ಟೈರ್ ಸಿಡಿದು ಉರುಳಿ ಬಿದ್ದ ವಾಹನ: ಅಪಾರ ಪ್ರಮಾಣದ ಮದ್ಯ ರಸ್ತೆ ಪಾಲು

ಕಲಬುರಗಿ,ಜ.9: ಟೈರ್ ಸಿಡಿದು ಮದ್ಯ ಸರಬರಾಜು ಮಾಡುತ್ತಿದ್ದ ವಾಹನವು ಉರುಳಿಬಿದ್ದ ಘಟನೆ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಕಟ್ಟಿಸಂಗಾವಿ ಸೇತುವೆ ಬಳಿಯ ಹಸನಾಪುರ ಗ್ರಾಮದ ಬಳಿ ವರದಿಯಾಗಿದೆ.
ನಗರದ ಗೋದಾಮಿನಿಂದ ಜೇವರ್ಗಿ ಪಟ್ಟಣದ ವೈನ್ ಶಾಪ್‍ಗಳಿಗೆ ಮದ್ಯವನ್ನು ಸರಬರಾಜು ಮಾಡಲು ಹೋಗುತ್ತಿದ್ದ ವಾಹನದ ಟೈರ್ ಸಿಡಿದು ಸ್ಫೋಟಗೊಂಡಿದೆ. ಆ ವೇಳೆ ಚಾಲಕನ ನಿಯಂತ್ರಣ ತಪ್ಪಿ ವಾಹನ ಉರುಳಿಬಿದ್ದಿತು. ಪರಿಣಾಮವಾಗಿ ಅಪಾರ ಪ್ರಮಾಣದಲ್ಲಿನ ಮದ್ಯದ ಬಾಟಲಿಗಳು ನಾಶವಾಗಿವೆ.
ಇನ್ನು ಘಟನೆ ವೇಳೆ ಯಾವುದೇ ಪ್ರಾಣಹಾನಿ ಆಗಿಲ್ಲ. ಚಾಲಕನಿಗೆ ಹಾಗೂ ಕ್ಲೀನರ್ ಸೇರಿ ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ವಾಹನ ರಸ್ತೆಯಲ್ಲಿಯೇ ಉರುಳಿಬಿದ್ದ ಪರಿಣಾಮ ಅಳಿದುಳಿದ ಮದ್ಯದ ಬಾಟಲಿಗಳನ್ನು ಹಾಗೂ ಬಾಕ್ಸ್‍ಗಳನ್ನು ಸಿಬ್ಬಂದಿಗಳು ರಕ್ಷಿಸಿದರು. ಆ ಸಂದರ್ಭದಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಕೆಲ ಸಮಯದವರೆಗೆ ಅಡೆತಡೆಯಾಯಿತು. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ನಗರ ಸಂಚಾರಿ ಠಾಣೆ 1ರ ಪೋಲಿಸರು ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.