ಟೈಟಾನಿಕ್ ಹಡಗಿನ ವೀಕ್ಷಣೆಗೆ ತೆರಳಿದ್ದ ಜಲಾಂತರ್ಗಾಮಿ ನಾಪತ್ತೆ

ನ್ಯೂಯಾರ್ಕ್, ಜೂ.೨೦- ಅಟ್ಲಾಂಟಿಕ್ ಸಾಗರದಲ್ಲಿ ಮುಳುಗಿರುವ ಟೈಟಾನಿಕ್ ಹಡಗಿನ ಅವಶೇಷಗಳನ್ನು ವೀಕ್ಷಿಸಲು ಪ್ರವಾಸಿಗರು ತೆರಳಿದ್ದ ಜಲಾಂತರ್ಗಾಮಿ ನಾಪತ್ತೆ ಯಾಗಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ. ಸದ್ಯ ನಾಪತ್ತೆಯಾಗಿರುವ ಜಲಾಂತರ್ಗಾಮಿಗಾಗಿ ಶೋಧಕಾರ್ಯ ತೀವ್ರಗೊಂಡಿದೆ.
೧೯೧೨ರ ಎಪ್ರಿಲ್ ೧೨ರಂದು ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ಟೈಟಾನಿಕ್ ಹಡುಗೆ ಮುಳುಗಡೆಯಾಗಿ ೧೫೦೦ಕ್ಕೂ ಹೆಚ್ಚಿನ ಪ್ರಯಾಣಿಕರು ಮೃತಪಟ್ಟಿದ್ದರು. ಅಲ್ಲದೆ ಇದಕ್ಕೆ ಸಂಬಂಧಪಟ್ಟಂತೆ ೧೯೯೭ರಲ್ಲಿ ಮೂಡಿಬಂದ ಅದೇ ಹೆಸರಿನ ಚಿತ್ರ ಗಲ್ಲಾಪೆಟ್ಟಿಯಲ್ಲಿ ಭಾರೀ ಸದ್ದುಮಾಡಿತ್ತು. ಸದ್ಯ ೧೯೧೨ರಲ್ಲಿ ಮುಳುಗಿದ ಹಡಗಿನ ವೀಕ್ಷಣೆಗೆ ತೆರಳಿದ್ದ ಪ್ರವಾಸಿಗರ ಜಲಾಂತರ್ಗಾಮಿ ಒಂದು ಭಾನುವಾರ ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಮಧ್ಯ ಅಟ್ಲಾಂಟಿಕ್‌ನಲ್ಲಿ ಭಾರಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಸಮುದ್ರದ ಆಳಕ್ಕೆ ಇಳಿದ ಜಲಾಂತರ್ಗಾಮಿ ಸುಮಾರು ೧:೪೫ ಗಂಟೆಗಳ ಕಾಲ ಸಂಪರ್ಕದಲ್ಲಿತ್ತು. ಬಳಿಕ ಸಂಪರ್ಕ ಕಡಿತಗೊಂಡಿದೆ ಎಂದು ಅಮೆರಿಕ ನೌಕಾಪಡೆ ಹೇಳಿದೆ. ಸದ್ಯ ಜಲಾಂತರ್ಗಾಮಿನಲ್ಲಿರುವ ಎಲ್ಲಾ ಐವರು ಪ್ರವಾಸಿಗರ ರಕ್ಷಣಗೆ ಸಕಲ ಕಾರ್ಯ ನಡೆಸಲಾಗುತ್ತಿದೆ ಎಂದು ಪ್ರವಾಸಿ ಸಂಸ್ಥೆ ಓಷನ್‌ಗೇಟ್ ತನ್ನ ಪ್ರಕಟನೆಯಲ್ಲಿ ತಿಳಿಸಿದೆ. ಸದ್ಯ ಸರ್ಕಾರಿ ಏಜೆನ್ಸಿಗಳು, ಯುಎಸ್ ಮತ್ತು ಕೆನಡಾದ ನೌಕಾಪಡೆಗಳು ಮತ್ತು ವಾಣಿಜ್ಯ ಆಳ ಸಮುದ್ರ ಸಂಸ್ಥೆಗಳು ರಕ್ಷಣಾ ಕಾರ್ಯಾಚರಣೆಗೆ ಸಹಾಯ ಮಾಡುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಟೈಟಾನಿಕ್ ಹಡಗಿನ ಅವಶೇಷವು ನ್ಯೂಫೌಂಡ್‌ಲ್ಯಾಂಡ್‌ನ ಸೇಂಟ್ ಜಾನ್ಸ್‌ನ ದಕ್ಷಿಣಕ್ಕೆ ಸುಮಾರು ೪೩೫ ಮೈಲಿಗಳು (೭೦೦ ಕಿಮೀ) ಇದೆಯಾದರೂ ಸದ್ಯ ರಕ್ಷಣಾ ಕಾರ್ಯಾಚರಣೆಯನ್ನು ಮ್ಯಾಸಚೂಸೆಟ್ಸ್‌ನ ಬೋಸ್ಟನ್‌ನಿಂದ ನಡೆಸಲಾಗುತ್ತಿದೆ. ನಾಪತ್ತೆಯಾಗಿರುವ ಸಬ್‌ಮೆರಿನ್ ಓಷನ್‌ಗೇಟ್‌ನ ಸಬ್‌ಮೆರ್ಸಿಬಲ್ ಆಗಿದ್ದು, ಸುಮಾರು ಐವರನ್ನು ಸಾಗಿಸುವ ಸಾಮರ್ಥ್ಯ ಹೊಂದಿದ್ದು, ಅಲ್ಲದೆ ನಾಲ್ಕು ದಿನಗಳ ಅವಧಿಗೆ ತುರ್ತು ಆಮ್ಲಜನಕ ಪೂರೈಕೆ ಸಾಮರ್ಥ್ಯ ಹೊಂದಿದೆ ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿರುವ ಯುಎಸ್ ಕೋಸ್ಟ್ ಗಾರ್ಡ್‌ನ ರಿಯರ್ ಅಡ್ಮಿರಲ್ ಜಾನ್ ಮೌಗರ್, ಹಡಗಿನ ಹುಡುಕಾಟದಲ್ಲಿ ಎರಡು ವಿಮಾನಗಳು, ಜಲಾಂತರ್ಗಾಮಿ ಮತ್ತು ಸೋನಾರ್ ಬೋಯ್‌ಗಳು ತೊಡಗಿಸಿಕೊಂಡಿವೆ. ಜಲಾಂತರ್ಗಾಮಿ ಕಣ್ಮರೆಯಾಗಿರುವ ಪ್ರದೇಶವು ಸಾಮಾನ್ಯ ಪ್ರದೇಶಕ್ಕಿಂತ ಹೆಚ್ಚಿನ ದೂರದಲ್ಲಿದ್ದು, ಕಾರ್ಯಾಚರಣೆಗೆ ತೊಡಕುಂಟು ಮಾಡಿದೆ ಎಂದು ತಿಳಿಸಿದ್ದಾರೆ. ಸಮುದ್ರದ ಮೇಲ್ಮೈಯಿಂದ ೩,೮೦೦ ಮೀ. ಆಳದಲ್ಲಿ ಮುಳುಗಿರುವ ಟೈಟಾನಿಕ್‌ನ ಅವಶೇಷಗಳನ್ನು ವೀಕ್ಷಿಸಲು ಪ್ರವಾಸಿಗರನ್ನು ಸಣ್ಣ ಜಲಾಂತರ್ಗಾಮಿಗಳು ಕರೆದೊಯ್ಯುತ್ತವೆ.

ದುಬಾರಿ ಟಿಕೆಟ್
೧೯೧೨ರಲ್ಲಿ ಮುಳುಗಡೆಯಾದ ಟೈಟಾನಿಕ್ ಹಡಗಿನ ಅವಶೇಷಗಳನ್ನು ವೀಕ್ಷಿಸಲು ತೆರಳುವವರ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಇದಕ್ಕೆ ಸಂಬಂಧಪಟ್ಟ ಟ್ರಾವೆಲ್ ಸಂಸ್ಥೆಗಳು ಕೂಡ ಹುಟ್ಟಿಕೊಂಡಿದೆ. ಇದೇ ರೀತಿ ಓಷನ್‌ಗೇಟ್ ಸಂಸ್ಥೆ ಕೂಡ ಪ್ರವಾಸಿಗರನ್ನು ಇಲ್ಲಿಗೆ ಕರೆತರುವ ಕಾರ್ಯ ನಡೆಸುತ್ತದೆ. ಮುಖ್ಯವಾಗಿ ೩,೮೦೦ ಮೀಟರ್ ಆಳದಲ್ಲಿನ ರೆಕ್‌ಗೆ ಧುಮುಕುವುದು ಸೇರಿದಂತೆ ಎಂಟು ದಿನಗಳ ಪ್ರವಾಸಕ್ಕಾಗಿ ಒಬ್ಬರಿಗೆ ಸಂಸ್ಥೆಯು ಬರೋಬ್ಬರಿ ೨.೫೦ ಲಕ್ಷ ಡಾಲರ್ ಮೊತ್ತವನ್ನು ನಿಗದಿಪಡಿಸಲಾಗಿದೆ.