ಟೈಟನ್ ಸುರಕ್ಷತೆ ಎಚ್ಚರಿಕೆ ನೀಡಿದ್ದ ಸಿಬ್ಬಂದಿಯ ವಜಾ!

ನ್ಯೂಯಾರ್ಕ್, ಜೂ.೨೨- ನಿಗೂಢ ರೀತಿಯಲ್ಲಿ ನಾಪತ್ತೆಯಾಗಿರುವ ಓಷನ್‌ಗೇಟ್ ಪ್ರವಾಸಿ ಸಂಸ್ಥೆಯ ಜಲಾಂತರ್ಗಾಮಿ (ಸಬ್‌ಮೆರ್ಸಿಬಲ್) ನೌಕೆ ಟೈಟನ್‌ಗಾಗಿ ಸದ್ಯ ಶೋಧಕಾರ್ಯ ಮುಂದುವರೆದಿದೆ. ಈ ನಡುವೆ ಮೂಲಗಳ ಪ್ರಕಾರ ಓಷನ್‌ಗೇಟ್ ಸಂಸ್ಥೆ ಮಾಜಿ ನೌಕರರೊಬ್ಬರು ಟೈಟನ್ ಜಲಾಂತರ್ಗಾಮಿ ನೌಕೆಯ ಸುರಕ್ಷತೆಯ ಬಗ್ಗೆ ೨೦೧೮ರಲ್ಲೇ ಎಚ್ಚರಿಕೆ ನೀಡಿದ್ದರು ಎನ್ನುವ ಸಂಗತಿ ಇದೀಗ ಬಯಲಾಗಿದೆ.
ಪೈಲಟ್ ಮತ್ತು ನಾಲ್ವರು ಪ್ರಯಾಣಿಕರು ಜಲಾಂತರ್ಗಾಮಿ ನೌಕೆಯಲ್ಲಿದ್ದು, ಗುರುವಾರ ಬೆಳಗ್ಗೆ ವೇಳೆಗೆ ಲಭ್ಯವಿರುವ ಆಮ್ಲಜನಕ ಖಾಲಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಹಾಗಾಗಿ ನೌಕೆಯ ಒಳಗೆ ಇರುವವರು ಬದುಕುಳಿಯುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಇನ್ನು ಜನವರಿ ೧೮ರ, ೨೦೧೮ರಲ್ಲಿ ಓಷನ್‌ಗೇಟ್ ಸಂಸ್ಥೆಯ ಮಾಜಿ ಉದ್ಯೋಗಿ ಡೇವಿಡ್ ಲೊಚ್ರಿಡ್ಜ್ ಅವರು ಟೈಟನ್‌ನ ಸುರಕ್ಷತೆಯ ಬಗ್ಗೆ ಸಂಕ್ಷಿಪ್ತವಾಗಿ ವರದಿ ತಯಾರಿಸಿ, ಮೇಲ್ವಿಚಾರಕರಿಗೆ ರವಾನಿಸಿದ್ದರು ಎನ್ನಲಾಗಿದೆ. ಈ ವರದಿಯಲ್ಲಿ ಟೈಟನ್‌ನ ವಿನ್ಯಾಸ ಮತ್ತು ಆಳವಾದ ನೀರಿನ ತೀವ್ರ ಒತ್ತಡವನ್ನು ತಡೆದುಕೊಳ್ಳುವ ಸಾಮರ್ಥ್ಯದ ವಿಚಾರದಲ್ಲಿ ಲೋಚ್ರಿಡ್ಜ್ ಅವರು ಆತಂಕ ವ್ಯಕ್ತಪಡಿಸಿದ್ದರು. ಈ ವರದಿಯ ಮರುದಿನವೇ ಓಷನ್‌ಗೇಟ್ ಸಂಸ್ಥೆಯು ಸಭೆ ಕರೆದಿತ್ತು. ಸಭೆಯಲ್ಲಿ ಲ್ರೋಚ್ರಿಡ್ಜ್ ಅವರು ಓಷನ್‌ಗೇಟ್‌ನ ವಿನ್ಯಾಸ ನಿರ್ಧಾರಗಳನ್ನು ಸ್ವೀಕರಿಸಲು ಸಾಧ್ಯವಿಲ್ಲ ಮತ್ತು ಹೆಚ್ಚಿನ ಪರೀಕ್ಷೆಯಿಲ್ಲದೆ ಯಾವುದೇ ಸಿಬ್ಬಂದಿ ಪ್ರಯಾಣವನ್ನು ಮುಂದುವರೆಸಲು ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದರು. ಆದರೆ ಅಚ್ಚರಿಯ ರೀತಿ ಎಂಬಂತೆ ಈ ವರದಿ ತಯಾರಿಸಿದ ಲೋಚ್ರಿಡ್ಜ್ ಅವರನ್ನೇ ಕೆಲಸದಿಂದ ತೆಗೆದುಹಾಕಲಾಗಿರುವ ಸಂಗತಿ ಕೂಡ ಇದೀಗ ಬಯಲಾಗಿದೆ. ಆದರೆ ಇದರ ಹೊರತಾಗಿಯೂ ಟೈಟನ್‌ನಲ್ಲಿ ಸುರಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಂಸ್ಥೆ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ. ಅಲ್ಲದೆ ಕಂಪೆನಿಯ ಗೌಪ್ಯ ಮಾಹಿತಿಗಳನ್ನು ಮತ್ತಿಬ್ಬರ ಜೊತೆ ಹಂಚಿಕೊಂಡಿದ್ದಾರೆ ಎಂಬ ಆರೋಪ ಹೊರಿಸಿ, ಓಷನ್‌ಗೇಟ್ ಸಂಸ್ಥೆಯು ಲೋಚ್ರಿಡ್ಜ್ ವಿರುದ್ಧ ಜೂನ್ ಹಾಗೂ ಜುಲೈ ಅವಧಿಯಲ್ಲಿ ಪ್ರಕರಣ ಕೂಡ ದಾಖಲಿಸಿತ್ತು. ಇನ್ನು ವಿಚಾರಣೆಯಲ್ಲಿ ಲೋಚ್ರಿಡ್ಜ್ ತಮ್ಮ ವರದಿಯನ್ನು ಸಮರ್ಥಿಸುತ್ತಾ, ಓಷನ್‌ಗೇಟ್ ಸಂಸ್ಥೆಯು ಗುಣಮಟ್ಟದ ನಿಯಂತ್ರಣ ಸಮಸ್ಯೆಗಳು ಮತ್ತು ಮುಗ್ಧ ಪ್ರಯಾಣಿಕರ ಸುರಕ್ಷತೆಗೆ ಬೆದರಿಕೆ ಹಾಕುವ ಸುರಕ್ಷತಾ ಕಾಳಜಿಗಳ ಬಗ್ಗೆ ಧ್ವನಿ ಎತ್ತುವವರನ್ನು ಇದು ನಿರುತ್ಸಾಹಗೊಳಿಸುವ ಪ್ರಯತ್ನವಾಗಿದೆ ಎಂದು ಪ್ರತಿವಾದಿಸಿದ್ದರು. ಒಂದು ವೇಳೆ ಲೋಚ್ರಿಡ್ಜ್ ಆತಂಕ ವ್ಯಕ್ತಪಡಿಸಿದ್ದ ಸಮಸ್ಯೆಗಳ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತಿದ್ದರೆ ಇಂದು ಈ ರೀತಿಯ ದುರಂತ ಸಂಭವಿಸುತ್ತಿರಲಿಲ್ಲ ಎಂಬ ಮಾತು ಇದೀಗ ಎಲ್ಲೆಡೆ ಕೇಳಿ ಬರುತ್ತಿದೆ.