ಟೈರ್ ಸ್ಫೋಟಗೊಂಡು ಅಂಬುಲೆನ್ಸ್‍ಗೆ ಬೆಂಕಿ

ಕಲಬುರಗಿ.ಮೇ.15:ಟೈರ್ ಸ್ಫೋಟಗೊಂಡು ಅಂಬುಲೆನ್ಸ್‍ಗೆ ಬೆಂಕಿ ಹೊತ್ತಿ ಸುಟ್ಟು ಕರಕಲಾದ ಘಟನೆ ಜಿಲ್ಲೆಯ ಶಹಾಬಾದ್ ಪಟ್ಟಣದ ಹೊರವಲಯದ ಶಂಕರವಾಡಿ ಗ್ರಾಮದ ಬಳಿಯ ರಘೋಜಿ ಕಾರ್ಖಾನೆ ಎದುರಿನ ಕಾಗಿಣಾ ನದಿ ಬಳಿ ಶನಿವಾರ ಮಧ್ಯಾಹ್ನ ವರದಿಯಾಗಿದೆ.
ಚಿತ್ತಾಪುರ ತಾಲ್ಲೂಕಿಗೆ ಸೇರಿರುವ ಅಂಬುಲೆನ್ಸ್‍ಗೆ ಬೆಂಕಿ ಹತ್ತಿದೆ. 10 ಆಮ್ಲಜನಕ ಸಿಲೆಂಡರ್‍ಗಳನ್ನು ಭರ್ತಿ ಮಾಡಿಕೊಳ್ಳಲು ಚಿತ್ತಾಪುರದಿಂದ ನಗರಕ್ಕೆ ಬರುತ್ತಿದ್ದ ಸಂದರ್ಭದಲ್ಲಿ ಮಾರ್ಗ ಮಧ್ಯೆ ಟೈರ್ ಸ್ಫೋಟಗೊಂಡು ಯಂತ್ರದಲ್ಲಿ ಹಠಾತ್ತನೇ ಬೆಂಕಿ ಕಾಣಿಸಿಕೊಂಡು, ಆ ಬೆಂಕಿ ಇಡೀ ವಾಹನಕ್ಕೆ ವ್ಯಾಪಿಸುವ ಮೂಲಕ ಇಡೀ ವಾಹನ ಬೆಂಕಿಗೆ ಆಹುತಿಯಾಯಿತು.
ಅಗ್ನಿ ಅವಘಡ ಸಂಭವಿಸುತ್ತಿದ್ದಂತೆಯೇ ಕ್ಷಣಾರ್ಧದಲ್ಲಿ ಅಂಬುಲೆನ್ಸ್‍ನಲ್ಲಿದ್ದ ಚಾಲಕ, ಪೌರ ಕಾಮಿಕರು ಸೇರಿದಂತೆ ನಾಲ್ವರು ಸಿಬ್ಬಂದಿಗಳು ಪ್ರಾಣಾಪಾಯದಿಂದ ಪಾರಾದರು. ಸ್ಥಳಕ್ಕೆ ಅಗ್ನಿಶಾಮಕ ದಳದವರು ಧಾವಿಸಿ ಬೆಂಕಿಯನ್ನು ಶಮನಗೊಳಿಸಿದರು. ಸ್ಥಳಕ್ಕೆ ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ. ಬಸವಲಿಂಗ್ ಡಿಗ್ಗಿ ಅವರು ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ಶಹಾಬಾದ್ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.