ಸಂಜೆವಾಣಿ ಪ್ರತಿನಿಧಿಯಿಂದ
ಧಾರವಾಡ,ಜು.೧೬:ಟೊಮೆಟೋಗೆ ಚಿನ್ನದ ಬೆಲೆ ಬಂದಿದ್ದು, ಬೆಳೆಗಾರರಿಗೆ ಬಂಪರ್ ಆದಾಯ ಬರುತ್ತಿದೆ. ಒಂದೆಡೆ ದಿನದಿಂದ ದಿನಕ್ಕೆ ಟೊಮೆಟೋ ಧಾರಣೆ ಗಗನಕ್ಕೇರುತ್ತಿದ್ದು, ಇದರ ಲಾಭವನ್ನು ಬೆಳೆಗಾರರು ಪಡೆಯುತ್ತಿದ್ದಾರೆ. ಧಾರವಾಡದ ಗೋವನಕೊಪ್ಪ ಗ್ರಾಮದ ರೈತ ಈರಪ್ಪ ಸಿದ್ದಪ್ಪ ಚಿಕ್ಕಣ್ಣವರ್ ಟೊಮೆಟೋ ಮಾರಾಟದಿಂದ ೩ ಲಕ್ಷ ಆದಾಯ ಗಳಿಸಿದ್ದಾರೆ.
ಈ ಬಾರಿ ರಾಜ್ಯದಲ್ಲಿ ಮುಂಗಾರು ಮಾರುತ ಕ್ಷೀಣಿಸಿದ್ದರೂ ರೈತರು ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಈರಪ್ಪ
ತಮ್ಮ ಒಂದು ಎಕರೆ ಜಮೀನಿನಲ್ಲಿ ಟೊಮೆಟೋ ಬೆಳೆದು ಹಣ ಗಳಿಸುವಲ್ಲಿ ಸಫಲರಾಗಿದ್ದಾರೆ.
ತಮ್ಮ ಜಮೀನಿನಲ್ಲಿ ಬೋರ್‌ವೆಲ್ ಕೂಡ ಇಲ್ಲ, ಆದರೆ, ಹಳ್ಳದ ನೀರನ್ನೇ ಸಸಿಗಳಿಗೆ ಹಾಯಿಸಿದ್ದರಿಂದ ಉತ್ತಮ ಫಸಲು ಬಂದಿದೆ. ಹೀಗಾಗಿ, ಇದುವರೆಗೆ ೩ ಲಕ್ಷ ರೂ. ಆದಾಯ ಗಳಿಸಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ ಕೆಲ ರೈತರು ಮಾತ್ರ ಟೊಮೆಟೋ ಬೆಳೆಯುತ್ತಿದ್ದಾರೆ. ಆದರೆ, ಟೊಮೆಟೋಗೆ ರೋಗ ತಗುಲಿದ್ದರಿಂದ ಬಹುತೇಕ ರೈತರು ಟೊಮೆಟೋ ಬಿತ್ತನೆ ಮಾಡಿಲ್ಲ, ಹೀಗಾಗಿ, ಟೊಮೆಟೋ ಧಾರಣೆ ದುಬಾರಿಯಾಗಿದೆ.
ಒಂದು ಬಾಕ್ಸ್ ಟೊಮೆಟೋಗೆ ೧,೮೦೦ ರಿಂದ ೨ ಸಾವಿರ ರೂ.ಗೆ ಮಾರಾಟವಾಗುತ್ತಿದೆ. ಈರಪ್ಪ ೧೦ ರಿಂದ ೧೫ ಬಾರಿ ಟೊಮೆಟೋ ಕಟಾವು ಮಾಡಿ ಹುಬ್ಬಳ್ಳಿ_ಧಾರವಾಡ ಮಾರುಕಟ್ಟೆಗೆ ರವಾನಿಸಿದ್ದಾರೆ.
ಮಳೆ ಕೊರತೆಯಿಂದಾಗಿ ಹಳ್ಳದ ನೀರನ್ನೇ ಹಾಯಿಸಿ ಟೊಮೆಟೋ ಬೆಳೆದಿದ್ದೇನೆ. ಇದರಿಂದ ೩ ಲಕ್ಷ ರೂ. ಆದಾಯ ಬಂದಿದೆ ಎಂದು ಈರಪ್ಪ ವಿವರಿಸಿದರು.