ಟ್ಯಾಂಕರ್ ಮೂಲಕ ಉಚಿತ ನೀರು ಪೂರೈಕೆ

ಬೆಂಗಳೂರು, ಮಾ. ೨೪- ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದ್ದು ಎಲ್ಲಾ ವರ್ಗದ ಜನರಿಗೆ ಉಚಿತ ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ಶ್ರೀಲಕ್ಷ್ಮಿಸಿದ್ದೇಶ್ವರ ಚಾರಿಟೆಬಲ್ ಟ್ರಸ್ಟ್ ಮತ್ತು ಕೆ.ಬಿ.ಎಲ್ ಗ್ರೂಪ್ ವತಿಯಿಂದ ೨೪ ತಾಸುಗಳ ಮಾದರಿಯಲ್ಲಿ ಮನೆಮನೆ ಬಾಗಿಲಿಗೆ ತಲುಪಿಸುವ ಕಾಯಕದಲ್ಲಿ ತೊಡಗಿ ಕೊಂಡಿದೆ.
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಂಜನಾಪುರ ವಾರ್ಡ್‌ನ ಹರಿನಗರ, ಅವಲಹಳ್ಳಿ,ಭಾಸ್ಕರ್ ನಗರ, ತಿಪ್ಪಸಂದ್ರ, ಬ್ಯಾಂಕ್ ಕಾಲೋನಿ, ಶ್ರೀನಿಧಿ ಲೇಔಟ್, ಕೋಣನಕುಂಟೆಯ ಅಯ್ಯಪ್ಪನಗರ ಬಡಾವಣೆಯ ಜನರಿಗೆ ಉಚಿತವಾಗಿ ನೀರು ಸರಬರಾಜು ಮಾಡಲಾಗುತ್ತಿದೆ.
ಬಮೂಲ್ ಮಾಜಿ ಅಧ್ಯಕ್ಷ ಆರ್.ಕೆ.ರಮೇಶ್ ಮಾತನಾಡಿ ಶ್ರೀಲಕ್ಷ್ಮಿಸಿದ್ದೇಶ್ವರ ಚಾರಿಟಿಬಲ್ ಟ್ರಸ್ಟ್ ಮತ್ತು ಕೆ.ಬಿ.ಎಲ್ ಗ್ರೂಪ್‌ನ ಶ್ರೀಧರ್ ಲಕ್ಷ್ಮಣ್ ಅವರು ಈ ವ್ಯಾಪ್ತಿಯ ಬಡವರು, ಮಧ್ಯಮ ವರ್ಗದವರು, ಕೂಲಿ ಕಾರ್ಮಿಕರು, ಜನಸಾಮಾನ್ಯರಿಗೆ ಕೈಲಾದ ಸಹಾಯ ಮಾಡಲೇಬೇಕೆಂಬ ಉದ್ದೇಶದಿಂದ ಸತತ ಮೂರು ವರ್ಷಗಳಿಂದ ಉಚಿತವಾಗಿ ನೀರು ಸರಬರಾಜು, ಉಚಿತ ಅಂಬುಲೆನ್ಸ್ ವಾಹನ, ಇಂದಿರಾ ಕ್ಯಾಂಟಿನ ಮಾದರಿಯಲ್ಲಿ ರೂ. ೧ ಗೆ ಪ್ರತಿನಿತ್ಯ ೫೦೦ ಜನರಿಗೆ ಬೆಳಗಿನ ಉಪಹಾರ ದಂತಹ ಸಮಾಜಮುಖಿ ಕಾರ್ಯದಲ್ಲಿ ತೊಡಗಿರುವಾಗ ಸರ್ಕಾರ ಬಡವರಿಗಾಗಿ ಇರುವ ಇಂದಿರಾ ಕ್ಯಾಂಟಿನ್ ಅನ್ನು ಮುಚ್ಚಲು ಹೊರಟಿರುವುದು ರಾಜಕೀಯ ಪ್ರೇರಿತವಾಗಿದ್ದು ಬಡವರಿಗೋಸ್ಕರ ಇಂದಿರಾ ಕ್ಯಾಂಟಿನ್ ಅನ್ನು ನಡೆಸಿಕೊಂಡು ಹೋಗಬೇಕೆಂದು ಒತ್ತಾಯಿಸಿದರು.
ಶ್ರೀಲಕ್ಷ್ಮಿಸಿದ್ದೇಶ್ವರ ಚಾರಿಟೆಬಲ್ ಟ್ರಸ್ಟ್ ಮತ್ತು ಕೆ.ಬಿ.ಎಲ್ ಗ್ರೂಪ್ ನ ಟ್ರಸ್ಟಿ ಶ್ರೀಧರ್ ಲಕ್ಷ್ಮಣ್ ಮಾತನಾಡಿ ಸತತ ಮೂರು ವರ್ಷಗಳಿಂದ ಉಚಿತವಾಗಿ ಕುಡಿಯುವ ನೀರು ಬೆಳಿಗ್ಗೆ ೬ ರಿಂದ ಸಂಜೆ ೬ ರವರೆಗೆ ಮಾತ್ರ ಸರಬರಾಜು ಮಾಡಲಾಗುತ್ತಿತ್ತು. ಅಂಜನಾಪುರ ಬಡಾವಣೆಗಳಲ್ಲಿ ನೀರಿನ ಸಮಸ್ಯೆ ತೀವ್ರಗೊಂಡಿದ್ದು ದಿನದ ೨೪ ಗಂಟೆಯೂ ಸಹ ೯೭೪೨೫೭೮೯೯೯ ಈ ನಂಬರಿಗೆ ವಾಟ್ಸ್‌ಪ್ ಮಾಡಿದರೆ ಸಾಕು ಬಡಾವಣೆಯ ಬೀದಿಗಳಿಗೆ ನೀರಿನ ಟ್ಯಾಂಕರ್ ಕಳುಹಿಸಿಕೊಡಲಾಗುವುದು. ಪ್ರತಿ ನಿತ್ಯ ಸುಮಾರು ೪೦ ರಿಂದ ೫೦ ನೀರಿನ ಟ್ಯಾಂಕರ್ ಕಳುಹಿಸಲಾಗುತ್ತಿದೆ ಎಂದರು.
ಚಿತ್ರ : ಶ್ರೀಲಕ್ಷ್ಮಿಸಿದ್ದೇಶ್ವರ ಚಾರಿಟೆಬಲ್ ಟ್ರಸ್ಟ್ ಮತ್ತು ಕೆ.ಬಿ.ಎಲ್ ಗ್ರೂಪ್ ನ ಟ್ರಸ್ಟಿನ ವತಿಯಿಂದ ಎಲ್ಲಾ ವರ್ಗದ ಜನರಿಗೆ ಉಚಿತ ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ಅಂಜನಾಪುರ ವಾರ್ಡನ ಅವಲಹಳ್ಳಿಯಲ್ಲಿ ಸರಬರಾಜು ಮಾಡಲಾಗುತ್ತಿದೆ.