ಟೈಟಲ್ ವಿವಾದ ರಮ್ಯಾ ತೀರ್ಪು

ಬೆಂಗಳೂರು, ಏ ೬- ಕೆಲ ವರ್ಷಗಳಿಂದ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡಿದ್ದ ನಟಿ ರಮ್ಯಾ ಅವರು ನಿರ್ಮಾಪಕಿಯಾಗಿ ಮತ್ತೆ ಚಂದನವನದಲ್ಲಿ ಎರಡನೇ ಇನಿಂಗ್ಸ್ ಆರಂಭಿಸಿದ್ದಾರೆ.

ರಮ್ಯಾ ಅವರ ಮೊದಲ ನಿರ್ಮಾಣ ಮತ್ತು ರಾಜ್ ಬಿ ಶೆಟ್ಟಿ ನಿರ್ದೇಶಿಸಿ ನಟಿಸಿದ್ದ ಸ್ವಾತಿ ಮುತ್ತಿನ ಮಳೆ ಹನಿಯೆ ಸಿನಿಮಾ ಟೈಟಲ್ ವಿವಾದಕ್ಕೆ ಕಾರಣವಾಗಿ ಕೋರ್ಟ್‌ಮೆಟ್ಟಿಲೇರಿತ್ತು. ಇದೀಗ, ಅಂತಿಮವಾಗಿ ರಮ್ಯಾ ಪರ ನ್ಯಾಯಾಲಯ ತೀರ್ಪು ನೀಡಿದೆ.

ಸಿಟಿ ಸಿವಿಲ್ ನ್ಯಾಯಾಲಯವು ರಮ್ಯಾ ಅವರ ಆಯಪಲ್ ಬಾಕ್ಸ್ ಸ್ಟುಡಿಯೋಸ್ ಪರವಾಗಿ ತೀರ್ಪು ನೀಡಿದ್ದು, ಚಿತ್ರಕ್ಕೆ ಅದೇ ಶೀರ್ಷಿಕೆಯನ್ನು ಬಳಸಲು ಅವಕಾಶ ಮಾಡಿಕೊಟ್ಟಿದೆ. ಇದಕ್ಕೂ ಮುನ್ನ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ರಮ್ಯಾ ಅವರು ಈ ಶೀರ್ಷಿಕೆಯನ್ನು ಬಳಸದಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು ಮತ್ತು ತಡೆಯಾಜ್ಞೆಯನ್ನು ತಂದಿದ್ದರು. ಅದನ್ನೀಗ ನ್ಯಾಯಾಲಯ ತೆಗೆದುಹಾಕಿದೆ.

ಸ್ವಾತಿ ಮುತ್ತಿನ ಮಳೆ ಹನಿ, ರೊಮ್ಯಾಂಟಿಕ್ ಎಂಟರ್ಟೈನರ್ ಎಂದು ಬಿಂಬಿಸಲಾಗಿದೆ. ರಾಜ್ ಬಿ ಶೆಟ್ಟಿ ಜೊತೆ ಸಿರಿ ರವಿಕುಮಾರ್ ನಟಿಸಿದ್ದಾರೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಚಿತ್ರ ಏಪ್ರಿಲ್ ೧೫ ರೊಳಗೆ ಸಿದ್ಧವಾಗುವ ನಿರೀಕ್ಷೆಯಿದೆ.

ರಾಜ್ ಮತ್ತು ಸಿರಿ ಅವರಲ್ಲದೆ, ಸ್ವಾತಿ ಮುತ್ತಿನ ಮಳೆ ಹನಿಯೆ ಸಿನಿಮಾದಲ್ಲಿ ಬಾಲಾಜಿ ಮನೋಹರ್, ಸೂರ್ಯ ವಸಿಷ್ಠ, ರೇಖಾ ಕೂಡ್ಲಿಗಿ, ಸ್ನೇಹಾ ಶರ್ಮಾ, ಜೆಪಿ ತುಮ್ಮಿನಾಡ್ ಮತ್ತು ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.