ಟೆಕ್ಸಾಸ್‌ನಲ್ಲಿ ೧೦ ಸಾವಿರ ಭಕ್ತರಿಂದ ಭಗವದ್ಗೀತೆ ಪಠಣೆ

ಟೆಕ್ಸಾಸ್ (ಅಮೆರಿಕಾ), ಜು.೪- ಜುಲೈ ೩ರಂದು ವಿಶ್ವದೆಲ್ಲೆಡೆ ನೆಲೆಸಿರುವ ಭಾರತೀಯರು ಸಂಭ್ರಮದಿಂದ ಗುರುಪೂರ್ಣಿಮೆ ಹಬ್ಬವನ್ನು ಆಚರಿಸಿದ್ದು, ಈ ನಡುವೆ ದೂರದ ಟೆಕ್ಸಾಸ್‌ನಲ್ಲಿರುವ ಅಲೆನ್ ಈಸ್ಟ್ ಸೆಂಟರ್‌ನಲ್ಲಿ ೧೦ ಸಾವಿರಕ್ಕೂ ಅಧಿಕ ಭಕ್ತರು ಭಗವದ್ಗೀತಾ ಪಾರಾಯಣ ಯಜ್ಞದಲ್ಲಿ ತೊಡಗಿಕೊಳ್ಳುವ ಮೂಲಕ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ.
ಯೋಗ ಸಂಗೀತಾ ಟ್ರಸ್ಟ್ ಅಮೇರಿಕಾ ಮತ್ತು ಎಸ್‌ಜಿಎಸ್ ಗೀತಾ ಫೌಂಡೇಶನ್ ವತಿಯಿಂದ ಈ ಬೃಹತ್ ಭಗವದ್ಗೀತಾ ಪಾರಾಯಣ ಯಜ್ಞ ಆಯೋಜಿಸಲಾಗಿದ್ದು, ಇದೇ ಮೊದಲ ಬಾರಿಗೆ ಅಮೆರಿಕಾದಲ್ಲಿ ಈ ರೀತಿಯ ಕಾರ್ಯಕ್ರಮ ಆಯೋಜಿಸಲಾಗಿದೆ ಎನ್ನಲಾಗಿದೆ. ಇನ್ನು ಈ ಕಾರ್ಯಕ್ರಮದ ವೈಭವ ಕೇವಲ ಸ್ಥಳಕ್ಕೆ ಸೀಮಿತವಾಗಿರಲಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿರುವ ಒಂದು ನಿಮಿಷ ಹಾಗೂ ಮೂವತ್ತು ಸೆಕೆಂಡ್‌ಗಳ ವಿಡಿಯೋದಲ್ಲಿ ಮಕ್ಕಳು ಮತ್ತು ವಯಸ್ಕರು ಸಕ್ರಿಯವಾಗಿ ಭಾಗವಹಿಸಿ ಸುಮಾರು ೧೦ ಸಾವಿರಕ್ಕೂ ಮಿಕ್ಕಿದ ಭಕ್ತರು ಭಗವದ್ಗೀತಾ ಪಾರಾಯಣಲ್ಲಿ ತೊಡಗಿರುವುದು ಗಮನ ಸೆಳೆದಿದೆ. ಇನ್ನು ಗುರು ಪೂರ್ಣಿಮೆಯು ಹಿಂದೂ, ಬೌದ್ಧ ಮತ್ತು ಜೈನ ಧರ್ಮಗಳಲ್ಲಿ ಆಧ್ಯಾತ್ಮಿಕ ಮತ್ತು ಶೈಕ್ಷಣಿಕ ಶಿಕ್ಷಕರಿಗೆ ಗೌರವ ಸಲ್ಲಿಸುವ ಅತ್ಯಂತ ಗೌರವಾನ್ವಿತ ಹಬ್ಬವಾಗಿದ್ದು, ಭಾರತ, ನೇಪಾಳ ಸೇರಿದಂತೆ ವಿಶ್ವದೆಲ್ಲೆಡೆ ನೆಲೆಸಿರುವ ಭಕ್ತರು ಸಡಗರದಿಂದ ಆಚರಿಸುತ್ತಾರೆ.