ದಾವಣಗೆರೆ,ಜು.೧೨- ಟೊಮ್ಯಾಟೋಗೆ ಚಿನ್ನದಂತ ಬೆಲೆ ಬಂದಿದ್ದು, ಟೊಮ್ಯಾಟೋ ಹಣ್ಣನ್ನು ರಕ್ಷಿಸಿಕೊಳ್ಳುವುದೇ ರೈತರಿಗೆ ದೊಡ್ಡ ಸವಾಲಾಗಿದೆ. ಟೊಮ್ಯಾಟೋ ಹಣ್ಣಿಗೆ ಭಾರೀ ಬೇಡಿಕೆ ಬಂದ ಹಿನ್ನೆಲೆ, ರೈತರ ತೋಟಗಳಲ್ಲಿ ಟೊಮ್ಯಾಟೋ ಕಳ್ಳತನವಾಗುತ್ತಿರುವ ಘಟನೆಗಳು ಹೆಚ್ಚಾಗುತ್ತಿದೆ.
ದಾವಣಗೆರೆಯ ಮಾಯಕೊಂಡ ಹೋಬಳಿಯಲ್ಲಿ ಟೊಮ್ಯಾಟೋ ಹೆಚ್ಚಾಗಿ ಬೆಳೆಯುತ್ತಾರೆ. ಸುತ್ತಮುತ್ತಲ ಗ್ರಾಮದ ಜಮೀನುಗಳಲ್ಲಿ ಬೆಳೆಯುವ ತರಕಾರಿ ವಿದೇಶಗಳಿಗೂ ರಫ್ತಾಗುತ್ತದೆ. ಈಗಂತೂ ಟೊಮ್ಯಾಟೋಗೆ ಬಂಗಾರದ ಬೆಲೆ ಬಂದಿದೆ. ಕೆಜಿಗೆ ೧೦೦ರಿಂದ ೧೫೦ ರೂಪಾಯಿವರೆಗೆ ಮಾರಾಟವಾಗುತ್ತಿದೆ. ಹೀಗಾಗಿ ಬೆಲೆ ಏರಿಕೆಯಾದ್ದರಿಂದ ಜಮೀನುಗಳಲ್ಲಿ ಕಳ್ಳರ ಕಾಟವೂ ಹೆಚ್ಚಾಗಿದೆ.
ಹೀಗಾಗಿ ಕೊಡಗನೂರು ಗ್ರಾಮದ ಶರಣಪ್ಪ ಹಾಗೂ ಶರತ್ ಎಂಬಿಬ್ಬರು ರೈತರು ತಲಾ ಒಂದೊಂದು ಎಕರೆಯಲ್ಲಿ ಟೊಮ್ಯಾಟೊ ಬೆಳೆದಿದ್ದಾರೆ.
ಟೊಮ್ಯಾಟೋ ಕಳ್ಳತನವಾಗದಂತೆ ಎರಡು ನಾಯಿಗಳ ಜೊತೆ ಹಗಲು ರಾತ್ರಿ ಬೆಳೆಯನ್ನು ಕಾವಲು ಕಾಯುತ್ತಿದ್ದಾರೆ.
ಗ್ರಾಮದ ಮತ್ತೊಬ್ಬ ರೈತ ಮಹಿಳೆ ಪ್ರೇಮ ಕೂಡಾ ತಮ್ಮ ಒಂದೆಕರೆ ಜಮೀನಿನಲ್ಲಿ ಟೊಮ್ಯಾಟೊ ಬೆಳೆದು ಕಾವಲು ಕಾಯುತ್ತಿದ್ದಾರೆ.
ಇವರು ಈಗಾಗಲೇ ೨೦೦ ಬಾಕ್ಸ್ ಟೊಮ್ಯಾಟೊ ಮಾರುಕಟ್ಟೆ ತಲುಪಿಸಿದ್ದಾರೆ. ಹೊಲವನ್ನು ಇವರ ಪತಿ, ಮಕ್ಕಳು ಒಬ್ಬೊಬ್ಬರು ಒಂದೊಂದು ಪಾಳಿಯಂತೆ ಕಾವಲು ಕಾಯುತ್ತಿದ್ದಾರೆ.
ಬಾಕ್ಸ್ ಟೊಮೆಟೊಗೆ ೧,೮೦೦ ರಿಂದ ೨,೦೦೦ ರೂ.: ಒಂದು ಬಾಕ್ಸ್ ಟೊಮ್ಯಾಟೊಗೆ ಸದ್ಯ ೧,೮೦೦ರಿಂದ ೨,೦೦೦ ರೂಪಾಯಿ ಇದೆ. ಆದರೆ ನಮಗೆ ಬೆಳೆ ಉಳಿಸಿಕೊಳ್ಳುವುದೇ ಸವಾಲಿನ ಕೆಲಸವಾಗಿದೆ ಎಂದು ರೈತ ಮಹಿಳೆ ಪ್ರೇಮಾ ಹೇಳಿಕೊಂಡಿದ್ದಾರೆ.
ಕೊಡಗನೂರಿನ ಟೊಮ್ಯಾಟೊಗೆ ಭಾರಿ ಬೇಡಿಕೆಯಿರುವದರಿಂದ ಗ್ರಾಮದ ರೈತರು ಕಳ್ಳರಿಂದ ಟೊಮ್ಯಾಟೋ ರಕ್ಷಿಸಿಕೊಳ್ಳಲು ಪರದಾಡುವಂತ ಸ್ಥಿತಿ ಎದುರಾಗಿದೆ.