ಟ್ಯಾಂಕರ್‌ನಲ್ಲಿ ಆಕಸ್ಮಿಕ ಅಗ್ನಿ ಅವಘಡ: ತಪ್ಪಿದ ಅನಾಹುತ


ಬಂಟ್ವಾಳ, ಜೂ.೯- ಚಲಿಸುತ್ತಿದ್ದ ಟ್ಯಾಂಕರ್ ವೊಂದರ ಚಕ್ರಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಿ.ಸಿ.ರೋಡಿನಲ್ಲಿ ನಡೆದಿದೆ. ಆದರೆ ಅದೃಷ್ಟವಶಾತ್ ಸಂಭಾವ್ಯ ಭಾರೀ ಅನಾಹುತ ತಪ್ಪಿದಂತಾಗಿದೆ.
ಬಿ.ಸಿ.ರೋಡಿನ ಸರ್ಕಲ್ ಬಳಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಈ ಘಟನೆ ನಡೆದಿದ್ದು ಸಕಾಲಿಕದಲ್ಲಿ ಬಂಟ್ವಾಳ ಅಗ್ನಿ ಶಾಮಕ ದಳದವರು ಆಗಮಿಸಿ ಬೆಂಕಿನಂದಿಸಿ ದೊಡ್ಡ ಅನಾಹುತ ತಪ್ಪಿಸಿದ್ದಾರೆ. ಮಂಗಳೂರು ಬೈಕಂ?ಪಾಡಿಯಿಂದ ಪೆಟ್ರೋಲಿಯಂ ಹಾಗೂ ಡೀಸೆಲ್ ತುಂಬಿಸಿಕೊಂಡು ಬೆಂಗಳೂರು ಕಡೆಗೆ ಹೋಗುವ ವೇಳೆ ಬಿ.ಸಿ.ರೋಡು ಸರ್ಕಲ್ ಬಳಿ ಸಮೀಪಿಸುತ್ತಿದ್ದಂತೆ ಚಕ್ರದಲ್ಲಿ ಬೆಂಕಿ ಕಾಣಿಸಿಕೊಂಡು ಉರಿಯಲಾರಂಭಗೊಂಡಿದೆ. ಬೆಂಕಿ ಹತ್ತಿಕೊಂಡು ಉರಿಯುತ್ತಿರುವ ದೃಶ್ಯ ಕಂಡ ಸ್ಥಳೀಯ ಬಾಡಿಗೆ ಮನೆ ನಿವಾಸಿ ಉಪವಲಯ ಅರಣ್ಯ ಇಲಾಖೆಯ ಅಧಿಕಾರಿ ಪ್ರೀತಂ ಅವರು ಅಗ್ನಿಶಾಮಕ ದಳದವರಿಗೆ ಫೋನ್ ಮಾಡಿ ತಿಳಿಸಿದ್ದಾರೆ. ಅಗ್ನಿಶಾಮಕ ದಳದ ಇನ್ಸ್ ಪೆಕ್ಟರ್ ಯೋಗೀಶ್, ಸಿಬ್ಬಂದಿಗಳು ತಕ್ಷಣವೇ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಘಟನಾ ಸ್ಥಳಕ್ಕೆ ಬಂಟ್ವಾಳ ನಗರ ಠಾಣಾ ಎಸ್. ಐ. ಅವಿನಾಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.