ಟೋಲ್ ದರ ದುಬಾರಿ

ಬೆಂಗಳೂರು,ಜು.೫-ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದೆ. ಈಗ ಇದೇ ದಶಪಥ ಹೆದ್ದಾರಿಯ ಎರಡನೇ ಟೋಲ್ ಜಾರಿಯಾದ ಬೆನ್ನಲ್ಲೇ ಈ ಮಾರ್ಗದಲ್ಲಿ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳ ಪ್ರಯಾಣ ದರ ಹೆಚ್ಚಳವಾಗಿದ್ದು, ಪ್ರಯಾಣಿಕರಿಗೆ ಟಿಕೆಟ್ ದರದ ಬಿಸಿ ತಟ್ಟಲಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಟೋಲ್ ಜುಲೈ ೧ ರಿಂದ ಆರಂಭಗೊಂಡಿದೆ. ಇಲ್ಲಿನ ಬಸ್‌ಗಳಿಗೆ ಏಕಮುಖ ಸಂಚಾರಕ್ಕೆ ೫೨೫ ರೂ. ಟೋಲ್ ಸಂಗ್ರಹಿಸಲಾಗುತ್ತಿದೆ.
ಇದನ್ನ ಸರಿದೂಗಿಸಲು ಕೆಎಸ್‌ಆರ್‌ಟಿಸಿ ಈ ಮಾರ್ಗದಲ್ಲಿ ಸಾಮಾನ್ಯ ಸಾರಿಗೆಗೆ ೧೫ ರೂ., ರಾಜಹಂಸಕ್ಕೆ ೨೦ ರೂ., ವೋಲ್ವೋ ಮತ್ತು ಎಲೆಕ್ಟ್ರಿಕ್ ಬಸ್‌ಗಳ ಟಿಕೆಟ್ ದರವನ್ನು ೩೦ ರೂ.ಗಳಷ್ಟು ಹೆಚ್ಚಿಸಿದೆ.
ಈ ಹಿಂದೆ ಸಾಮಾನ್ಯ ಸಾರಿಗೆಯಲ್ಲಿ ಬೆಂಗಳೂರಿನಿಂದ ಮೈಸೂರಿಗೆ ೧೭೦ ರೂ. ಇತ್ತು, ಈಗ ೧೮೫ ರೂ. ಆಗಿದೆ. ರಾಜಹಂಸ ೨೩೦ ರಿಂದ ೨೫೦ ರೂ.ಗೆ ಏರಿಕೆಯಾಗಿದೆ.
ವೋಲ್ವೋ ಅಥವಾ ಇವಿ ಬಸ್‌ಗಳಲ್ಲಿ ೩೩೦ ರಿಂದ ೩೬೦ ರೂ.ಗೆ ಟಿಕೆಟ್ ದರ ಹೆಚ್ಚಳ ಆಗಿದೆ.
ಇದಕ್ಕೂ ಮುನ್ನ ಕೆಳೆದ ಕೆಲ ತಿಂಗಳ ಹಿಂದಷ್ಟೇ ಬೆಂಗಳೂರು ಬಳಿಯ ಕಣಮಿಣಕಿ ಹಾಗೂ ರಾಮನಗರ ಜಿಲ್ಲೆಯ ಶೇಷಗಿರಿಹಳ್ಳಿಯ ಟೋಲ್ ಪ್ಲಾಜಾಗಳಲ್ಲಿ ಟೋಲ್ ಸಂಗ್ರಹ ಶುರುವಾದಾಗ, ಆಗಲೂ ಕೂಡ ಬಸ್ ಟಿಕೆಟ್ ದರವನ್ನ ೨೦ ರಿಂದ ೩೫ ರೂ.ಗೆ ಹೆಚ್ಚಿಸಲಾಗಿತ್ತು. ಸದ್ಯ ಈಗ ಮತ್ತೆ ಏರಿಕೆ ಆಗಿರೋದು ಸಾರಿಗೆ ಸವಾರರ ಜೇಬಿಗೆ ಕತ್ತರಿ ಬಿದ್ದಂತಾಗಿದೆ.