ಟೈಲರ್ ಕ್ಷೇಮನಿಧಿ ಮಂಡಳಿ ರಚಿಸಲು ಒತ್ತಾಯಿಸಿ ಪ್ರತಿಭಟನೆ

ರಾಯಚೂರು,ಜು.೨೬- ಟೈಲರ್ ಕ್ಷೇಮ ನಿಧಿ ಮಂಡಳಿ ರಚಿಸಿ ಭವಿಷ್ಯ ನಿಧಿ,ಮಾಸಿಕ ಪಿಂಚಣಿ ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ನಗರದ ತೀನ್ ಖಂದಿಲ್ ವೃತ್ತದಿಂದ ಭಗತ್ ಸಿಂಗ್ ವೃತ್ತ,ಸೇರಿದಂತೆ ವಿವಿಧ ರಸ್ತೆಗಳ ಮೂಲಕ ಟಿಪ್ಪು ಸುಲ್ತಾನ್ ಉದ್ಯಾನವನವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದರು.
ಹಣ ಸಂದಾಯ ಮಾಡಿದ ೬೦ ವರ್ಷ ತುಂಬಿದ ಎಲ್ಲಾ ಎನ್‌ಪಿಎಸ್ ಲೈಟ್ ಫಲಾನುಭವಿಗಳ ನಿವೃತ್ತಿ ವೇತನ ಘೋಷಣೆ ಮಾಡಬೇಕು ಹಾಗೂ ಮಾಸಿಕ ೩ ಸಾವಿರ ವರೆಗೆ ನಿವೃತ್ತಿ ವೇತನ ನೀಡಬೇಕು. ಹೊಲಿಗೆ ಕೆಲಸಗಾರರ ಹೆಣ್ಣುಮಕ್ಕಳಿಗೆ ವಿವಾಹ ಧನ ಮತ್ತು ಹೆರಿಗೆ ಭತ್ಯೆ ನೀಡಬೇಕು.ಹೊಲಿಗೆ ಕೆಲಸಗಾರರ ಸ್ವಂತ ವಾಸಕ್ಕಾಗಿ ಮನೆ ಕೊಂಡುಕೊಳ್ಳಲು,ಮನೆ ಕಟ್ಟಲು ಅಥವಾ ಪುನರ್ ನಿರ್ಮಾಣ ಮಾಡಲು ಧನಸಹಾಯ ಮತ್ತು ಕಡಿಮೆ ಬಡ್ಡಿಯ ಸಾಲ ನೀಡಬೇಕು.ಹೊಲಿಗೆ ಕೆಲಸಗಾರರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿ ವೇತನವನ್ನು ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ನಗರ ಅಧ್ಯಕ್ಷ ಜಿ.ಎಂ. ಸಲೀಮ್ ಪಾಶಾ,ಮಹ್ಮದ್ ಇಲಿಯಾಸ್,ಮಹ್ಮದ್ ಫಿರೋದ್ ಹೇಮರಾಜ್,ಮಹ್ಮದ್ ಮಸ್ತಾನ್,ಮಹೇಶ್ ಕುಮಾರ,ಮಹ್ಮದ್ ಸಾದೀಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.