‘ಟೋಲ್ ತೆರವುಗೊಳ್ಳುವವರೆಗೆಹೋರಾಟ ಮುಂದುವರಿಯಲಿದೆ’


ಮಂಗಳೂರು, ನ.೧೨- ಕಳೆದ ೧೫ ದಿನಗಳಿಂದ ಸುರತ್ಕಲ್ ಟೋಲ್ ತೆರವು ಹೋರಾಟ ಮುನೀರ್ ಕಾಟಿಪಳ್ಳ ನೇತೃತ್ವದಲ್ಲಿ ನಡೆಯುತ್ತಿದೆ. ಸಂಸದ ನಳಿನ್ ಕುಮಾರ್ ಕಟೀಲು ೧೫ ದಿನಗಳಲ್ಲಿ ತೆರವುಗೊಳಿಸುವುದಾಗಿ ಹೇಳಿಕೆ ನೀಡಿದ ಗಡುವು ನ. ೭ಕ್ಕೆ ಕೊನೆಗೊಂಡಿದೆ. ಆದರೆ ಟೋಲ್ ತೆರವು ಆಗಿಲ್ಲ. ಅವರ ಮಾತಿನಲ್ಲಿ ಸತ್ಯಾಂಶ ಇಲ್ಲ. ಸರಕಾರವೇ ಸುಳ್ಳಿನ ಸರಕಾರ. ಇದು ತುಳುನಾಡಿನ ಜನರ ಹೋರಾಟವಾಗಿದ್ದು, ಟೋಲ್ ತೆರವುಗೊಳ್ಳುವವರೆಗೆ ಮುಂದುವರಿಯಲಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಡಬಿದ್ರೆಯಲ್ಲಿ ರೈತರ ಹಲವು ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ನ. ೧೦ರಂದು ಪಕ್ಷಾತೀತ ಪ್ರತಿಭಟನೆ ನಡೆಸಲಾಗಿತ್ತು. ರಾಜ್ಯ ಸರಕಾರ ಬೇಡಿಕೆಗಳನ್ನು ಈಡೇರಿಸಲು ಕ್ರಮ ವಹಿಸದಿದ್ದರೆ ನ. ೨೮ರಂದು ಮೂಡಬಿದ್ರೆ ಕಿಸಾನ್ ಘಟಕದ ವತಿಯಿಂದ ರಾಜ್ಯ ಸರಕಾರದ ವಿರುದ್ಧ ಪ್ರತಿಭಟಿಸಲಾಗುವುದು. ಗುರುವಾರ ಮೂಡಬಿದ್ರೆ ರೈತರ ಹೋರಾಟಕ್ಕೆ ಕಾಂಗ್ರೆಸ್ ಪಕ್ಷ ಸಂಪೂರ್ಣ ಬೆಂಬಲ ನೀಡಿದೆ. ಅಕ್ರಮ ಸಕ್ರಮೀಕರಣ ಕಾಯಿದೆಯಡಿ ಅರ್ಜಿ ನಮೂನೆ ೫೦,೫೩, ೫೭ರಲ್ಲಿ ಅರ್ಜಿ ಸಲ್ಲಿಸಿರುವ ಎಲ್ಲಾ ರೈತರಿಗೆ ತಕ್ಷಣ ತಮ್ಮ ಸ್ವಾಧೀನದ ಕೃಷಿ ಭೂಮಿಯನ್ನು ಒದಗಿಸಲು ಸರಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ೯೪ ಸಿ, ೯೪ ಸಿಸಿ ಯಡಿ ಅರ್ಜಿ ಸಲ್ಲಿಸಿರುವ ಬಡವರಿಗೆ ಮನೆಯ ಹಕ್ಕು ಪತ್ರ ಒದಗಿಸಬೇಕು. ಮನಪಾ, ಪಟ್ಟಣ ಪಂಚಾಯತ್, ನಗರ ಪಂಚಾಯತ್, ಪುರಸಭೆ ವ್ಯಾಪ್ತಿಯ ೩ ಕಿ.ಮೀ. ವ್ಯಾಪ್ತಿಯ ಒಳಗೆ ಅಕ್ರಮ- ಸಕ್ರಮ ಅರ್ಜಿ ಸಲ್ಲಿಸಿರುವ ರೈತರಿಗೆ ತಮ್ಮ ಸ್ವಾಧೀನದ ಭೂಮಿ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ರೈತರು ಪ್ರತಿಭಟಿಸಿದ್ದು, ಈ ಬೇಡಿಕೆಯನ್ನು ಸರಕಾರ ಈಡೇರಿಸಬೇಕು. ರೈತರ ಜಮೀನಿನಲ್ಲಿ ಕಾರ್ಖಾನೆಗಳನ್ನು ಸ್ಥಾಪಿಸುವ ರೈತ ವಿರೋಧಿ ಕೃತ್ಯಗಳ ವಿರುದ್ಧ ರೈತರ ಪರವಾಗಿ ಕಾಂಗ್ರೆಸ್ ಹೋರಾಟವನ್ನು ನಿರಂತವಾಗಿ ಮುಂದುವರಿಸಲಿದೆ. ಬಳ್ಕುಂಜೆಯ ೧೦೦೦ ಎಕರೆ ಭೂಮಿಯನ್ನು ಡಿನೋಟಿಫೈ ಮಾಡಿದ ವಿಚಾರದ ಬಗ್ಗೆಯೂ ಕಾಂಗ್ರೆಸ್ ರೈತರ ಪರ ಹೋರಾಡಲಿದೆ ಎಂದರು. ಕೆಪಿಸಿಸಿ ಉಪಾಧ್ಯಕ್ಷ ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ರೈತರ ಹೋರಾಟವನ್ನು ಬೆಂಬಲಿಸುವುದಲ್ಲದೆ, ಜಿಲ್ಲೆ, ರಾಜ್ಯ ಮಟ್ಟದಲ್ಲಿಯೂ ಪ್ರತಿಭಟನೆ ಮುಂದುವರಿಯಲಿದೆ ಎಂದರು. ಗೋಷ್ಠಿಯಲ್ಲಿ ವಲೇರಿಯನ್ ಸಿಕ್ವೇರಾ, ರಾಜೇಶ್ ಕಡಲ್ಕೆರೆ ಉಪಸ್ಥಿತರಿದ್ದರು.