ಟೆನಿಸ್‍ಬಾಲ್ ಕ್ರಿಕೆಟ್ ಪಂದ್ಯಾವಳಿ

ಗದಗ,ಏ26: ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ (ಸ್ವೀಪ್) ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲಿಕರಣ ಕ್ರೀಡಾ ಇಲಾಖೆ ವತಿಯಿಂದ ಮಾಧ್ಯಮ ಬಳಗ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಿಬ್ಬಂದಿಗಳ ನಡುವೆ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯು ನಡೆಯಿತು.
ನಗರದ ವಿ.ಡಿ.ಎಸ್. ಮೈದಾನದಲ್ಲಿ ನಡೆದ ಪಂದ್ಯಾವಳಿಯಲ್ಲಿ ಮಾಧ್ಯಮ ಮತ್ತು ಶಾಲಾ ಶಿಕ್ಷಣ ಇಲಾಖೆ ಸಿಬ್ಬಂದಿಯವರು ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಆಡಿದರು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ತಂಡ ಗೆಲುವು ಸಾಧಿಸಿತು.
ಮೊದಲು ಬ್ಯಾಟ್ ಮಾಡಿದ ಮಾಧ್ಯಮ ತಂಡ 10 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 80 ರನ್ ಗಳಿಸಿದರು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ತಂಡದವರು 6 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 80 ರನ್‍ಗಳ ಗುರಿಯನ್ನು ದಾಟುವ ಮೂಲಕ 10 ವಿಕೆಟ್‍ಗಳ ರೋಚಕ ಗೆಲುವು ಸಾಧಿಸಿತು.
ಸ್ವೀಪ್ ಸಮಿತಿ ವತಿಯಿಂದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕ್ರಿಕೆಟ್ ಪಂದ್ಯ ಆಡುವ ಮೂಲಕ ಮಾಧ್ಯಮದವರು ಕೂಡ ಮತದಾನ ಜಾಗೃತಿ ಮೂಡಿಸಿದರು. ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಿ ಎಂದು ಮನವಿ ಮಾಡಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ರವಿ ಗುಂಜೀಕರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶರಣು ಗೋಗೇರಿ, ಶಿಕ್ಷಣ ಇಲಾಖೆ ಮತ್ತು ಸಾಕ್ಷರತಾ ಇಲಾಖೆ ಸಿಬ್ಬಂದಿ ಇದ್ದರು.
ಇದೇ 28 ರಂದು ಬೆಳಗ್ಗೆ 7 ಗಂಟೆಗೆ ಅಂತಿಮ ಕ್ರಿಕೆಟ್ ಪಂದ್ಯಾವಳಿಯು ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆ ಹಾಗೂ ಆರೊಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಡುವೆ ನಗರದ ವಿ.ಡಿ.ಎಸ್. ಮೈದಾನದಲ್ಲಿ ನಡೆಯಲಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶರಣು ಗೋಗೇರಿ ಅವರು ತಿಳಿಸಿದ್ದಾರೆ.