ಟೋಲ್‌ಗಳ ಯದ್ವಾತದ್ವ ಸುಂಕ ವಸೂಲಿ ವಿಧಾನಸಭೆಯಲ್ಲಿ ಮಾರ್ಧನಿ

ಬೆಂಗಳೂರು, ಮಾ. ೧೫- ಹೆದ್ದಾರಿಗಳಲ್ಲಿ ನಿಯಮ ಪಾಲಿಸದೆ ಟೋಲ್‌ಗಳನ್ನು ಸ್ಥಾಪಿಸಿ ಸುಂಕ ವಸೂಲಿ ಮಾಡುತ್ತಿರುವ ವಿಚಾರ ವಿಧಾನಸಭೆಯಲ್ಲಿಂದು ಪ್ರಸ್ತಾವವಾಗಿ ನಿಯಮಾವಳಿಗಳಂತೆ ಟೋಲ್‌ಗಳನ್ನು ಸ್ಥಾಪಿಸಿ, ಯದ್ವಾತದ್ವಾ ಸುಂಕ ವಸೂಲಿಗೆ ಕಡಿವಾಣ ಹಾಕಿ ಎಂದು ಪ್ರತಿಪಕ್ಷಗಳು ಒತ್ತಾಯಿಸಿದವು.
ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್‌ನ ಡಾ. ಜಿ. ಪರಮೇಶ್ವರ್ ಅವರು ಟೋಲ್ ಬಗ್ಗೆ ಕೇಳಿದ ಪ್ರಶ್ನೆ ಸಾಕಷ್ಟು ಚರ್ಚೆಗೆ ಎಡೆಮಾಡಿ ರಾಜ್ಯದ ಹಲವೆಡೆ ಎಲ್ಲೆಂದರಲ್ಲಿ ಟೋಲ್‌ಗಳನ್ನು ಸ್ಥಾಪಿಸಿ ಜನರಿಂದ ಸುಂಕ ವಸೂಲಿ ಮಾಡುತ್ತಿರುವ ವಿಚಾರವನ್ನು ಹಲವು ಸದಸ್ಯರು ಸದನದಲ್ಲಿ ಪ್ರಸ್ತಾಪಿಸಿ, ಸರಿಪಡಿಸಲು ಒತ್ತಾಯಿಸಿದರು.
ತುಮಕೂರು ಜಿಲ್ಲೆಯ ಕೊರಟಗೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿ-೦೩ ಹಾಗೂ ರಾಜ್ಯ ಹೆದ್ದಾರಿ-೩೩ ರಲ್ಲಿ ರಸ್ತೆ ಬಳಕೆದಾರರಿಂದ ೫ ಟೋಲ್‌ಗಳನ್ನು ಸ್ಥಾಪಿಸಿದ್ದೀರಿ. ಆದರೆ ನಿಯಮಾವಳಿಯಲ್ಲಿ ೨ ಟೋಲ್ ಪ್ಲಾಜಾಗಳ ಅಂತರ ಕನಿಷ್ಠ ೬೦ ಕಿ.ಮೀ. ಇರಬೇಕು ಎಂದಿದೆ. ಆದರೆ ಇಲ್ಲಿ ೨೧ ಕಿ.ಮೀ. ವ್ಯಾಪ್ತಿಯಲ್ಲೆ ೨ ಟೋಲ್ ಪ್ಲಾಜಾಗಳಿವೆ. ನಾವೇ ಮಾಡಿಕೊಂಡಿರುವ ನಿಯಮವನ್ನು ಉಲ್ಲಂಘಿಸಿದರೆ ಹೇಗೆ ಎಂದು ಡಾ. ಜಿ. ಪರಮೇಶ್ವರ್ ಪ್ರಶ್ನಿಸಿದರು.
ಇದಕ್ಕೆ ದನಿಗೂಡಿಸಿದ ಕಾಂಗ್ರೆಸ್‌ನ ರಾಘವೇಂದ್ರ ಯತ್ನಾಳ್, ಜೆಡಿಎಸ್‌ನ ನಾಡಗೌಡ ಇವರುಗಳು ಹೊಸಪೇಟೆ ಬಳಿ ೭ ಕಿ.ಮೀ. ಅಂತರದಲ್ಲಿ ೨ ಟೋಲ್‌ಗಳಿವೆ ಎಂದರು.
ನೆಲಮಂಗಲದ ಜೆಡಿಎಸ್ ಸದಸ್ಯ ಡಾ. ಶ್ರೀನಿವಾಸಮೂರ್ತಿ ೮ ಕಿ.ಮೀ. ವ್ಯಾಪ್ತಿಯಲ್ಲಿ ೪ ಟೋಲ್‌ಗಳಿವೆ ಎಂಬುದನ್ನು ಸದನದಲ್ಲಿ ಪ್ರಸ್ತಾಪಿಸಿದರು.
ಸದಸ್ಯರ ಮಾತುಗಳಿಗೆ ದನಿಗೂಡಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಸದಸ್ಯರುಗಳು ಪ್ರಸ್ತಾಪ ಮಾಡುತ್ತಿರುವುದನ್ನು ನೋಡಿದರೆ ಟೋಲ್‌ಗಳನ್ನು ಅವೈಜ್ಞಾನಿಕವಾಗಿ, ಅನಗತ್ಯವಾಗಿ ಕೆಲವೆಡೆ ಹಾಕಿರುವುದು ಬೆಳಕಿಗೆ ಬಂದಿದೆ. ಬಳಕೆ ಶುಲ್ಕ ವಸೂಲಿ ಮಾಡಿ. ಆದರೆ ಸುಲಿಗೆ ಬೇಡ. ಮತ್ತೊಮ್ಮೆ ಸರ್ವೆ ಮಾಡಿಸಿ ವೈಜ್ಞಾನಿಕವಾಗಿ ಟೋಲ್ ಪ್ಲಾಜಾಗಳನ್ನು ಸ್ಥಾಪಿಸಿ ಸಲಹೆ ಮಾಡಿದರು.
ಸದಸ್ಯರುಗಳ ಎಲ್ಲ ಪ್ರಸ್ತಾಪಗಳಿಗೆ ಉತ್ತರಿಸಿದ ಲೋಕೋಪಯೋಗಿ ಸಚಿವರಾದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು, ಬೂತ್‌ಗಳ ಅಂತರವನ್ನು ಪರಿಶೀಲಿಸಲು ಕ್ರಮ ಕೈಗೊಳ್ಳುತ್ತೇನೆ. ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಜತೆ ಚರ್ಚಿಸಿ ಎಲ್ಲವನ್ನು ಸರಿಪಡಿಸುವ ಭರವಸೆ ನೀಡಿದರು.
ಕಾಂಗ್ರೆಸ್‌ನ ಡಾ. ಜಿ. ಪರಮೇಶ್ವರ್ ಅವರು ವಾಹನಗಳಿಂದ ಜೀವಾವಧಿ ರಸ್ತೆ ತೆರಿಗೆ ಸಂಗ್ರಹ ಮಾಡಿದ ನಂತರವೂ ಮತ್ತೆ ಟೋಲ್‌ಗಳಲ್ಲಿ ಬಳಕೆ ಶುಲ್ಕ ವಸೂಲಿ ಮಾಡುವುದು ಸರಿಯಲ್ಲ ಎಂದಿದ್ದಾರೆ. ಆದರೆ ರಸ್ತೆಗಳ ಅಭಿವೃದ್ಧಿಗಾಗಿ ಸರ್ಕಾರ ಸಾಲ ಪಡೆದಿರುತ್ತದೆ. ಈ ಸಾಲವನ್ನು ತೀರಿಸಲು ಬಳಕೆದಾರರ ಶುಲ್ಕ ವಸೂಲಿ ಮಾಡಲೇಬೇಕು. ಇಲ್ಲದಿದ್ದರೆ ಅಭಿವೃದ್ಧಿ ಕುಂಠಿತವಾಗುತ್ತದೆ ಎಂದು ಹೇಳಿ, ಬಳಕೆದಾರರ ಶುಲ್ಕ ವಿಧಿಸುತ್ತಿರುವುದನ್ನು ಸಮರ್ಥಿಸಿಕೊಂಡರು.