ಟೊಮ್ಯಾಟೊ ದುಬಾರಿ ಗ್ರಾಹಕ ಗಾಬರಿ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಜು.೧೧:ರಾಜ್ಯದಲ್ಲಿ ಟೊಮ್ಯಾಟೊ ದರ ಗಗನಕ್ಕೇರುತ್ತಿದೆ. ಕೇವಲ ಟೊಮ್ಯಾಟೊ ದರ ಮಾತ್ರವಲ್ಲ, ತರಕಾರಿ ದರವೂ ದುಬಾರಿಯಾಗಿದ್ದು, ಜನಸಾಮಾನ್ಯರ ಜೇಬಿಗೆ ಕತ್ತರಿ ಬಿದ್ದಿದೆ. ಬೆಂಗಳೂರಿಗೆ ಸಮೀಪವಿರುವ ಕೋಲಾರದಲ್ಲಿ ೧೫ ಕೆಜಿ ಟೊಮ್ಯಾಟೊ ಬಾಕ್ಸ್ ದರ ೧,೮೦೦ ರೂ.ಗೆ ಏರಿಕೆಯಾಗಿದೆ. ಇದು ಹೀಗೆ ಮುಂದುವರೆದರೆ ಇನ್ನು ೨ ದಿನಗಳಲ್ಲಿ ೨ ಸಾವಿರ ಗಡಿ ದಾಟುವ ಆತಂಕವಿದೆ.
ಟೊಮ್ಯಾಟೊ ದರ ಏರಿಕೆ ತಾತ್ಕಾಲಿಕ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದರಾದರೂ ದಿನೇ ದಿನೇ ಟೊಮ್ಯಾಟೊ ದರ ಏರಿಕೆಯಾಗುತ್ತಲೇ ಇದೆ. ಏಷ್ಯಾದಲ್ಲೇ ೨ನೇ ಅತೀ ದೊಡ್ಡ ಎಪಿಎಂಸಿ ಮಾರುಕಟ್ಟೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮ್ಯಾಟೊ ದರ ನಿರಂತರವಾಗಿ ಏರಿಕೆಯತ್ತ ಮುಖ ಮಾಡಿದೆ.
ಪ್ರತಿ ೧೫ ಕೆಜಿ ಬಾಕ್ಸ್‌ಗೆ ೮೦೦ ರೂ.ನಿಂದ ಸಾವಿರ ರೂ.ವರೆಗೆ ಮಾರಾಟವಾಗುತ್ತಿತ್ತು. ಈಗ ೧೫ ಕೆಜಿ ಬಾಕ್ಸಿನ ದರ ೧,೮೦೦ ರೂ.ಗೆ ಬಂದು ನಿಂತಿದೆ.
ನಿನ್ನೆ ಕೋಲಾರದಲ್ಲಿ ಎಪಿಎಂಸಿ ಮಾರುಕಟ್ಟೆಯಲ್ಲಿ ೧,೬೦೦ ರೂ.ಗೆ ಹರಾಜಾಗಿತ್ತು. ಇಂದು ೨೦೦ ರೂ. ಏರಿಕೆ ಕಂಡಿದೆ. ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಎಲ್ಲ ರಾಜ್ಯಗಳಿಂದಲೂ ಬೇಡಿಕೆ ಹೆಚ್ಚಾಗಿದೆ.
ಈ ಪೈಕಿ ಉತ್ತರ ಭಾರತ ರಾಜ್ಯಗಳಲ್ಲಿ ಹೆಚ್ಚಾಗಿ ಮಳೆಯಾಗುತ್ತಿದ್ದು, ಆ ಭಾಗದಲ್ಲಿ ಬೆಳೆ ನೀರು ಪಾಲಾಗಿವೆ. ಇದರಿಂದಾಗಿ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಬೆಳೆದಿರುವ ಟೊಮ್ಯಾಟೊಗೆ ಭಾರಿ ಬೇಡಿಕೆ ಬಂದಿದೆ.
ಮತ್ತೊಂದೆಡೆ ಟೊಮ್ಯಾಟೊ ಬೆಳೆ ವೈರಸ್ ರೋಗ ತಗುಲಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಬೆಳೆ ಬಂದಿಲ್ಲ. ಇದೂ ಕೂಡ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.
ಎಪಿಎಂಸಿ ಮಾರುಕಟ್ಟೆಗೆ ಮೂರು ವಿಧದ ಟೊಮ್ಯಾಟೊಗಳು ಬರುತ್ತಿದ್ದು, ನಾಟಿ, ಸೀಡ್ಸ್ ಹಾಗೂ ಗೋಲಿ ಟೊಮ್ಯಾಟೊ ಬರುತ್ತಿದೆ. ನಾಟಿ ಟೊಮ್ಯಾಟೊ ಬಾಕ್ಸ್‌ಗೆ ೧,೭೫೦ ರೂ., ಸೀಡ್ಸ್ ಟೊಮ್ಯಾಟೊ ೧,೮೦೦ ರಿಂದ ೧,೮೫೦ ಹಾಗೂ ಗೋಲಿ ಟೊಮ್ಯಾಟೊ ಸಾವಿರ ರೂ.ಗೆ ಹರಾಜಾಗಿದೆ.
ಆಗಸ್ಟ್‌ನಲ್ಲಿ ಟೊಮ್ಯಾಟೊ ಬೆಲೆ ಸುಧಾರಿಸುವ ನಿರೀಕ್ಷೆ ಇದ್ದು, ಹಿಮಾಚಲ ಪ್ರದೇಶ, ಕರ್ನಾಟಕ ಮಾತ್ರವಲ್ಲದೆ ಆಂಧ್ರಪ್ರದೇಶ, ಮಹಾರಾಷ್ಟ್ರ, ಉತ್ತರ ಪ್ರದೇಶ, ಒಡಿಶಾ, ಮಧ್ಯ ಪ್ರದೇಶ, ಬಿಹಾರ ಮತ್ತು ಅಸ್ಸಾಂ ರಾಜ್ಯಗಳಲ್ಲೂ ಟೊಮ್ಯಾಟೊ ಬೆಳೆಯಲಾಗುತ್ತಿದೆ. ಆದರೆ. ಹಿಮಾಚಲ ಪ್ರದೇಶದಲ್ಲಿ ವರ್ಷಧಾರೆಗೆ ಅಪಾರ ಪ್ರಮಾಣದಲ್ಲಿ ಬೆಳೆಗಳು ನಾಶವಾಗಿದ್ದು, ಟೊಮ್ಯಾಟೊ ದರ ಗಗನಕ್ಕೇರಲು ಪ್ರಮುಖ ಕಾರಣವಾಗಿದೆ.
ಬೆಲೆ ಕುಸಿತದಿಂದ ಕಳೆದ ವರ್ಷ ಕರ್ನಾಟಕದಲ್ಲಿ ಟೊಮ್ಯಾಟೊ ಬೆಳೆಗಾರರು ತೀವ್ರ ಸಂಕಷ್ಟ ಅನುಭವಿಸಿದ್ದರು, ಹೀಗಾಗಿ ಈ ವರ್ಷ ರೈತರು ಹೆಚ್ಚು ಟೊಮ್ಯಾಟೊ ಬಿತ್ತನೆ ಮಾಡಿರಲಿಲ್ಲ. ಈ ಬೆಳೆಗೆ ವೈರಸ್ ರೋಗ ಅಂಟಿಕೊಂಡು ಇಳುವರಿಯೂ ಕಡಿಮೆಯಾಗಿದೆ. ಈಗ ಉತ್ತರ ಭಾರತದಲ್ಲಿ ಭಾರಿ ಮಳೆಯಾಗುತ್ತಿದ್ದು, ಈ ರಾಜ್ಯಗಳಿಗೆ ಬೆಂಗಳೂರಿನಿಂದಲೇ ಸರಬರಾಜಾಗಬೇಕಾಗಿದೆ.