ಟೆನ್ನಿಸ್ ಬದುಕಿಗೆ ಸೆರೆನಾ ಗುಡ್ ಬೈ

ನ್ಯೂಯಾರ್ಕ್.ಸೆ.೩- ಟೆನ್ನಿಸ್ ಲೋಕದ ಅಗ್ರಮಾನ್ಯ ಆಟಗಾರ್ತಿ ಸರೆನಾ ವಿಲಿಯಮ್ಸ್ ತಮ್ಮ ವೃತ್ತಿ ಬದುಕಿಗೆ ಇಂದು ವಿದಾಯ ಹೇಳಿದ್ದಾರೆ.
೨೪ನೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದ ಸೆರೆನಾ ತವರಿನಲ್ಲಿ ನಡೆಯುತ್ತಿರುವ ಅಮೆರಿಕ ಓಪನ್ ಗ್ರಾಂಡ್‌ಸ್ಲಾಮ್ಟೂ ರ್ನಿಯಲ್ಲಿ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ೩ನೇ ಸುತ್ತಿನಲ್ಲಿ ಆಸ್ಟ್ರೇಲಿಯಾದ ಹಜ್ಲಾ ಟಾಮ್ಲಾ ಜಾನೊವಿಚ್ ವಿರುದ್ಧ ೭-೫, ೬-೭, ೬-೧ ಅಂತರದಿಂದ ಸರೆಲಾ ವಿಲಿಯಮ್ಸ್ ಪರಾಭವಗೊಂಡ ಬೆನ್ನಲ್ಲೆ ಟೆನ್ನಿಸ್ ಬದುಕಿಗೆ ನಿವೃತ್ತಿ ಘೋಷಿಸಿದ್ದಾರೆ.
ಮೊದಲ ಸೆಟ್‌ನಲ್ಲಿ ಸೋತರೂ ೨ನೇ ಸೆಟ್‌ನಲ್ಲಿ ದಿಟ್ಟ ಹೋರಾಟದ ಮೂಲಕ ತಿರುಗೇಟು ನೀಡಿದ್ದಾರೆ.ಆದರೆ,ಅಂತಿಮ ಸೆಟ್‌ನಲ್ಲಿ ಸೆರೆನಾ ವಿಲಿಯಮ್ಸ್ ಯಾವುದೇ ಪ್ರತಿರೋಧ ತೋರದೆ ಸೋಲಿಗೆ ಶರಣಾದರು. ೨೩ ಬಾರಿ ಗ್ರಾಂಡ್‌ಸ್ಲಾಮ್ ಪ್ರಶಸ್ತಿ ಗಳಿಸಿರುವ ಸೆರೆನಾ ಕೆಲ ದಿನಗಳ ಹಿಂದೆ ನಿವೃತ್ತಿ ಘೋಷಿಸುವುದಾಗಿ ಪ್ರಕಟಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದರು. ಈ ವರ್ಷದ ಅಂತಿಮ ಪ್ರಶಸ್ತಿಯ ಬಳಿಕ ಟೆನ್ನಿಸ್ ಬದುಕಿಗೆ ಗುಡ್ ಬೈ ಹೇಳುವುದಾಗಿ ಇನ್ಸ್‌ಸ್ಟ್ರಾಗ್ರಾಂನಲ್ಲಿ ಬರೆದುಕೊಂಡಿದ್ದರು.ಸೆರೆನಾ ಅವರು ಒಟ್ಟು ೬ ಬಾರಿ ಅಮೆರಿಕ ಓಪನ್ ಟೆನ್ನಿಸ್ ಪ್ರಶಸ್ತಿ ಮುಡಿಗೇರಿಸಿದ್ದಾರೆ. ೧೦ ಬಾರಿ ಫೈನಲ್‌ಗೆ ಲಗ್ಗೆ ಹಾಕಿದ್ದಾರೆ. ಇವಿಷ್ಟೇ ಅಲ್ಲದೆ ಆಸ್ಟ್ರೇಲಿಯಾ, ಫ್ರೆಂಚ್, ವಿಂಬಲ್ಡನ್ ಹಾಗೂ ಅಮೆರಿಕನ್ ಓಪನ್ ಟೆನ್ನಿಸ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.
೨೦೨೧ರ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಆಡಿದ್ದ ಸೆರೆನಾ ತಮ್ಮ ಹಳೆಯ ಶೈಲಿಯ ಆಟಕ್ಕೆ ಮರಳಲು ಅವರಿಗೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಟೆನ್ನಿಸ್‌ನಿಂದ ನಿವೃತ್ತಿಯಾಗುವುದಾಗಿ ಪ್ರಕಟಿಸಿದ್ದಾರೆ.
೧೯೯೫ರಲ್ಲಿ ೧೪ ವರ್ಷದವರಾಗಿದ್ದಾಗಲೇ ಟೆನ್ನಿಸ್ ಬದುಕಿಗೆ ಕಾಲಿಟ್ಟ ಸೆರೆನಾ, ೯೯ರಲ್ಲಿ ಮೊದಲ ಟೆನ್ನಿಸ್ ಪ್ರಶಸ್ತಿ ಗೆದ್ದಿದ್ದರು. ಇದಾದ ಬಳಿಕ ವನಿತೆಯರ ವಿಭಾಗದಲ್ಲಿ ಅದಿಪತ್ಯ ಸಾಧಿಸಿದ್ದರು. ೨೦೧೨ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಸೆರೆನಾ ಮಹಿಳಾ ವಿಭಾಗದಲ್ಲಿ ಸ್ವರ್ಣ ಪದಕ ಗೆದ್ದುಕೊಂಡಿದ್ದರು.
ಪಂದ್ಯ ಮುಗಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ. ಇಷ್ಟು ವರ್ಷ ತಮ್ಮನ್ನು ಬೆಂಬಲಿಸಿದ್ದಕ್ಕಾಗಿ ಟೆನ್ನಿಸ್ ಆಡಲು ಸಾಧ್ಯವಾಯಿತು ಎಂದು ಹೇಳುವಾಗ ಕಣ್ಣಾಲೆಗಳಲ್ಲಿ ನೀರು ತುಂಬಿಕೊಂಡಿತು.