ಟ್ಯಾಂಕರ್‌ ಡಿಕ್ಕಿ: ಸವಾರ ಮೃತ್ಯು

 

ಮೂಲ್ಕಿ, ಸೆ.೧೪- ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ಮುಖ್ಯ ಜಂಕ್ಷನ್ ನಲ್ಲಿ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳವಾರ ಸಂಜೆ ನಡೆದಿದೆ.

ಮೃತ ಯುವಕನನ್ನು ಪಕ್ಷಿಕೆರೆ ಹೊಸಕಾಡು ನಿವಾಸಿ ಚರಣ್ ರಾಜ್ (28) ಎಂದು ಗುರುತಿಸಲಾಗಿದೆ. ಮಂಗಳೂರಿನಿಂದ ಉಡುಪಿಯತ್ತ ಹೋಗುತ್ತಿದ್ದ ಟ್ಯಾಂಕರ್ ಢಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ಚರಣ್ ರಾಜ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮಂಗಳೂರಿನಿಂದ ಉಡುಪಿ ಕಡೆಗೆ ಸಂಚರಿಸುತ್ತಿದ್ದ ಟ್ಯಾಂಕರ್‌ನ ಚಕ್ರಕ್ಕೆ ಚರಣ್ ರಾಜ್ ಅವರ ಬೈಕ್ ಸಿಲುಕಿಕೊಂಡಿತ್ತು. ಈ ವೇಳೆ ಬೈಕ್‌ನ್ನು ಟ್ಯಾಂಕರ್‍ ಕೆಲ ದೂರ ಎಳೆದುಕೊಂಡು ಹೋಗಿದೆ. ಈ ವೇಳೆ ಚರಣ್‌ರಾಜ್ ಅವರ ತಲೆ ರಸ್ತೆಗೆ ಅಪ್ಪಳಿಸಿದ್ದರಿಂದ ತೀವ್ರ ರಕ್ತಸ್ರಾವ ಉಂಟಾಗಿದೆ. ಕೂಡಲೇ ಅವರನ್ನು ಮುಕ್ಕದ ಖಾಸಗಿ ಆಸ್ಪತ್ರೆಯೊಂದಕ್ಕೆ ಸಾಗಿಸಲಾಯಿತಾದರೂ ಅವರು ಸಾವನ್ನಪ್ಪಿದರು. ಸುರತ್ಕಲ್‌ನಲ್ಲಿ ಚರಣ್ ರಾಜ್ ಗ್ರಾಫಿಕ್ ಡಿಸೈನರ್‍ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಚರಣ್ ರಾಜ್ ಅವರಿಗೆ ಕಳೆದ ಒಂದು ವರ್ಷದ ಹಿಂದೆಯಷ್ಟೇ ಮದುವೆಯಾಗಿತ್ತು. ಮಂಗಳೂರು ಉತ್ತರ ವಲಯದ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.