ಟ್ಯಾಂಕ್ ಸ್ವಚ್ಛತೆಗೆ ಇಳಿದಿದ್ದ ಇಬ್ವರು ಉಸಿರುಗಟ್ಟಿ ಸಾವು

ಚಿಕ್ಕಮಗಳೂರು,ನ.28-ನೀರಿನ ಟ್ಯಾಂಕ್ (ಸಂಪ್)ಸ್ವಚ್ಛತೆಗೆ ಇಳಿದಿದ್ದಾಗ ಉಸಿರುಗಟ್ಟಿ ಇಬ್ಬರು ಸಾವನ್ನಪ್ಪಿ ಓರ್ವನ ಸ್ಥಿತಿ ಗಂಭೀರವಾಗಿರುವ ಘಟನೆ ಕಡೂರು ಪಟ್ಟಣದ ದೊಡ್ಡಪೇಟೆಯಲ್ಲಿ ನಡೆದಿದೆ.
ಕಡೂರಿನ ಕುಮಾರ್(50) ಹಾಗೂ ವಸಂತ್ (35) ಸಾವನ್ನಪ್ಪಿದ ದುರ್ದೈವಿಗಳು. ಮತ್ತೋರ್ವ ವ್ಯಕ್ತಿ ಕಲೀಂನ ಸ್ಥಿತಿ ಚಿಂತಾಜನಕವಾಗಿದೆ. ಈತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಮನೆಯ ಮುಂದಿದ್ದ ಟ್ಯಾಂಕ್ ಸ್ವಚ್ಛ ಮಾಡುವಾಗ ಈ ದುರ್ಘಟನೆ ಜರುಗಿದೆ.
ನಿರ್ಮಾಣ ಹಂತದಲ್ಲಿದ್ದ ಮನೆಯ ಟ್ಯಾಂಕ್ ಅನ್ನು ಈ ಮೂರು ಜನರು ಸ್ವಚ್ಛ ಮಾಡುತ್ತಿದ್ದ ವೇಳೆ ಈ ದುರಂತ ನಡೆದಿದೆ. ಕಡೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಮೃತ ದೇಹಗಳನ್ನು ಕಡೂರು ತಾಲೂಕು ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಿದ್ದಾರೆ.