ಟೊಮ್ಯಾಟೊ ಬೆಳೆ ನಷ್ಟ ಪರಿಹಾರಕ್ಕೆ ಒತ್ತಾಯ

ವಿಜಯಪುರ, ಜು.೧೫: ತೀವ್ರ ಆರ್ಥಿಕ ಸಂಕಷ್ಟದ ನಡುವೆ ಕಷ್ಟಪಟ್ಟು ಬೆಳೆದಿರುವ ಟೊಮೋಟೋ ಬೆಳೆಗೆ ಸೂಕ್ತವಾದ ಬೆಲೆಯಿಲ್ಲದ ಕಾರಣ, ಬೆಳೆಯನ್ನು ಹೊರಗೆ ಸುರಿಯುವಂತಾಗಿದ್ದು, ಸರ್ಕಾರ ರೈತರ ಸಂಕಷ್ಟದ ಕಡೆಗೆ ಗಮನಹರಿಸಬೇಕು ಬೆಳೆ ನಷ್ಟವನ್ನು ಸರಿದೂಗಿಸಲು ಸಹಾಯಧನ ನೀಡಬೇಕು ಎಂದು ರೈತ ವಿ.ರಾಮಚಂದ್ರಪ್ಪ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ನಾನು ಹಲವಾರು ವರ್ಷಗಳಿಂದ ಕಡಿಮೆ ನೀರಿದ್ದರೂ ಕೂಡಾ ಹನಿನೀರಾವರಿ ಪದ್ಧತಿಯಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದೇನೆ. ದ್ರಾಕ್ಷಿ, ಟೊಮೋಟೊ, ಹೂವು, ತರಕಾರಿ ಬೆಳೆಗಳು ಬೆಳೆಯುತ್ತಿದ್ದೇನೆ. ಆದರೆ, ಮೂರು ವರ್ಷಗಳಿಂದ ಸಾಲಗಾರನಾಗಿದ್ದೇನೆಯೇ ಹೊರತು, ನಮ್ಮ ಶ್ರಮಕ್ಕೆ ತಕ್ಕಂತೆ ಫಲ ನೋಡಲಿಲ್ಲ. ಮೂರೂವರೆ ಎಕರೆ ಪ್ರದೇಶದಲ್ಲಿ ೩೫ ಸಾವಿರ ಗಿಡ ಟೊಮೋಟೊ ಬೆಳೆ ನಾಟಿ ಮಾಡಿದ್ದೇವೆ. ಸುಮಾರು ೧೦ ಲಕ್ಷ ರೂಪಾಯಿಗಳು ಬಂಡವಾಳ ಹೂಡಿಕೆ ಮಾಡಿದ್ದೇನೆ.
ಈಗ ಬೆಳೆ ಕಟಾವಾಗುತ್ತಿದೆ. ಒಂದು ಸಾವಿರ ಬಾಕ್ಸ್ ಟೊಮೋಟೊ ಕಿತ್ತು ಕೋಲಾರದ ಮಾರುಕಟ್ಟೆಗೆ ಕಳುಹಿಸಿದ್ದೇವು. ಆದರೆ, ಎರಡು ದಿನಗಳ ಕಾಲ ಹರಾಜು ಆಗಲಿಲ್ಲ. ನಂತರ ಎಲ್ಲವನ್ನೂ ಹೊರಗೆ ಚೆಲ್ಲಲಾಗಿದೆ. ಚಿಕ್ಕಬಳ್ಳಾಪುರ ಮಾರುಕಟ್ಟೆಗೆ ೪೫೦ ಬಾಕ್ಸ್ ಕಳುಹಿಸಿದ್ದೇವು. ಒಂದು ಬಾಕ್ಸ್ ಕೇವಲ ೨೦ ರೂಪಾಯಿಗೆ ಹರಾಜಾಗಿದೆ ಎಂದರು.
ರೈತ ನರಸಿಂಹಮೂರ್ತಿ ಮಾತನಾಡಿ, ಮಾರುಕಟ್ಟೆಯಲ್ಲಿ ಒಂದು ಬಾಕ್ಸ್ ಗೆ ಕನಿಷ್ಟ ೨೦೦ ರೂಪಾಯಿ ಬೆಲೆ ಇದ್ದಿದ್ದರೆ ನಾವು ಹಾಕಿರುವ ಬಂಡವಾಳವಾದರೂ ನಮಗೆ ವಾಪಸ್ಸು ಬರುತ್ತಿತ್ತು. ಈಗಿನ ಬೆಲೆಗಳಲ್ಲಿ ಟೊಮೋಟೊ ಹಣ್ಣು ಬಿಡಿಸಿರುವ ಕಾರ್ಮಿಕರ ಕೂಲಿಗೂ ಹಣ ಬಂದಿಲ್ಲ, ಹರಾಜಾಗಿರುವ ಹಣದಲ್ಲಿ ಬಾಡಿಗೆ ಕಳೆಯಬೇಕು, ಮಾರುಕಟ್ಟೆಯ ಕಮೀಷನ್ ಕಳೆಯಬೇಕು. ಇದರಿಂದ ನಮಗೆ ಯಾವುದೇ ಪ್ರಯೋಜನವಾಗಿಲ್ಲ. ಈ ಬಾರಿ ಒಂದು ಎಕರೆಗೆ ೧೦ ಲಕ್ಷದಂತೆ ೩೦ ಲಕ್ಷವಾಗಬಹುದೆಂದು ನಿರೀಕ್ಷೆ ಇಟ್ಟುಕೊಂಡಿದ್ದೇವು. ನಮ್ಮ ನಿರೀಕ್ಷೆಯೆಲ್ಲಾ ಮಣ್ಣು ಪಾಲಾಗಿದೆ. ಹೂವಿನ ಬೆಳೆಗೆ ಬೆಲೆಯಿಲ್ಲದೇ ತೋಟವನ್ನು ಬಿಟ್ಟುಬಿಟ್ಟೆವು. ದ್ರಾಕ್ಷಿ ಬೆಳೆ, ಆಲಿಕಲ್ಲಿನ ಹೊಡೆತಕ್ಕೆ ಸಿಲುಕಿ ನಾಶವಾಗಿದೆ. ಮುಂದೆ ಏನು ಮಾಡಬೇಕು ಎಂದು ದಿಕ್ಕು ತೋಚದಂತಾಗಿದೆ.
ರೈತ ಹನುಮಂತರಾಯಪ್ಪ ಮಾತನಾಡಿ, ರಸಗೊಬ್ಬರಗಳ ಬೆಲೆಗಳು ಗಗನಕ್ಕೇರಿವೆ. ಮನೆ ಮಂದಿಯೆಲ್ಲಾ ಸೇರಿಕೊಂಡು ತೋಟದಲ್ಲಿ ದುಡಿದರೂ ಕೂಡಾ ನಮ್ಮ ಶ್ರಮಕ್ಕೆ ತಕ್ಕ ಫಲ ಸಿಗುತ್ತಿಲ್ಲ. ಇಷ್ಟು ಮಾತ್ರಕ್ಕೆ ನಾವು ಕೃಷಿ, ತೋಟಗಾರಿಕೆ ಯಾಕೆ ಮಾಡಬೇಕು? ಎಂದೆನಿಸಿ ಬಿಟ್ಟಿದೆ. ಮುಂದಿನ ಬೆಳೆಗಳಿಗೆ ಬಂಡವಾಳಕ್ಕೆ ಏನು ಮಾಡಬೇಕು? ಮಾಡಿರುವ ಸಾಲ ಹೇಗೆ ತೀರಿಸಬೇಕು? ಕುಟುಂಬಗಳ ನಿರ್ವಹಣೆಗೆ ಏನು ಮಾಡಬೇಕು ಎನ್ನುವ ಆತಂಕ ಶುರುವಾಗಿದೆ. ಕೊಳವೆಬಾವಿಗಳು ಕೊರೆಯಿಸಿರುವ ಸಾಲ, ಔಷಧಿಗಳು, ರಸಗೊಬ್ಬರಗಳು, ಕಾರ್ಮಿಕರ ಕೂಲಿ, ಬ್ಯಾಂಕ್ ಸಾಲಗಳು ಇವೆಲ್ಲಾ ಹೆಚ್ಚಿನ ಹೊರೆಯಾಗಿ ಕಾಡುತ್ತಿವೆ ಎಂದರು.