿಯ ಅಧ್ಯಕ್ಷಗಾದಿ ಅಷ್ಟು ಸುಲಭವಲ್ಲ ಎನ್ನುವ ಮಾತುಗಳು ಅಮೆರಿಕದಲ್ಲಿ ಕೇಳಿಬಂದಿವೆ.

ಉಭಯ ಅಧ್ಯಕ್ಷೀಯ ಅಭ್ಯರ್ಥಿಗಳು ಅಮೆರಿಕದ ಅಧ್ಯಕ್ಷ ಪದವಿ ಹಿಡಿಯಲು ದೇಶದ ವಿವಿಧ ಕಡೆ ಕೊರೋನ ಸೋಂಕು ಲೆಕ್ಕಿಸದೆ ಅಮೆರಿಕದ ವಿವಿಧ ಭಾಗಗಳಲ್ಲಿ ಪ್ರಚಾರದಲ್ಲಿ ಪಾಲ್ಗೊಂಡಿದ್ದಾರೆ.

ಡೊನಾಲ್ಡ್ ಟ್ರಂಪ್ ಅವರು ೧೫ಕ್ಕೂ ಹೆಚ್ಚು ರ್ಯಾಲಿಗಳನ್ನು ಹಲವು ರಾಜ್ಯಗಳಲ್ಲಿ ನಡೆಸಿದ್ದಾರೆ ಜೊತೆಗೆ ವರ್ಚುವಲ್ ಮೂಲಕ ಸಭೆ ನಡೆಸಿ ಮತದಾರರ ಮನ ಗೆಲ್ಲಲು ನಾನಾ ಕಸರತ್ತು ನಡೆಸಿದ್ದಾರೆ.

ತಾವೇನು ಕಡಿಮೆಯಿಲ್ಲ ಎನ್ನುವಂತೆ ಜೋ ಬೀಡೆನ್ ಅವರು ಕೂಡ ಹಲವು ರ್ಯಾಲಿಗಳನ್ನು ನಡೆಸುವ ಮೂಲಕ ಮತದಾರರ ಮನ ಗೆಲ್ಲಲು ಹರಸಾಹಸ ನಡೆಸಿದ್ದಾರೆ.

ಆರೋಪ ಪ್ರತ್ಯಾರೋಪ:

ಚುನಾವಣೆ ಪ್ರಚಾರ ಆರಂಭವಾದಾಗಿನಿಂದ ಡೊನಾಲ್ಡ್ ಟ್ರಂಪ್ ಮತ್ತು ಜೋ ಬೀಡನ್ ನಡುವೆ ಪರಸ್ಪರ ಆರೋಪ ಪ್ರತ್ಯಾರೋಪ ನಡೆದಿವೆ.

ಅಮೆರಿಕದ ಪ್ರಬುದ್ಧ ಮತದಾರರು ಯಾರಿಗೆ ಮತ ಚಲಾಯಿಸಲಿದ್ದಾರೆ ಎನ್ನುವುದು ಸದ್ಯಕ್ಕಿರುವ ಕುತೂಹಲ

ಬೀಡೆನ್ ಅಧ್ಯಕ್ಷ ಸಾದ್ಯತೆ
ಅಮೆರಿಕದ ವಿವಿಧಡೆ ಜೋ ಬಿಡೆನ್ ಅವರ ಪರವಾಗಿ ಅಲೆ ಕೇಳಿಬಂದಿದೆ ಜೊತೆಗೆ ಚುನಾವಣೆಗೂ ಮುನ್ನ ಚಲಾವಣೆಯಾದ ಬಹುತೇಕ ಮತಗಳು ಬೀಡೆನ್ ಪರ ಬಿದ್ದಿವೆ. ಹೀಗಾಗಿ ಅಮೆರಿಕದ ಮುಂದಿನ ಅಧ್ಯಕ್ಷರಾಗಿ ಜೋ ಬೀಡೆನ್ ಅವರು ಆಯ್ಕೆಯಾಗುವ ಸಾಧ್ಯತೆಗಳು ದಟ್ಟವಾಗಿವೆ.