ಟೊಮ್ಯಾಟೊಗೆ ಉತ್ತಮ ಬೆಲೆ-ರೈತರಿಗೆ ಸಂತಸ

ಮುಳಬಾಗಿಲು.ನ೬:ಸತತ ಮಳೆಯಿಂದ ಬೆಳೆ ನಷ್ಟಕ್ಕೆ ಒಳಗಾಗಿದ್ದ ಟೊಮ್ಯಾಟೊಗೆ ಈಗ ಮತ್ತೆ ಶುಕ್ರದೆಸೆ ಒದಗಿಬಂದಿದೆ. ೧೫ ಕೆ.ಜಿ ಬ್ಯಾಕ್ಸ್ ಒಂದಕ್ಕೆ ೨೦೦ ರಿಂದ ೩೦೦ ರೂ ವರೆಗೂ ಮಾರಾಟವಾಗುತ್ತಿದ್ದು ಇಳುವರಿಯೂ ಚೆನ್ನಾಗಿ ಬರುತ್ತಿದ್ದು ರೈತರು ಹಾಕಿದ ಬಂಡವಾಳಕ್ಕೆ ನಷ್ಟವಿಲ್ಲದಂತಾಗಿದೆ.
ಈ ಹಿಂದೆ ೨೦ಸಾವಿರ ಬರುತ್ತಿದ್ದ ಎನ್.ವಡ್ಡಹಳ್ಳಿ ಮಾರುಕಟ್ಟೆಗೆ ೬೦ಸಾವಿರ ಬಾಕ್ಸ್ ಬರುತ್ತಿದ್ದು ದೇಶದ ವಿವಿದೆಡೆಗೆ ಎನ್.ವಡ್ಡಹಳ್ಳಿ ಎ.ಪಿ.ಎಂ.ಸಿ. ಟಮ್ಯಾಟೊ ಮಾರುಕಟ್ಟೆಯಿಂದ ಪ್ರತಿನಿತ್ಯ ೪೦ ಅಧಿಕ ಭಾರದ ಲಾರಿಗಳಲ್ಲಿ ಸಾಗಾಣಿಕೆಯಾಗುತ್ತಿದೆ. ಇದರಿಂದ ಬೆಳೆ ಬೆಳೆದ ರೈತರಿಗೂ ಕೈ ತುಂಬಾ ಕಾಸು ಸೇರುತ್ತಿದ್ದು ಮಾರುಕಟ್ಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಂಡಿ ಮಾಲೀಕರೂ ಸಂತೃಪ್ತರಾಗಿದ್ದು ಮಂಡಿ ಕಾರ್ಮಿಕರಿಗೂ ಹೆಚ್ಚುವರಿ ಕೂಲಿ ಲಭಿಸುವುದರ ಮೂಲಕ ಸಾವಿರಾರು ಜನಕ್ಕೆ ಪರೋಕ್ಷ ಉದ್ಯೋಗಕ್ಕೆ ದಾರಿದೀಪವಾಗಿದೆ.
ದೂರದ ದೆಹಲಿ, ಉತ್ತರ ಪ್ರದೇಶ, ರಾಜಸ್ಥಾನ, ಉತ್ತರಖಂಡ ಸೇರಿದಂತೆ ಉತ್ತರಭಾರತದ ಕಡೆಗೂ ಎನ್.ವಡ್ಡಹಳ್ಳಿ ಮಾರುಕಟ್ಟೆಯಿಂದ ನಾಟಿ ಹೈಬ್ರೀಡ್ ಟಮ್ಯಾಟೊ ಪೂರೈಕೆಯಾಗುತ್ತಿದ್ದು ಬೇಡಿಕೆಯೂ ಹೆಚ್ಚಾಗಿ ಬರುತ್ತಿದೆ. ಇದುವರೆಗೂ ದಕ್ಷಿಣ ಭಾರತದ ತಮಿಳುನಾಡು, ಆಂಧ್ರಪ್ರದೇಶ, ಒರಿಸ್ಸಾ, ಕೇರಳ, ಗೋವ, ಪಾಂಡಿಚೆರಿ, ಮಹಾರಾಷ್ಟ್ರ ಕಡೆಗೆ ಮಾತ್ರ ಪೂರೈಕೆಯಾಗುತ್ತಿದ್ದ ನಾಟಿಹೈಬ್ರೀಡ್ ಟಮ್ಯಾಟೊ ಈಗ ಉತ್ತರ ಭಾರತದಲ್ಲೂ ಟ್ರೆಂಡ್ ಶುರುವಾಗಿದೆ.
ದೇಶದ ಬೆನ್ನೆಲುಬಾದ ರೈತರ ಬೆಳೆಗೆ ಉತ್ಕೃಷ್ಟ ಫಸಲಿಗೆ ಉತ್ತಮ ಬೆಲೆ ಸಿಕ್ಕರೆ ಗ್ರಾಮೀಣ ಅಭಿವೃದ್ಧಿ ಜೊತೆಗೆ ಆರ್ಥಿಕ ಚೇತರಿಕೆ, ನಿರುದ್ಯೋಗ ಸಮಸ್ಯೆ ನಿವಾರಣೆಯಾಗಿ ದೇಶ ಅಭಿವೃದ್ಧಿ ಪಥದತ್ತ ಸಾಗಲು ಅಸಂಘಟಿತ ಕೃಷಿ ಕ್ಷೇತ್ರ ಕೊಡುಗೆ ಬಹುಪಾಲು ಸಿಗುವುದಂತೂ ಖಚಿತ.
ಎನ್.ವಡ್ಡಹಳ್ಳಿಯಿಂದ ದೆಹಲಿ ಸೇರಿದಂತೆ ಉತ್ತರಭಾರತದ ಕಡೆ ಲಾರಿಗಳಲ್ಲಿ ೪ ದಿನ ಸಾಗಾಣಿಕೆಯಾಗಬೇಕಾಗಿದ್ದು ರೈಲಿನಲ್ಲಿ ಹೋದರೆ ಮೂರು ದಿನ ಆಗುತ್ತದೆ, ಆದರೆ ರೈಲು ನಿಲ್ದಾಣದಿಂದ ಮಾರುಕಟ್ಟೆಗೆ ಮತ್ತೆ ಲಾರಿಯಲ್ಲಿ ಸಾಗಿಸಲು ಖರ್ಚು ವೆಚ್ಚಗಳು ಹೆಚ್ಚಾಗಿರುವುದರಿಂದ ರಸ್ತೆ ಮಾರ್ಗವಾಗಿಯೇ ವಡ್ಡಹಳ್ಳಿಯಿಂದ ಉತ್ತರ ಭಾರತದ ಕಡೆಗೆ ಟಮ್ಯಾಟೋ ಸಾಗಾಣಿಕೆಯಾಗುತ್ತಿದೆ. ರೈಲ್ವೇ ಮಾರ್ಗ ಇಲ್ಲದೆ ಕೃಷಿ ಉತ್ಪನ್ನಗಳ ದೂರದ ಪ್ರದೇಶಗಳಿಗೆ ಸಾಗಿಸಲು ಸಮಸ್ಯೆಯಾಗುತ್ತಿರುವುದು ಕೃಷಿ ಕ್ಷೇತ್ರಕ್ಕೆ ಹಿನ್ನಡೆಯಾಗಿದೆ.