ಟ್ಯಾಕ್ಟರ್, ಬೈಕ್ ಕಳ್ಳರ ಸೆರೆ 12 ಲಕ್ಷ ಮೌಲ್ಯದ ಮಾಲು ವಶ

ಬೆಂಗಳೂರು, ಜ.೧೧- ಟ್ಯಾಕ್ಟರ್ ಹಾಗೂ ದ್ವಿ ವಾಹನ ಕಳವು ಮಾಡುತ್ತಿದ್ದ ನಾಲ್ವರು ಕುಖ್ಯಾತ ಕಳ್ಳರನ್ನು ಬಂಧಿಸಿರುವ ಬಾಗಲಗುಂಟೆ ಪೊಲೀಸ್ ಠಾಣೆ ಪೊಲೀಸರು, ೧೨ ಲಕ್ಷ ರೂ. ಮೌಲ್ಯದ ೨ ಟ್ಯಾಕ್ಟರ್ ,ಟ್ರ್ಯಾಲಿ ಹಾಗೂ ೬ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ದಾಬಸಪೇಟೆ ಹೋಬಳಿಯ ನಿಜಗಲ್ ಕೆಂಪೆಹಳ್ಳಿಯ ಗೋವಿಂದರಾಜು (೩೫), ತುಮಕೂರು ತಾಲೂಕು ಊರುಡಗೆರೆ ಹೋಬಳಿಯ ಹಿರೇಹಳ್ಳಿವಾಸಿಗಳಾದ ಕೆಂಪರಾಜು ಕೆ. ಎಸ್. (೨೨), ಬಾಲಾಜಿ (೨೦), ಲೋಕೇಶ್ ಕೆ. (೨೧) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದ್ದಾರೆ.
ಆರೋಪಿಗಳಿಂದ ೧೨ ಲಕ್ಷ ರೂ. ಮೌಲ್ಯದ ೨ ಟ್ರ್ಯಾಕ್ಟರ್, ೨ ಟ್ರ್ಯಾಲಿ, ೬ ದ್ವಿಚಕ್ರ ವಾಹನಗಳನ್ನು ಬಾಗಲಗುಂಟೆ ಪೊಲೀಸರು ವಶಪಡಿಸಿಕೊಳ್ಳಲಾಗಿದೆ.
ಹೆಸರುಘಟ್ಟ ಮುಖ್ಯರಸ್ತೆಯ ಜನಪ್ರಿಯ ಲೇಔಟ್ ನ ಸತ್ಯನಾರಾಯಣ ಎನ್.(೪೨) ಅವರು ಕಳೆದ ಜ. ೪ರಂದು ರಾತ್ರಿ ೧೦.೩೦ರ ಸುಮಾರಿಗೆ ತಮ್ಮ ಮಹೀಂದ್ರ ಟ್ರ್ಯಾಕ್ಟರ್ ಹಾಗೂ ಟ್ರ್ಯಾಲಿಯನ್ನು ಮಂಜುನಾಥ ನಗರ, ಲಾರಿ ಸ್ಟ್ಯಾಂಡ್ ಬಳಿ ನಿಲ್ಲಿಸಿ ಮನೆಗೆ ಹೋಗಿದ್ದರು. ಮರುದಿನ ಬೆಳಗ್ಗೆ ೬.೩೦ರ ಸುಮಾರಿಗೆ ಬಂದು ನೋಡಿದಾಗ ಎರಡೂ ವಾಹನಗಳು ಕಳವಾಗಿದ್ದವು. ಈ ಬಗ್ಗೆ ಅವರು ಬಾಗಲಗುಂಟೆ ಪೊಲೀಸರಿಗೆ ದೂರು ನೀಡಿದ್ದರು.
ಅಪರಾಧ ವಿಭಾಗದ ಸಿಬ್ಬಂದಿ ಬಾಗಲಗುಂಟೆ ಠಾಣಾ ವ್ಯಾಪ್ತಿಯಲ್ಲಿರುವ ಶೆಟ್ಟಿಹಳ್ಳಿ ಪ್ರಿನ್ಸ್ ಟೌನ್ ಅಪಾರ್ಟ್ ಮೆಂಟ್ ಬಳಿ ವಾಹನಗಳ ತಪಾಸಣೆ ಮಾಡುವಾಗ ಅನುಮಾನಾಸ್ಪದವಾಗಿ ದ್ವಿಚಕ್ರವಾಹನದಲ್ಲಿ ಬಂದ ಆರೋಪಿಗಳನ್ನು ವಾಹನದ ದಾಖಲಾತಿಗಳನ್ನು ತೋರಿಸುವಂತೆ ಕೇಳಿದಾಗ, ಆರೋಪಿಗಳ ಬಳಿ ಯಾವುದೇ ದಾಖಲಾತಿಗಳು ಇಲ್ಲವಾಗಿದ್ದು, ಈತನನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ವಾಹನ ಕಳವು ಮಾಡಿರುವುದಾಗಿ ತಿಳಿದುಬಂದಿದೆ.
ಆರೋಪಿಗಳು ೨೦೧೯ನೇ ಸಾಲಿನಲ್ಲಿ ತುಮಕೂರು ಜಿಲ್ಲೆಯ ಪಟ್ನಾಯಕನಹಳ್ಳಿ ಪೊಲೀಸ್ ಠಾಣೆಯ ಕಡಾಯಿತಿ ಪ್ರಕರಣದಲ್ಲಿ ಮತ್ತು ತುಮಕೂರು ಜಿಲ್ಲೆ ಬಡವನಹಳ್ಳಿ ಪೊಲೀಸ್ ಠಾಣೆ ಸಾಮಾನ್ಯ ಕಳವು (ಕುರಿ ಕಳವು) ಪ್ರಕರಣದಲ್ಲಿ ಕೆಂಪರಾಜು ಕೆ.ಎಸ್. (೨೨) ಎಂಬಾತನನ್ನು ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರ ಬಂದಿದ್ದ. ಈ ಪ್ರಕರಣದಲ್ಲಿ ಆರೋಪಿಗಳಾದ ಗೋವಿಂದರಾಜು ಮತ್ತು ಲೋಕೇಶ್ ಕೆ.ಎಂಬವರು ತಲೆಮರೆಸಿಕೊಂಡು ಓಡಾಡುತ್ತಾ ಇಂತಹ ಕೃತ್ಯಗಳಲ್ಲಿ ತೊಡಗಿರುವುದಾಗಿ ತನಿಖೆಯಿಂದ ತಿಳಿದುಬಂದಿದೆ.
ಆರೋಪಿಗಳ ಬಂಧನದಿಂದ ಬಾಗಲಗುಂಟೆ ಪೊಲೀಸ್ ಠಾಣೆಯ ೨ ಟ್ರ್ಯಾಕ್ಟರ್ ಮತ್ತು ಟ್ರ್ಯಾಲಿ ಕಳವು, ಮಾದನಾಯಕಹಳ್ಳ ಪೊಲೀಸ್ ಠಾಣೆಯ ೨ ದ್ವಿಚಕ್ರ ವಾಹನ ಕಳವು, ಬ್ಯಾಡರಹಳ್ಳಿ ಪೊಲೀಸ್ ಠಾಣೆಯ ೧ ದ್ವಿಚಕ್ರ ವಾಹನ ಕಳವು ಒಟ್ಟು ೫ ಪ್ರಕರಣಗಳು ಪತ್ತೆಯಾಗಿವೆ. ಉಳಿದ ೩ ದ್ವಿಚಕ್ರ ವಾಹನಗಳ ವಾರಸುದಾರರ ಪತ್ತೆ ಕಾರ್ಯ ಪ್ರಗತಿಯಲ್ಲಿದೆ.
ಯಶವಂತಪುರ ಉಪ ವಿಭಾಗದ ಎಸಿಪಿ ಶ್ರೀನಿವಾಸ ರೆಡ್ಡಿ ಮಾರ್ಗದರ್ಶನದಲ್ಲಿ ಬಾಗಲಗುಂಟೆ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಸುನೀಲ್ ಎಚ್.ಬಿ., ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಳಾದ ಕುಮಾರ್ ಎಂ, ಶ್ರೀಕಂಠೇಗೌಡ, ಪ್ರಭು ಕೆ.ಎಲ್., ಲೋಕೇಶ್, ನಾಗೇಶ್, ಸಂತೋಷ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.