ಟೊಮೇಟೊ ಚಟ್ನಿ

ಟೊಮ್ಯಾಟೊ ಚಟ್ನಿ ಒಂದು ರುಚಿಕರವಾದ ಪಾಕ ವಿಧಾನ. ಇದನ್ನು ಚಪಾತಿ, ಅನ್ನ, ಪೂರಿ, ಇಡ್ಲಿ ಹಾಗೂ ದೋಸೆಯೊಂದಿಗೆ ಸೇವಿಸಬಹುದು. ದಕ್ಷಿಣ ಭಾರತೀಯರು ದಿನ ನಿತ್ಯ ತಯಾರಿಸುವ ಪಾಕವಿಧಾನಗಳಲ್ಲಿ ಟೊಮ್ಯಾಟೊ ಚಟ್ನಿ ಸಹ ಒಂದು. ಟೊಮ್ಯಾಟೊ ಹಾಗೂ ಆರೋಗ್ಯಕರ ಮಸಾಲ ಪದಾರ್ಥಗಳ ಮಿಶ್ರಣದೊಂದಿಗೆ ತಯಾರಾಗುವ ಈ ಪಾಕವಿಧಾನ ನಾಲಿಗೆಗೆ ಹೆಚ್ಚು ರುಚಿಯನ್ನು ನೀಡುವುದು. ಈ ಪಾಕವಿಧಾನವನ್ನು ಸುಲಭವಾಗಿ ಸಂಗ್ರಹಿಸಿ ಇಡಬಹುದು. ತಂಪಾದ ಮತ್ತು ಶುಷ್ಕ ಸ್ಥಳಗಳಲ್ಲಿ ಒಂದು ವಾರಗಳ ಕಾಲ ಶೇಖರಿಸಿ ಇಟ್ಟುಕೊಳ್ಳಬಹುದು.
ಬೇಕಾಗುವ ಸಾಮಗ್ರಿಗಳು
೧ – ಕ್ಯೂಬ್ಸ್ ರೀತಿ ಕತ್ತರಿಸಿದ ಈರುಳ್ಳಿ
೪ – ಕತ್ತರಿಸಿದ ಟೊಮೆಟೋ
೫ – ಹಸಿಮೆಣಸಿನಕಾಯಿ
ಒಗ್ಗರಣೆಗೆ
ಅಗತ್ಯಕ್ಕೆ ತಕ್ಕಷ್ಟು ಸಂಸ್ಕರಿಸಿದ ಎಣ್ಣೆ
೧ ಚಮಚ ಸಾಸಿವೆ
ಅಗತ್ಯಕ್ಕೆ ತಕ್ಕಷ್ಟು ಇಂಗು
ಅಗತ್ಯಕ್ಕೆ ತಕ್ಕಷ್ಟು ಕರಿಬೇವು
೧ ಮುಷ್ಟಿಯಷ್ಟು ಕತ್ತರಿಸಿದ ಕೊತ್ತಂಬರಿ ಸೊಪ್ಪು
ಅಗತ್ಯಕ್ಕೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ:
ಒಂದು ದಪ್ಪ ತಳದ ಪಾತ್ರೆಯನ್ನು ತೆಗೆದುಕೊಳ್ಳಿ. ಅದನ್ನು ಉರಿಯ ಮೇಲೆ ಇಟ್ಟು, ೪ ಟೀ ಚಮಚ ಎಣ್ಣೆಯನ್ನು ಸೇರಿಸಿ.ಎಣ್ಣೆ ಬಿಸಿಯಾದ ಬಳಿಕ ಹೆಚ್ಚಿಕೊಂಡ ಈರುಳ್ಳಿ, ಹಸಿಮೆಣಸಿನ ಕಾಯಿ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ ಒಂದು ನಿಮಿಷ ಬೇಯಿಸಿ.ಈಗ ಹೆಚ್ಚಿಕೊಂಡ ಟೊಮ್ಯಾಟೊ ಸೇರಿಸಿ ೫ ನಿಮಿಷಗಳ ಕಾಲ ಬೇಯಿಸಿ. ಟೊಮ್ಯಾಟೊ ಮೆತ್ತಗೆ ಬೇಯುವ ತನಕ ಕಾಯಬೇಕು. ನಂತರ ಉರಿಯಿಂದ ಕೆಳಗಿಳಿಸಿ ಸ್ವಲ್ಪ ಸಮಯ ತಣ್ಣಗಾಗಲು ಬಿಡಿ.
ತಣ್ಣಗಾಗುವ ತನಕ ಹಾಗೆಯೇ ಬಿಡಿ. ನಂತರ ಟೊಮ್ಯಾಟೊ ಮಿಶ್ರಣವನ್ನು ನೀರನ್ನು ಸೇರಿಸದೆ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ.
ಬಾಣಲೆಗೆ ಒಂದು ಟೀ ಚಮಚ ಎಣ್ಣೆಯನ್ನು ಸೇರಿಸಿ, ಬಿಸಿ ಮಾಡಿ.ಬಿಸಿಯಾದ ಎಣ್ಣೆಗೆ ಸಾಸಿವೆ, ಚಿಟಿಕೆ ಇಂಗು ಮತ್ತು ಕರಿಬೇವಿನ ಎಲೆಯನ್ನು ಸೇರಿಸಿ, ಹುರಿಯಿರಿ.ನಂತರ ಟೊಮ್ಯಾಟೊ ಮಿಶ್ರಣ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ. ಮಿಶ್ರಣವನ್ನು ೨-೩ ನಿಮಿಷಗಳ ಕಾಲ ಬೇಯಿಸಿ. ಬಳಿಕ ಉರಿಯಿಂದ ಕೆಳಗಿಳಿಸಿ. ರುಚಿಕರವಾದ ಟೊಮ್ಯಾಟೊ ಚಟ್ನಿಯನ್ನು ಬಿಸಿ ಬಿಸಿ ಅನ್ನ, ಚಪಾತಿ ಹಾಗೂ ದೋಸೆಯೊಂದಿಗೆ ಸವಿಯಬಹುದು.